ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಹೈಕೋರ್ಟ್ ಕಲಾಪ ಬಹಿಷ್ಕರಿಸಿದ ವಕೀಲರು
ರಾಜ್ಯದ ನಾಲ್ವರು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾಡಿರುವ ಶಿಫಾರಸ್ಸು ವಿರೋಧಿಸಿ ಬುಧವಾರ ಹೈಕೋರ್ಟ್‌ನ ಕಲಾಪವನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲ ನಿರ್ಧಾರ ಕೈಗೊಳ್ಳಲಾಗಿತ್ತು.;
ಬೆಂಗಳೂರು ವಕೀಲರ ಸಂಘ
ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಬೆಂಗಳೂರು ವಕೀಲರ ಸಂಘ ಕರ್ನಾಟಕ ಹೈಕೋರ್ಟ್‌ನ ಇಂದಿನ ಕಲಾಪ ಬಹಿಷ್ಕಾರಿಸಿದ್ದಾರೆ. ಬಹುತೇಕ ಕೋರ್ಟ್‌ಗಳು ಬುಧವಾರ ವಕೀಲರು ಇಲ್ಲದೆ ಬಣಗುಡುತ್ತಿತ್ತು.
ಕರ್ನಾಟಕ ಹೈಕೋರ್ಟ್ ನಾಲ್ವರು ನ್ಯಾಯಮೂರ್ತಿಗಳಾದ ಕೆ.ನಟರಾಜನ್, ಹೇಮಂತ ಚಂದನ ಗೌಡರ್, ಎನ್.ಎಸ್.ಸಂಜಯಗೌಡ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಮಾಡಿರುವ ಶಿಫಾರಸು ವಿರೋಧಿಸಿ ಬುಧವಾರ ಹೈಕೋರ್ಟ್‌ನ ಕಲಾಪ ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟ ಸುಧಾರಿಸಲು ಹಾಗೂ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಏಪ್ರಿಲ್ 15ಮತ್ತು 19ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ಒಡಿಶಾ, ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನು ಕೇರಳ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರನ್ನು ಗುಜರಾತ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿತ್ತು.
ಇದಕ್ಕೆ ತೀವ್ರ ವ್ಯಕ್ತಪಡಿಸಿದ್ದ ಬೆಂಗಳೂರು ವಕೀಲರ ಸಂಘ, ವಕೀಲರ ಕಳಕಳಿಗೆ ಸ್ಪಂದಿಸದೇ ಮತ್ತು ಅಪಾರದರ್ಶಕತೆಯಿಂದ ವರ್ಗಾವಣೆ ಮಾಡಲಾಗಿದೆ ಆಕ್ಷೇಪಿಸಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಕರ್ನಾಟಕದ ನ್ಯಾಯಾಂಗವನ್ನು ಪದೇಪದೇ ಉಪೇಕ್ಷೆಯಿಂದ ಕಾಣಲಾಗುತ್ತಿದೆ ಎಂದು ಎಎಬಿ ಆಕ್ಷೇಪಿಸಿದೆ. ಯೋಜಿತ ಕಲಾಪ ಬಹಿಷ್ಕಾರದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಿ ಮಾಡಿರುವ ಪ್ರಕರಣಗಳನ್ನು ಗುರುವಾರ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಎಎಬಿ ಒತ್ತಾಯಿಸಿದೆ.