ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ, ಈಶ್ವರಪ್ಪ ಸೇರಿ ನಾಲ್ವರ ಭದ್ರತೆ ಕಡಿತ
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರಿಗೆ ನೀಡಿದ್ದ ಭದ್ರತೆಯನ್ನು ಸಂಪೂರ್ಣ ಹಿಂಪಡೆದರೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಒದಗಿಸಲಾಗಿದೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸೇರಿ ನಾಲ್ವರಿಗೆ ಒದಗಿಸಿದ್ದ ʼಎಕ್ಸ್ʼ ಶ್ರೇಣಿಯ ಭದ್ರತೆಯನ್ನು ರಾಜ್ಯ ಸರ್ಕಾರ ಶುಕ್ರವಾರ ಪರಿಷ್ಕರಣೆ ಮಾಡಿದೆ.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರಿಗೆ ನೀಡಿದ್ದ ಭದ್ರತೆಯನ್ನು ಸಂಪೂರ್ಣ ಹಿಂಪಡೆದರೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಒದಗಿಸಲಾಗಿದೆ.
ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಒದಗಿಸಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಅವರಿಗೆ ಸದ್ಯ ಒಬ್ಬರು ಅಂಗರಕ್ಷಕರು, ಮೂವರು ಬೆಂಗಾವಲು ಸಿಬ್ಬಂದಿಯಷ್ಟೇ ಇರಲಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಪದೇ ಪದೇ ಟೀಕೆ, ಆರೋಪಗಳ ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದರು.
ಬಿಜೆಪಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇಬ್ಬರು ಅಂಗರಕ್ಷಕರು ಹೊರತುಪಡಿಸಿದರೆ ಬೆಂಗಾವಲು ಪಡೆಯ ಮೂವರು ಹಾಗೂ ನಿವಾಸದ ಮೂವರು ಸಿಬ್ಬಂದಿಯನ್ನು ವಾಪಸ್ ಪಡೆಯಲಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟಕ್ಕೆ ಸಿಎಂ ಬೆಂಬಲ ನೀಡುವರೋ, ಇಲ್ಲವೋ ಎಂಬುದನ್ನು ಸಾಬೀತು ಮಾಡಬೇಕು ಎಂದು ಶುಕ್ರವಾರವಷ್ಟೇ ಹೇಳಿದ್ದರು.
ಬಿದರಿಗೆ ಭದ್ರತೆ ಇಲ್ಲ
ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರಿಗೆ ನೀಡಿದ್ದ ಎಲ್ಲಾ ರೀತಿಯ ಭದ್ರತೆಯನ್ನು ಹಿಂಪಡೆಯಲಾಗಿದೆ. ಪ್ರಸ್ತುತ, ಅವರಿಗೆ ಇಬ್ಬರು ಅಂಗರಕ್ಷಕರು ಹಾಗೂ ಇಬ್ಬರು ಬೆಂಗಾವಲು ವಾಹನ ಸಿಬ್ಬಂದಿ ಮಾತ್ರ ಇದ್ದರು. ಈಗ ಎಲ್ಲವನ್ನೂ ಹಿಂಪಡೆಯಲಾಗಿದೆ.
ಈ ಹಿಂದೆ ಬಿದರಿ ಅವರಿಗೆ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಬಳಿಕ ಅದನ್ನು 'ಎಕ್ಸ್' ಶ್ರೇಣಿಗೆ ಇಳಿಸಲಾಗಿತ್ತು.
ಆಯುರ್ ಆಶ್ರಮ ಸಂತೋಷ್ ಗುರೂಜಿ ಅವರಿಗೂ ನೀಡಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಗುರೂಜಿಗೆ ಒಬ್ಬರು ಅಂಗರಕ್ಷಕರು ಹಾಗೂ ಮೂವರು ಭದ್ರತಾ ಸಿಬ್ಬಂದಿ ನೀಡಲಾಗಿತ್ತು. ಈಗ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆಯಲಾಗಿದೆ.