ವಿಧಾನಸಭೆಯಲ್ಲಿ ಮೊಳಗಿದ ಆರ್​ಎಸ್​​ಎಸ್​​ ಗೀತೆ: 'ನಮಸ್ತೆ ಸದಾ ವತ್ಸಲೇ' ಎಂದ ಡಿ.ಕೆ. ಶಿವಕುಮಾರ್!

ಸದನದನಲ್ಲಿ ಮನೋರಂಜನೆಗಾಗಿ 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಹಾಡಿನ ಸಾಲನ್ನು ಡಿಕೆಶಿ ಹಾಡಿದರು.ಇದಕ್ಕೆ ವಿರೋಧ ಪಕ್ಷವು ಮೇಜು ಬಡಿದು ಗೀತೆಯನ್ನು ಸ್ವಾಗತಿಸಿತು, ಆದರೆ ಕಾಂಗ್ರೆಸ್ ಪಾಳಯದಲ್ಲಿ ಸಂಪೂರ್ಣ ಮೌನವಿತ್ತು.;

Update: 2025-08-22 11:08 GMT

ಡಿ.ಕೆ ಶಿವಕುಮಾರ್‌

ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಅಭೂತಪೂರ್ವ ಘಟನೆಯೊಂದು ನಡೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​​ನ) 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಪ್ರಾರ್ಥನಾ ಗೀತೆಯ ಕೆಲವು ಸಾಲುಗಳನ್ನು ಹಾಡಿ, ಆಡಳಿತ ಹಾಗೂ ವಿಪಕ್ಷಗಳೆರಡನ್ನೂ ಅಚ್ಚರಿಗೊಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕುರಿತ ಚರ್ಚೆಯು ತಾರಕಕ್ಕೇರಿದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ಆರೋಪ-ಪ್ರತ್ಯಾರೋಪಗಳ ನಡುವೆ ಗೀತೆ ಹಾಡಿದ ಡಿಕೆಶಿ

ಚರ್ಚೆಯ ವೇಳೆ, ಬಿಜೆಪಿ ಶಾಸಕರು ಕಾಲ್ತುಳಿತ ದುರಂತಕ್ಕೆ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ನೇರ ಆರೋಪ ಮಾಡಿದರು. "ಆರ್​ಸಿಬಿ ತಂಡವು ವಿಮಾನ ನಿಲ್ದಾಣಕ್ಕೆ ಬಂದಾಗ, ಡಿಕೆಶಿ ಅವರನ್ನು ಸ್ವಾಗತಿಸಿ, ಕನ್ನಡ ಧ್ವಜವನ್ನು ಹಿಡಿದು ಜನಸಮೂಹವನ್ನು ಪ್ರಚೋದಿಸಿದರು. ಇದರಿಂದಾಗಿಯೇ ದುರಂತ ಸಂಭವಿಸಿತು," ಎಂದು ಬಿಜೆಪಿ ಶಾಸಕರು ದೂರಿದ್ದರು.

ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, "ನಾನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್​​ಸಿಎ) ಸದಸ್ಯ ಮತ್ತು ಬೆಂಗಳೂರು ನಗರದ ಉಸ್ತುವಾರಿ ಸಚಿವ. ಆರ್​​ಸಿಬಿ ತಂಡವನ್ನು ಸ್ವಾಗತಿಸಿ, ಟ್ರೋಫಿಯನ್ನು ಮುದ್ದಿಸಿ, ಶುಭ ಹಾರೈಸಿದ್ದು ನನ್ನ ಕರ್ತವ್ಯ. ಒಂದು ಅಪಘಾತ ನಡೆದಿದೆ. ಇಂತಹ ಘಟನೆಗಳು ಬೇರೆ ರಾಜ್ಯಗಳಲ್ಲೂ ನಡೆದಿವೆ. ಬೇಕಿದ್ದರೆ, ಆ ಪಟ್ಟಿಯನ್ನೇ ನಾನು ಓದುತ್ತೇನೆ. ನಿಮ್ಮ ಬಗ್ಗೆ ಹೇಳುವುದಕ್ಕೂ ನನ್ನ ಬಳಿ ಹಲವು ವಿಷಯಗಳಿವೆ," ಎಂದು ತಿರುಗೇಟು ನೀಡಿದರು.

'ಆರ್​​ಎಸ್​​ಎಸ್​​ ಚಡ್ಡಿ' ಪ್ರಸ್ತಾಪಕ್ಕೆ ಗೀತೆಯ ಉತ್ತರ

ಚರ್ಚೆಯ ಮಧ್ಯೆ, ತಾವು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಜೊತೆ ಬೆಳೆದವನು ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, "ಹೌದು, ಒಮ್ಮೆ ನೀವೇ 'ಆರ್​​ಎಸ್​​ಎಸ್​​​ ಚಡ್ಡಿ' ಧರಿಸಿದ್ದಾಗಿ ಹೇಳಿದ್ದಿರಿ," ಎಂದು ನೆನಪಿಸಿದರು.

ಈ ಮಾತಿನಿಂದ ಕೆರಳದೆ, ಸದನಕ್ಕೆ ಮನರಂಜನೆ ನೀಡುವ ದೃಷ್ಟಿಯಿಂದ ಎಂದು ಹೇಳಿದ ಡಿ.ಕೆ. ಶಿವಕುಮಾರ್, 'ನಮಸ್ತೆ ಸದಾ ವತ್ಸಲೆ ಮಾತೃಭೂಮಿ' ಗೀತೆಯ ಮೊದಲ ಕೆಲವು ಸಾಲುಗಳನ್ನು ಹಾಡಿದರು.

ವಿಪಕ್ಷದಿಂದ ಸ್ವಾಗತ, ಆಡಳಿತ ಪಕ್ಷದಲ್ಲಿ ಮೌನ

ಡಿ.ಕೆ. ಶಿವಕುಮಾರ್ ಅವರು ಗೀತೆ ಹಾಡುತ್ತಿದ್ದಂತೆ, ವಿರೋಧ ಪಕ್ಷದ ಬಿಜೆಪಿ ಸದಸ್ಯರು ಮೇಜುಕುಟ್ಟಿ, ಹರ್ಷೋದ್ಗಾರದೊಂದಿಗೆ ಅದನ್ನು ಸ್ವಾಗತಿಸಿದರು. ಆದರೆ, ಆಡಳಿತ ಪಕ್ಷವಾದ ಕಾಂಗ್ರೆಸ್ ಪಾಳಯದಲ್ಲಿ ಸಂಪೂರ್ಣ ಮೌನ ಆವರಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, "ಈ ಸಾಲುಗಳನ್ನು ಸದನದ ಕಡತಗಳಿಂದ ತೆಗೆದುಹಾಕುವುದಿಲ್ಲ ಎಂದು ಭಾವಿಸುತ್ತೇವೆ," ಎಂದು ವ್ಯಂಗ್ಯವಾಡಿದರು. ಈ ಅನಿರೀಕ್ಷಿತ ಘಟನೆಯು ಸದನದಲ್ಲಿ ಕೆಲಕಾಲ ರಾಜಕೀಯ ವಿಮರ್ಶೆ ಮತ್ತು ಚರ್ಚೆಗೆ ಗ್ರಾಸವಾಯಿತು.

Tags:    

Similar News