ರಾಜ್ಯದಲ್ಲಿ ರಚನೆಯಾಗಲಿದೆ ಡೆಂಟಲ್ ಕೌನ್ಸಿಲ್: ಸಚಿವ ಡಾ. ಶರಣಪ್ರಕಾಶ್ ಪಾಟೀಲ್

ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಡಾ. ಎಸ್. ರಾಮಚಂದ್ರ ಆಡಿಟೋರಿಯಂನಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಆಯೋಜಿಸಿದ್ದ 'ಡೆಂಟಿಸ್ಟ್ ಶೃಂಗಸಭೆ-2025'ರಲ್ಲಿ ಅವರು ಮಾಹಿತಿ ನೀಡಿದರು;

Update: 2025-08-30 13:06 GMT

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌

ರಾಜ್ಯದಲ್ಲಿ ದಂತ ವೈದ್ಯಕೀಯ ಸೇವೆಗಳನ್ನು ಬಲಪಡಿಸುವ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿ, ರಾಷ್ಟ್ರೀಯ ದಂತ ಆಯೋಗದ (National Dental Commission) ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ "ಹೊಸ ಡೆಂಟಲ್ ಕೌನ್ಸಿಲ್" ರಚಿಸಲು ರಾಜ್ಯ ಸರ್ಕಾರವು ಗಂಭೀರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ. .

ನಗರದ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಡಾ. ಎಸ್. ರಾಮಚಂದ್ರ ಆಡಿಟೋರಿಯಂನಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಆಯೋಜಿಸಿದ್ದ 'ಡೆಂಟಿಸ್ಟ್ ಶೃಂಗಸಭೆ-2025'ರಲ್ಲಿ ಮಾತನಾಡಿದ ಅವರು, ಈ ಮಹತ್ವದ ಯೋಜನೆಯನ್ನು ಪ್ರಕಟಿಸಿದರು.

ದಂತ ವೈದ್ಯಕೀಯ ಕ್ಷೇತ್ರದ ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಸ್ತೃತವಾಗಿ ಮಾತನಾಡಿದ ಸಚಿವರು, "ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯುತ್ತಮ ಭವಿಷ್ಯವಿದೆ. ಆದರೆ ಈ ಸೇವೆಗಳು ನಗರ, ಜಿಲ್ಲಾ, ಮತ್ತು ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದು, ಗ್ರಾಮೀಣ ಭಾಗಗಳಿಗೆ ಅದರಲ್ಲೂ ಹಳ್ಳಿಗಳಿಗೆ ತಲುಪದಿರುವುದು ದೊಡ್ಡ ಆತಂಕದ ವಿಷಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಿದೆ. ಇದರ ಭಾಗವಾಗಿ, ಹೊಸ ಡೆಂಟಲ್ ಕೌನ್ಸಿಲ್ ರಚಿಸುವ ಮೂಲಕ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲು ನಾವು ಉದ್ದೇಶಿಸಿದ್ದೇವೆ" ಎಂದು ಹೇಳಿದರು.

ಜಾಗೃತಿ ಹೆಚ್ಚಲಿ ಎಂದ ಸಚಿವರು

ದಂತವೈದ್ಯಕೀಯವು ಅತ್ಯಂತ ಸೂಕ್ಷ್ಮ ಮತ್ತು ಹೆಚ್ಚಿನ ನಿಖರತೆಯನ್ನು ಬಯಸುವ ವಿಷಯವಾಗಿದೆ ಎಂದು ಒತ್ತಿ ಹೇಳಿದ ಅವರು, "ಹಲ್ಲು ನೋವಿನ ಯಾತನೆ ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ. ಇದಕ್ಕೆ ಚಿಕಿತ್ಸೆ ನೀಡುವ ದಂತ ವೈದ್ಯರ ಸೇವೆ ಸ್ಮರಣೀಯ. ಹಲ್ಲು ಮತ್ತು ಒಸಡಿನ ಆರೋಗ್ಯದ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ದಂತ ವೈದ್ಯಕೀಯ ಸೇವೆಯನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯಬೇಕಾಗಿದೆ" ಎಂದು ಕರೆ ನೀಡಿದರು.

ವಿಶೇಷವಾಗಿ ಯುವ ದಂತ ವೈದ್ಯರ ಮೇಲೆ ಈ ಜವಾಬ್ದಾರಿ ಹೆಚ್ಚಾಗಿದೆ ಎಂದು ಸಚಿವರು ಸಲಹೆ ನೀಡಿದರು. "ಕಾಲೇಜಿನಿಂದ ಇದೀಗ ತಾನೇ ದಂತ ವೈದ್ಯ ಎಂಬ ಪದವಿ ಪಡೆದು ಹೊರಬರುತ್ತಿರುವ ಯುವಕರು, ಸಮಾಜದ ಎಲ್ಲ ವರ್ಗದ ಜನರಿಗೆ ಈ ಸೇವೆಯನ್ನು ತಲುಪಿಸಲು ಮುಂದಾಗಬೇಕು. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು," ಎಂದು ಅವರು ವಿವರಿಸಿದರು.

108 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭ ಉದ್ಘಾಟನೆ

ಇದೇ ಸಂದರ್ಭದಲ್ಲಿ ಸಚಿವರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 108 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭವನ್ನು ಉದ್ಘಾಟಿಸಿದರು. 1986ನೇ ಬ್ಯಾಚ್‌ನ ವಿದ್ಯಾರ್ಥಿಗಳ ಕೊಡುಗೆಯಾಗಿರುವ ಈ ಧ್ವಜಸ್ತಂಭವು, ದಕ್ಷಿಣ ಭಾರತದ ವೈದ್ಯಕೀಯ ಕಾಲೇಜುಗಳಲ್ಲೇ ಅತ್ಯಂತ ಎತ್ತರದ್ದಾಗಿದೆ. 2025ಕ್ಕೆ 125 ವರ್ಷಗಳನ್ನು ಪೂರೈಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ದಶಕಗಳ ಸೇವೆಗೆ ಇದು ಗೌರವವಾಗಿದೆ. ಇದರೊಂದಿಗೆ, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೂರು ಹೊಸ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳನ್ನೂ ಸಚಿವರು ಉದ್ಘಾಟಿಸಿದರು.

ಈ ಕಾರ್ಯಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಿ ಡಾ. ಎಸ್.ಟಿ. ಕಾವ್ಯ, ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಗಿರೀಶ್ ಗಿರಡ್ಡಿ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ದೀಪಕ್ ಮತ್ತು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Similar News