Menstrual Leave | 6 ದಿನ ವೇತನ ಸಹಿತ ಮುಟ್ಟಿನ ರಜೆ; ಸಲಹೆಗಳಿಗೆ ಆಹ್ವಾನ

ವೇತನಸಹಿತ ಮುಟ್ಟಿನ ರಜೆ ನೀಡುವ ನೀತಿ ಕುರಿತಂತೆ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಗಳು ಮತ್ತು ಸಾರ್ವಜನಿಕರಿಂದ ಸಲಹೆ- ಸೂಚನೆ- ಆಕ್ಷೇಪಣೆ- ಅಭಿಪ್ರಾಯಗಳನ್ನು ಕೇಳಲಾಗಿದ್ದು, ಸಲಹೆ ನೀಡಲು ಒಂದು ತಿಂಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ.;

Update: 2024-11-27 08:04 GMT
6 ದಿನ ಮುಟ್ಟಿನ ರಜೆಗೆ ಸಲಹೆಗಳನ್ನು ಸರ್ಕಾರ ಆಹ್ವಾನಿಸಿದೆ.
Click the Play button to listen to article

ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ನೀತಿಯ ಕುರಿತಂತೆ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಗಳು ಮತ್ತು ಸಾರ್ವಜನಿಕರಿಂದ ಸಲಹೆ- ಸೂಚನೆ- ಆಕ್ಷೇಪಣೆ- ಅಭಿಪ್ರಾಯಗಳನ್ನು ಕೇಳಲಾಗಿದ್ದು, ಸಲಹೆಗಳನ್ನು ನೀಡಲು ಸರ್ಕಾರ ಒಂದು ತಿಂಗಳ ಕಾಲಾವಕಾಶ ನೀಡಿದೆ. 

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಆಡಳಿತ ವರ್ಗಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಲಗತ್ತಿಸಿರುವ ನಮೂನೆಯಲ್ಲಿ ಭರ್ತಿಮಾಡಿ ವೆಬ್‍ಸೈಟ್‍ನಲ್ಲಿ ಅಳವಡಿಸಲಾದ ನಮೂನೆಯಲ್ಲಿ dicbangalore@gmail.com ಗೆ 30 ದಿನಗಳೊಳಗಾಗಿ ಕಳುಹಿಸಬೇಕೆಂದು ಕಾರ್ಮಿಕ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ನೀತಿ ರೂಪಿಸುವ ಸಂಬಂಧ ಮುಟ್ಟಿನ ರಜೆ ಸಾದ್ಯಾಸಾಧ್ಯತೆ ಪರಿಶೀಲಿಸಲು ಕ್ರೈಸ್ಟ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಲಾ, ಪ್ರೊಫೆಸರ್ ಹಾಗೂ ಎಚ್‌ಓಡಿ ಡಾ.ಸಪ್ನ ಮೋಹನ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು, ಕೈಗಾರಿಕೆಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪೆನಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರಿಗೆ ಅವರ ಋತುಚಕ್ರದ ಕಾಲಕ್ಕೆ ಬಳಸಿಕೊಳ್ಳಲು ವಾರ್ಷಿಕ 6 ಋತುಸ್ರಾವ ರಜೆಗಳನ್ನು ಶಿಫಾರಸ್ಸು ಮಾಡಿದ್ದು, ಈ ನಿಮಿತ್ತ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ವೇತನ ಸಹಿತ ಋತುಸ್ರಾವ ರಜೆ ಮಂಜೂರು ಮಾಡುವ ಕುರಿತು ವಿವಿಧ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಆಡಳಿತ ವರ್ಗದವರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲು ಈಗಾಗಲೇ ಕಾರ್ಮಿಕ ಇಲಾಖೆಯ https://karmikaspandana.karnataka.gov.in ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ https://esuraksha.karnataka.gov.in ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ https://ksuwssb.karnataka.gov.in ವೆಬ್‍ಸೈಟ್‍ಗಳಲ್ಲಿ ಈ ಬಗ್ಗೆ ಪ್ರಕಟಣೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಮುಟ್ಟಿನ ರಜೆ ನೀತಿಯನ್ನು ಅನುಷ್ಠಾನಗೊಳಿಸಿವೆ.

Tags:    

Similar News