Karnataka Budget 2025 | ಬಜೆಟ್‌ ಅಧಿವೇಶನ ಜಂಟಿ ಸದನ: ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ರಾಜ್ಯಪಾಲರ ಶಹಬ್ಬಾಸ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳನ್ನುರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ವಿಧಾನಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 2024-25ನೇ ಸಾಲಿನ ಬಜೆಟ್ ಘೋಷಣೆಗಳ ಪ್ರಗತಿ ಮಂಡಿಸಿದರು;

Update: 2025-03-03 08:22 GMT
ವಿಧಾನ ಸೌಧದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು

ವಿಧಾನಮಂಡಲದ 2025 ನೇ ಸಾಲಿನ ಬಜೆಟ್ ಅಧಿವೇಶನ ಇಂದಿನಿಂದ (ಸೋಮವಾರ) ಆರಂಭವಾಯಿತು. ವಿಧಾನ ಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗಹ್ಲೋತ್ ಅವರು, ಸರ್ಕಾರದ ಯಶೋಗಾಥೆಗಳನ್ನು ಅನಾವರಣ ಮಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸುಮಾರು 34 ಪುಟಗಳ ಸಿದ್ಧ ಭಾಷಣ ಓದಿದ ರಾಜ್ಯಪಾಲರು, 2024-25ನೇ ಸಾಲಿನ ಬಜೆಟ್ ಘೋಷಣೆಗಳ ಪ್ರಗತಿ ಮಂಡಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಅಸಾಧ್ಯ, ಹಣಕಾಸು ವ್ಯವಸ್ಥೆ ಹದಗೆಡಲಿದೆ ಎಂಬ ಟೀಕಾಕಾರರ ಭವಿಷ್ಯವನ್ನು ಸರ್ಕಾರ ಸುಳ್ಳು ಎಂದು ನಿರೂಪಿಸಿದೆ. ಪ್ರತಿಯೊಂದು ವಲಯದಲ್ಲೂ ಉತ್ತಮ ಸಾಧನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

ರಾಜ್ಯದ ಆದಾಯ ಹೆಚ್ಚುತ್ತಿದೆ. ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಅಸಮಾನತೆ ಕಡಿಮೆಯಾಗುತ್ತಿದೆ. ಜಿಎಸ್ಟಿ ಬೆಳವಣಿಗೆ ದರ ಉತ್ತಮವಾಗಿದೆ ಎಂದು ಹೇಳಿದ್ದಾರೆ.

2024-25ನೇ ಸಾಲಿನ ಬಜೆಟ್‌ನಲ್ಲಿ ಆದೇಶ ಹೊರಡಿಸಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಉಳಿದ ಕಾರ್ಯಕ್ರಮಗಳು ಆದೇಶ ಹೊರಡಿಸುವ ಹಂತದಲ್ಲಿವೆ. ಎಲ್ಲ ಘೋಷಣೆಗಳನ್ನು ಸರ್ಕಾರ ಅನುಷ್ಠಾನ ಮಾಡಿದೆ ಎಂದು ಹೇಳಿದ್ದಾರೆ. ನಾಳೆ(ಮಂಗಳವಾರ) ರಾಜ್ಯ ಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆ ಆಗಲಿದೆ.

ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು

  • ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ 149 ಲಕ್ಷ ಟನ್ ಕೃಷಿ ಉತ್ಪಾದನೆ ನಿರೀಕ್ಷೆ.
  • ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣ ಗಣನೀಯ ಕುಸಿತ.
  • ಪ್ರತಿ ದಿನ 1 ಕೋಟಿ ಲೀಟರ್ ಹಾಲನ್ನು ಸಂಗ್ರಹಣೆ ಮೂಲಕ ದಾಖಲೆ ಬರೆದಿರುವ ಕರ್ನಾಟಕ.
  • ಗ್ಯಾರಂಟಿ ಕಾರ್ಯಕ್ರಮಗಳಿಗಾಗಿ ವಾರ್ಷಿಕ 52 ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪನ್ಮೂಲ ಬಳಕೆ. 5 ಗ್ಯಾರಂಟಿ ಯೋಜನೆಗಳಿಗಾಗಿ 70000 ಕೋಟಿ ರೂ. ನೇರವಾಗಿ ಜನರ ಖಾತೆಗಳಿಗೆ ವರ್ಗಾವಣೆ.
  • ಶಿಕ್ಷಣ ಕ್ಷೇತ್ರಕ್ಕಾಗಿ ಅಪಾರ ಪ್ರಮಾಣದ ಸಂಪನ್ಮೂಲ ವಿನಿಯೋಗ.
  • ಪ್ರಾದೇಶಿಕ ಅಸಮಾತೋಲನ ನಿವಾರಣೆಗೆ ನಂಜುಂಡಪ್ಪ ವರದಿ ಅನ್ವಯ ಈವರೆಗೆ 37,662 ಕೋಟಿ ರೂ. ಬಿಡುಗಡೆ.
  • ಪ್ರಾದೇಶಿಕ ಅಸಮತೋಲನದ ಕುರಿತ ಮುಂದುವರಿದ ಅಧ್ಯಯನಕ್ಕೆ ನೇಮಿಸಿದ್ದ ಡಾ.ಗೋವಿಂದರಾವ್ ಅಧ್ಯಕ್ಷತೆಯ ಸಮಿತಿ ವರ್ಷಾಂತ್ಯದಲ್ಲಿ ವರದಿ ಸಲ್ಲಿಕೆ.
  • ಮೂಲ ಸೌಕರ್ಯ ಒದಗಿಸುವುದರಲ್ಲೂ ಕರ್ನಾಟಕ ಇಡೀ ದೇಶದಲ್ಲಿ ಮುಂಚೂಣಿ.
  • 2024-25ರ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ 1,81,908 ಕೋಟಿ ರಾಜಸ್ವ ಸಂಗ್ರಹಣೆ.
  • ರಾಜ್ಯಗಳಿಂದ ಸ್ವೀಕೃತವಾಗುವ ಒಟ್ಟು ಜಿ.ಎಸ್.ಟಿ ತೆರಿಗೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಎರಡನೇ ಸ್ಥಾನ.
  • ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ತಡೆಯುವ ನಿಟ್ಟಿನಲ್ಲಿ ಕನಿಷ್ಠ 6 ತಿಂಗಳಿಂದ ಗರಿಷ್ಠ 10 ವರ್ಷಗಳ ಸಜೆ ವಿಧಿಸುವ ಸುಗ್ರೀವಾಜ್ಞೆ ಜಾರಿ.
  • ರಾಜ್ಯದ ತೋಟಗಾರಿಕಾ ಪ್ರದೇಶವು 27.41 ಲಕ್ಷ ಹೆಕ್ಟೇರ್ ಗೆ ವಿಸ್ತರಣೆ. ಇದು ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ.
  • ತೋಟಗಾರಿಕೆ ಇಲಾಖೆಯು ಬೀಜದಿಂದ ಮಾರುಕಟ್ಟೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ಫಲಾನುಭವಿಗಳಿಗೆ ಒದಗಿಸಲು "ತೋಟಗಾರಿಕೆ ಕಿಸಾನ್ ಮಾಲ್'ಗಳ ಸ್ಥಾಪನೆ.
  • ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 16 ವಿವಿಧ ತೋಟಗಾರಿಕಾ ಬೆಳೆಗಳ ತಳಿ ಅಭಿವೃದ್ಧಿ.
  • ರಾಜ್ಯದ ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ “ಝೇಂಕಾರ" ಎಂಬ ಹೆಸರಿನ ವಿಶೇಷ ಬ್ರಾಂಡ್ ನೀಡಿ ಮಾರಾಟಕ್ಕೆ ವ್ಯವಸ್ಥೆ.
  • ಜನವರಿ 2025 ರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ ರೂ.16,942 ಕೋಟಿಗಳ ಬೆಳೆ ಸಾಲ ಮತ್ತು 46,000 ರೈತರಿಗೆ ರೂ. 1442 ಕೋಟಿಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಣೆ.
  • ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಮೈಸೂರು ಸಕ್ಕರೆ ಕಂಪನಿಗೆ ಮರುಜೀವ ನೀಡಿ 2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಲ್ಲಿ 1,99,888 ಮೆ. ಟನ್ಗಳಷ್ಟು ಕಬ್ಬನ್ನು ನುರಿಸಿ ರೈತರಿಗೆ ರೂ.70.46 ಕೋಟಿಗಳ ಕಬ್ಬು ಬಿಲ್ ಪಾವತಿ.
  • 2024-25ನೇ ಸಾಲಿನಲ್ಲಿ ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2024ರ ಅಂತ್ಯದವರೆಗೆ ರಾಜ್ಯವು 88,853 ಮಿಲಿಯನ್ ಡಾಲರ್ ಮೌಲ್ಯದ ಸರಕು ಸೇವೆಗಳನ್ನು ರಫ್ತು ಮಾಡುವುದರೊಂದಿಗೆ ರಫಿನಲ್ಲಿ 1ನೇ ಸ್ಥಾನ.
  • ಬೆಂಗಳೂರು ಹೊರವಲಯದಲ್ಲಿ ರೂ.40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಕ್ಲಿನ್ ಸಿಟಿ (Knowledge, Wellness and Innovation (KWIN) City) ನಿರ್ಮಾಣ. ಇದರಿಂದ 80,000 ಉದ್ಯೋಗಾವಕಾಶ ಸೃಷ್ಟಿ.
  • ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.51ಹಾಗೂ ಶೇ.49 ರ ಜಂಟಿ ಸಹಭಾಗಿತ್ವದಲ್ಲಿ 1000 ಎಕರೆ ಜಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಯೋಜನೆ.
  • ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 407 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅಭಿವೃದ್ಧಿ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭ.
  • ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಗಳ ಸಹಭಾಗಿತ್ವದಲ್ಲಿ 148.17 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಜಾಲ ನಿರ್ಮಾಣಕ್ಕೆ ರೂ.15,767 ಕೋಟಿ ಮೀಸಲು.
  • “ಗೃಹಜ್ಯೋತಿ" ಯೋಜನೆಯಡಿ ಎಸ್ಕಾಂಗಳಿಗೆ ಒಟ್ಟಾರೆ 17290 ಕೋಟಿ ರೂ.ಗಳಷ್ಟು ಬೃಹತ್ ಸಹಾಯಧನ ಬಿಡುಗಡೆ.
  • 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಿಎಸ್ಪಿ ಯೋಜನೆಯ ಅನುಷ್ಠಾನಕ್ಕೆ ಕಾರ್ಯಾದೇಶ.
  • ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ 11.5 ಮೆಗಾವ್ಯಾಟ್ ಸ್ಥಾವರವನ್ನು ವೇಸ್ಟ್ ಟು ಎನರ್ಜಿ ಯೋಜನೆಯಡಿ ಬಿಡದಿಯಲ್ಲಿ ಕಾರ್ಯಾಚರಣೆ.
  • ಅರಣ್ಯ ವಲಯವನ್ನು ಹೆಚ್ಚಿಸಲು 15 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಕಾಯ್ದಿಟ್ಟ ಅರಣ್ಯ ಎಂದು ಅಧಿಸೂಚನೆ. ಬೆಂಗಳೂರು ನಗರದಲ್ಲಿ 117 ಎಕರೆ ಸೇರಿದಂತೆ ರಾಜ್ಯಾದ್ಯಂತ ಬೆಲೆಕಟ್ಟಲಾಗದ ಸುಮಾರು 5000 ಎಕರೆ ಒತ್ತುವರಿ ತೆರವು.
  • ಹಸಿರು ವಲಯ ಸಂರಕ್ಷಿಸಲು ಮತ್ತು ಅಪರೂಪದ ಪಕ್ಷಿಗಳ ನೆಲೆ ಕಾಪಾಡಲು ಹೆಸರಘಟ್ಟ ಕೆರೆ ಪ್ರದೇಶದ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಣೆ.
  • ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ.ಗೆ ಪೀಣ್ಯ ಪ್ಲಾಂಟೇಷನ್ನಲ್ಲಿ ನೀಡಲಾಗಿದ್ದ ಸುಮಾರು 14300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಹಿಂಪಡೆದು, ಶ್ವಾಸ ತಾಣವಾಗಿ ಉಳಿಸಲು ಕಾನೂನು ಪ್ರಕ್ರಿಯೆ ಆರಂಭ.
