ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ೨೦೨೪-೦೫ನೇ ಸಾಲಿನ ರಾಜ್ಯ ಬಜೆಟ್ ಈಗ ಸಾರ್ವಜನಿಕ ಚರ್ಚೆಯ ಸಂಗತಿ. ಲೋಕಸಭಾ ಚುನಾವಣೆ ಮತ್ತಿತರ ಕಾರಣಕ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಬಜೆಟ್ ಕುರಿತು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಹಲವು ನಾಯಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಕಳಪೆ ಬಜೆಟ್ ಎಂದ ಬಿಎಸ್ ವೈ
ಎಂಟು ಬಾರಿ ಬಜೆಟ್ ಮಂಡಿಸಿದ ಅನುಭವ ಇರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಜೀವಮಾನದಲ್ಲೇ ಇಷ್ಟು ಕಳಪೆ ಬಜೆಟ್ ಕಂಡಿಲ್ಲ” ಎಂದು ಟೀಕಿಸಿದ್ದಾರೆ.
“ದಾಖಲೆಯ ಹದಿನೈದನೇ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ. ನಾನು ನನ್ನ ಜೀವಮಾನದಲ್ಲೇ ಇಂತಹ ಕೆಟ್ಟ ಮುಂಗಡಪತ್ರವನ್ನು ಕಂಡಿರಲಿಲ್ಲ” ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಜೆಟ್ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ಟೀಕಿಸಲು ಮೀಸಲಿಡಲಾಗಿದೆ ವಿನಃ ರಾಜ್ಯದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು ಎಂಬುದನ್ನು ಹೇಳಿಲ್ಲ. ಈ ಬಜೆಟ್ ರಾಜ್ಯದ ಜನತೆಗೆ ಬಗೆದ ಮಹಾದ್ರೋಹದಂತೆ ಕಾಣಿಸುತ್ತಿದೆ. ಜನರಿಗೆ ಮಾತ್ರವಲ್ಲ, ಸ್ವತಃ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೇ ಮೋಸ ಹಾಗೂ ಅನ್ಯಾಯ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರ ಜಲಸಂಪನ್ಮೂಲ ಖಾತೆಗೆ ಅನುದಾನವನ್ನೇ ನೀಡದೇ ಅನ್ಯಾಯ ಮಾಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದ ಶಿವಕುಮಾರ್ ಅವರ ಸರ್ಕಾರವೇ ಆ ಯೋಜನೆಗೆ ಯಾವ ಖಾತರಿಯನ್ನೂ ಬಜೆಟ್ನಲ್ಲಿ ನೀಡಿಲ್ಲ” ಎಂದು ಯಡಿಯೂರಪ್ಪ ಟೀಕಿಸಿದ್ದಾರೆ.
ಸಿದ್ದರಾಮಯ್ಯ ತಮ್ಮ ವರುಣಾ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಅನುದಾನ ಘೋಷಿಸಿ, ಉಳಿದ ಯಾವ ಶಾಸಕರ ಕ್ಷೇತ್ರಕ್ಕೂ ಬಿಡಿಗಾಸು ನೀಡದೆ ತಾರತಮ್ಯ ಬಗೆದಿದ್ದಾರೆ. ಅಲ್ಲದೆ, ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಬಗ್ಗೆ ಯಾವುದೇ ಸ್ಪಷ್ಟ ಘೋಷಣೆ ಮಾಡಿಲ್ಲ. ಇದು ಖಜಾನೆ ಖಾಲಿಯಾಗಿರುವುದಕ್ಕೆ ಸಾಕ್ಷಿ ಎಂದು ಬಿಎಸ್ವೈ ಹೇಳಿದ್ದಾರೆ.
ಸೋಗಲಾಡಿ ಬಜೆಟ್ ಎಂದ ಅಶೋಕ್
ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್, ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲಾ ಹುಸಿಯಾಗಿದ್ದು ಇದು ಸಾಲರಾಮಯ್ಯನ ಸೋಗಲಾಡಿ ಬಜೆಟ್ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ತಯಾರಿಕೆ ಎಂಬುದು ಗಂಭೀರವಾದ, ಸಂವಿಧಾನಿಕ ಪವಿತ್ರ ಕರ್ತವ್ಯ. ಆದರೆ, ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೋಡಿದರೆ ಇದೊಂದು ಅಡ್ಡಕಸುಬಿ ಬಜೆಟ್ ನಂತೆ ಕಾಣಿಸುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಅಶೋಕ್ ಸಾಮಾಜಿಕ ಜಾಲತಾಣ x ನಲ್ಲಿ ಕಿಡಿಕಾರಿದ್ದಾರೆ.
ವಿನಾಶಕ್ಕೆ ಬುನಾದಿ ಹಾಕಿದ ಬಜೆಟ್: ಎಚ್ ಡಿ ಕೆ
ರಾಜ್ಯ ಬಜೆಟ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಅಮೃತ ಕಾಲ ಎಂದರೆ, ಸಿದ್ದರಾಮಯ್ಯ ವಿನಾಶ ಕಾಲ ಎನ್ನುತ್ತಿದ್ದಾರೆ. ಏಕೆಂದರೆ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದೆ ಎಂದಿದ್ದಾರೆ.
ಬಜೆಟ್ ನೋಡಿದರೆ ಇದು ನಾಳೆ ಬಾ ಸರ್ಕಾರದಂತಿದೆ. ಬಜೆಟ್ ಓದುಗಾಗಲೇ ಸಿದ್ದರಾಮಯ್ಯ ಅವರಲ್ಲಿ ವಿಶ್ವಾಸದ ಕೊರತೆ ಕಾಣಿಸುತ್ತಿತ್ತು. ಇದು ಡಿಪಿಆರ್ ಬಜೆಟ್ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಗ್ಯಾರಂಟಿಗಳ ಗುಂಗಿನಿಂದ ಇನ್ನೂ ಹೊರಗೆ ಬಂದಿಲ್ಲ. ಹತ್ತು ತಿಂಗಳು ಕಳೆದರೂ ಇನ್ನೂ ಗ್ಯಾರಂಟಿಗಳ ಬಗ್ಗೆಯೇ ಕನವರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹದಿನೈದನೇ ಬಜೆಟ್ ಇದು. ಇಷ್ಟು ಬಾರಿ ಬಜೆಟ್ ಮಂಡಿಸುವ ಅವಕಾಶ ಮುಂದೆ ಯಾರಿಗೆ ಸಿಗುತ್ತದೆಯೋ ಇಲ್ಲವೋ. ಆದರೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ವಿಶ್ವಾಸ ಮೂಡುತ್ತಿಲ್ಲ. ಇದು ರಾಜ್ಯದ ವಿನಾಶಕ್ಕೆ ಬುನಾದಿ ಹಾಕುವ ಬಜೆಟ್ ಎಂದು ಎಚ್ ಡಿ ಕೆ ಹೇಳಿದ್ದಾರೆ.