Cabinet Decision | ಕೋವಿಡ್​ ಹಗರಣದ ತನಿಖೆಗೆ ಎಸ್ಐಟಿ ರಚಿಸಲು ಸಂಪುಟ ನಿರ್ಧಾರ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ನಡೆದಿದ್ದ ಕೋವಿಡ್ ಹಗರಣ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.;

Update: 2024-11-14 11:36 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರವಧಿಯಲ್ಲಿ ನಡೆದಿದ್ದ ಕೋವಿಡ್ ಸಂಬಂಧಿತ ಎಲ್ಲಾ ಹಗರಣಗಳ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಸ್ಐಟಿ ರಚನೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್‌ ಹಗರಣದ ಕುರಿತು ರಚಿಸಿದ್ದ ‌ನಿವೃತ್ತ ನ್ಯಾಯಾಧೀಶ ಮೈಕೆಲ್‌ ಡಿ ಕುನ್ಹಾ ಆಯೋಗ ತನ್ನ ಮಧ್ಯಂತರ ವರದಿಯ ಸಲ್ಲಿಸಿ ಹಗರಣದಲ್ಲಿ ಸುಮಾರು 918  ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಹೇಳಿತ್ತು.

ಇದೀಗ ಗುರುವಾರ(ನ.14) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆ ಮಧ್ಯಂತರ ವರದಿಯ ಕುರಿತು ಚರ್ಚೆ ನಡೆಸಿ, ಹಗರಣದ ಕುರಿತು ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಲಾಗಿದೆ. ಹಗರಣದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಹಾಲಿ ಸಂಸದ ಡಾ ಕೆ ಸುಧಾಕರ್‌ ಅವರಿಗೆ ಸಂಪುಟದ ಈ ತೀರ್ಮಾನ ಸಂಕಷ್ಟ ತರುವ ಸಾಧ್ಯತೆಗಳಿವೆ.

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್​ ಕೆ ಪಾಟೀಲ್, ಕೊವಿಡ್​ ವೇಳೆ ಕಿಟ್, ಔಷಧಿ ಖರೀದಿ ಸೇರಿದಂತೆ ಹಲವು ಔಷಧ, ಕೋವಿಡ್‌ ಪರೀಕ್ಷೆ ಮತ್ತು ವೈದ್ಯಕೀಯ ಪರಿಕರ ಖರೀದಿಯಲ್ಲಿ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಆ ಹಿನ್ನೆಲೆಯಲ್ಲಿ ಸರ್ಕಾರ ನ್ಯಾ. ಮೈಕೆಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಇದೀಗ ಆಯೋಗದ ಮಧ್ಯಂತರ ವರದಿಯ ಆಧಾರದ ಮೇಲೆ ಕೊವಿಡ್​ ಹಗರಣದ ತನಿಖೆಗೆ ಎಸ್​ಐಟಿ ರಚಿಸಲು ಸಂಪುಟ ತೀರ್ಮಾನ ಕೈಗೊಂಡಿದೆ ಎಂದರು.

ಅಗತ್ಯಬಿದ್ದರೆ ಎಫ್‌ಐಆರ್

ಆಯೋಗದ ವರದಿ ಆಧರಿಸಿ ಎಸ್ಐಟಿ ತನಿಖೆ ಆಗಲಿದೆ. ಅಗತ್ಯ ಬಿದ್ದರೆ ಎಫ್‌ಐಆರ್‌ ದಾಖಲಾಗುತ್ತೆ, ಚಾರ್ಜ್​ಶೀಟ್ ಕೂಡ ಹಾಕ್ತೇವೆ. ಯಾರ ವಿರುದ್ಧಎಫ್‌ಐಆರ್‌ ದಾಖಲಿಸಬೇಕೆಂಬುದನ್ನು ಎಸ್‌ಐಟಿ ನಿರ್ಧರಿಸುತ್ತದೆ ಎಂದು ಸಚಿವರು ತಿಳಿಸಿದರು. 

ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ಅವಧಿಯಲ್ಲಿ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಆ ಆರೋಪಗಳ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಪಕ್ಷ ಕೋವಿಡ್‌ ಹಗರಣದ ತನಿಖೆ ನಡೆಸುವುದಾಗಿ ಹೇಳಿತ್ತು. ಅಲ್ಲದೆ, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೋವಿಡ್‌ ಹಗರಣವನ್ನು ಪ್ರಸ್ತಾಪಿಸಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಅವಧಿಯ ಎಲ್ಲಾ ಹಗರಣ ತನಿಖೆ ನಡೆಸುವುದಾಗಿಯೂ ಹೇಳಿತ್ತು.

ಸಂಪುಟ ಸಭೆಯ ಇತರೆ ನಿರ್ಣಯಗಳು

  1. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜ್ಯ ವಿಧಾನ ಪರಿಷತ್ ನಲ್ಲಿ ಖಾಲಿಯಾಗಿರುವ ಎರಡು ಸ್ಥಾನಗಳಿಗೆ ಸದಸ್ಯರನ್ನು ರಾಜ್ಯಪಾಲರಿಂದ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲು ಅಧಿಕಾರ ನೀಡಲಾಯಿತು.
  2. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್'ನ್ನು ರೂ. 20.00 ಕೋಟಿಗಳ ಮೊತ್ತದಲ್ಲಿ (ಕೇಂದ್ರ – 12 ಕೋಟಿ ರೂ.ಗಳು. ರಾಜ್ಯ - 8 ಕೋಟಿ ರೂ.ಗಳು) ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
  3. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಯಡಿ ರಾಮನಗರ ಜಿಲ್ಲೆ, ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ " ನಿರ್ಮಾಣ ಹಂತ-2ರ ಕಾಮಗಾರಿಯನ್ನು ರೂ. 125 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  4. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ರಾಷ್ಟ್ರೀಯ ಆರೋಗ್ಯ ಅಭಿಯಾನದ PM- ABHIM ಯೋಜನೆಯಡಿ ರಾಜ್ಯದ 7 ವೈದ್ಯಕೀಯ ಕಾಲೇಜುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಒಟ್ಟು 7 Critical Care Blockಗಳ ನಿರ್ಮಾಣದ ರೂ. 148.20 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
  5. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 69919 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ರೂ. 3000 ಘಟಕ ವೆಚ್ಚದಂತೆ 2024-25ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‌ಗಳನ್ನು ರೂ. 20.98 ಕೋಟಿಗಳ ಮೊತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  6. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಈ ಯೋಜನೆಗೆ ಕೇಂದ್ರದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು ವಿಸ್ತೃತವಾದ ಪತ್ರವನ್ನು ಮಾನ್ಯ ಪ್ರಧಾನಮಂತ್ರಿಗಳಿಗೆ ಬರೆಯುವ ಬಗ್ಗೆ ಸಚಿವ ಸಂಪುಟ ತೀರ್ಮಾನಿಸಿತು.
  7. "ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಉತ್ಕೃಷ್ಟತಾ ಕೇಂದ್ರ'ವನ್ನು ರೂ. 28 ಕೋಟೆಗಳ ಅಂದಾಜು ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  8. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಸಕ್ಷಮ್ ಯೋಜನೆಯಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಎಲ್‌ಇಡಿ ಮತ್ತು ಮತ್ತು ಇತರೆ ಸೌಲಭ್ಯಗಳನ್ನು ರೂ. 174.75 ಕೋಟಿಗಳ ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.
Tags:    

Similar News