  • ರಾಜ್ಯದಲ್ಲಿ ಕಿಡ್ನಿ ರೋಗಿಗಳಿಗೆ ಉಚಿತವಾಗಿ ನೀಡುವ ಡಯಾಲಿಸಿಸ್ ಕೇಂದ್ರಗಳನ್ನು 192 ರಿಂದ 220 ಕ್ಕೆ ವಿಸ್ತರಣೆ.
  • ಡಾ. ಪುನೀತ್ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆಯಲ್ಲಿ ಇಲ್ಲಿಯವರೆಗೆ 416 ಹೃದಯಾಘಾತ ರೋಗಿಗಳಿಗೆ ಚಿಕಿತ್ಸೆ.
  • ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.05 ಲಕ್ಷ ಮನೆಗಳನ್ನು 4761.15 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೆರವು. 4096 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಸಿದ್ಧಪಡಿಸುತ್ತಿದ್ದು, 1.23 ಲಕ್ಷ ನಿವೇಶನಗಳನ್ನು ಹಂಚಿಕೆಗೆ ಕ್ರಮ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನೇ ವಿಶೇಷ ಪೊಲೀಸ್ ಠಾಣೆಗಳೆಂದು ಅಧಿಸೂಚನೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ 2024-25ರಲ್ಲಿ SCSP ಅಡಿ ರೂ.27,674 ಕೋಟಿ ಮತ್ತು TSP ಅಡಿಯಲ್ಲಿ ರೂ. 11,447 ಕೋಟಿ ಖರ್ಚು.
  • ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಮಾಡುವ 216 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 45 ಕೋಟಿ ರೂ. ಸಹಾಯಧನ.
  • ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ದಂತೆ 1,26,24,547 ಮಹಿಳಾ ಫಲಾನುಭವಿಗಳಿಗೆ ನೆರವು. ಈವರೆಗೆ 36,000 ಕೋಟಿ ರೂ. ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆ.
  • ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಭಾಗ-1 ರ ಯೋಜನೆಗೆ ರೂ.27,000 ಕೋಟಿಗಳನ್ನು ಹುಡ್ಕೊ ಸಂಸ್ಥೆಯಿಂದ ಸಾಲದ ರೂಪದಲ್ಲಿ ಪಡೆಯಲು ನಿರ್ಧಾರ.
  • ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3 ರ ಕಾರಿಡಾರ್ 1 - ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ - 32.15 ಕಿ.ಮೀ ಮತ್ತು ಕಾರಿಡಾರ್ 2 - ಹೊಸಹಳ್ಳಿಯಿಂದ ಕಡಬಗೆರೆವರೆಗಿನ - 12.50 ಕಿ.ಮೀ., ಒಟ್ಟು 44.65 ಕಿ.ಮೀ. ಉದ್ದದ, ರೂ.15,611 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳ ಪ್ರಗತಿ.
  • ಬೆಂಗಳೂರಿನ ವಾಹನ ದಟ್ಟಣೆಗೆ ನಿರ್ವಹಣೆಗಾಗಿ ASTRAM-ಕೃತಕ ಬುದ್ಧಿಮತ್ತೆ ಆಧಾರಿತ ಡೇಟಾ ಪ್ಲಾಟ್ ಫಾರಂ, ನೈಜ ಸಮಯದಲ್ಲಿ ಡೇಟಾ ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಹಾಗೂ ಸಂಚಾರ ತೆರವಿಗೆ ತ್ವರಿತ ನಿರ್ಧಾರ.
  • ಜನರಿಗೆ ಗುಣಮಟ್ಟದ ಆಹಾರ ನೀಡಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮುಂದುವರಿಕೆ. ಇಂದಿರಾ ಕ್ಯಾಂಟೀನ್ ಹಂತ-2 ರಡಿ 186 ಕ್ಯಾಂಟೀನ್ ನಿರ್ಮಾಣಗೊಳಿಸಲು ಅನುಮೋದನೆ.
  • ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ವಿಶೇಷ ಅಭಿಯಾನ.
  • ಶಕ್ತಿ ಯೋಜನೆಯಿಂದ ರಾಜ್ಯದ ಸುಮಾರು 376.70 ಕೋಟಿ ಫಲಾನುಭವಿಗಳಿಗೆ ಪ್ರಯೋಜನ.
Tags:    

Similar News