Karnataka Doctors Protest: ವೈದ್ಯರ ಪ್ರತಿಭಟನೆ, ಒಪಿಡಿ ಸೇವೆ ಬಂದ್
ಹೊರರೋಗಿ ಸೇವೆ ವಿಭಾಗ (ಒಪಿಡಿ) ಲಭ್ಯವಿರುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಿರಲಿದೆ.
ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಮತ್ತು ವೈದ್ಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದ್ದು, ಹೊರರೋಗಿ ಸೇವೆ ವಿಭಾಗ (ಒಪಿಡಿ) ಲಭ್ಯವಿರುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಿರಲಿದೆ.
ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದು, ಒಪಿಡಿ ಸೇವೆ ಬಂದ್ ಆಗಿದೆ. ಎಮರ್ಜೆನ್ಸಿ ಸೇವೆ, ಮೆಡಿಕಲ್ ಶಾಪ್ಸ್, ಇನ್ ಪೇಷೆಂಟ್ ಸೇವೆ, ಹೆರಿಗೆ, ಎಮರ್ಜೆನ್ಸಿ ಸರ್ಜರಿ ಸೇವೆಗಳನ್ನು ಒದಗಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ವಿಜಯಪುರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯ
ಐಎಂಎ ಅಧ್ಯಕ್ಷ ಡಾ. ರವಿ ಬಿರಾದಾರ್ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲೆಯ 734 ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಆಗಿದೆ.
ಬೆಂಗಳೂರಿನಲ್ಲಿ ರೋಗಿಗಳಿಗೆ ತಟ್ಟಿದ ವೈದ್ಯರ ಪ್ರತಿಭಟನೆ ಬಿಸಿ
ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಡಯಾಲಿಸಿಸ್ಗಾಗಿ ಬಂದಿದ್ದ ಹಲವು ರೋಗಿಗಳು ವಾಪಸ್ ಆಗುತ್ತಿದ್ದಾರೆ. ಗೊರವನಹಳ್ಳಿ, ಹನುಮಂತನಗರದಿಂದ ಬಂದಿದ್ದ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಸಿಗದೆ ವಾಪಸ್ ತೆರಳ್ತಿದ್ದಾರೆ. ಚಿಕಿತ್ಸೆ ಸಿಗದ ಹಿನ್ನೆಲೆ ಬೇಸರ ಹೊರಹಾಕಿದ್ದಾರೆ.
ಇಂದು ಸರ್ಕಾರಿ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಆದೇಶ
ಇಂದು ವೈದ್ಯರ ಪ್ರತಿಭಟನೆ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಕರ್ನಾಟಕ ಸರ್ಕಾರಿ ವೈದ್ಯರಿಗೆ ಇಂದಿನ ರಜೆ ಮಂಜೂರು ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.