ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಾಣ: ಸರ್ಕಾರದ ವಿರುದ್ಧ ಪ್ರತಿಭಟನೆ
ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಹೊಸ ಕಟ್ಟಡವನ್ನು ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ, ನಡಿಗೆದಾರರ ಸಂಘ, ಹೆರಿಟೇಜ್ ಬೇಕು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಹೊಸ ಕಟ್ಟಡವನ್ನು ನಿರ್ಮಿಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ, ನಗರದ ನಿವಾಸಿಗಳು, ವರಿಸರ ಪ್ರೇಮಿಗಳು ಕಬ್ಬನ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಡಿಗೆದಾರರ ಸಂಘ, ಹೆರಿಟೇಜ್ ಬೇಕು ಸಂಘಗಳು ಜಂಟಿಯಾಗಿ 'ಚಲೋ ಕಬ್ಬನ್' ಪ್ರತಿಭಟನೆ ನಡೆಸಿದ್ದು, ಕರ್ನಾಟಕ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಇತ್ತೀಚೆಗೆ ಕಬ್ಬನ್ ಪಾರ್ಕ್‌ನಲ್ಲಿ ಚುನಾವಣಾ ಆಯೋಗಕ್ಕೆ ಹೊಸ ಕಟ್ಟಡ ಹಾಗೂ ಕೆಲವು ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸುವ ಸಲುವಾಗಿ 10 ಅಂತಸ್ತಿನ ಹೊಸ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದೆ. ಕಟ್ಟಡವನ್ನು ನಿರ್ಮಿಸುವಾಗ ಸಾಕಷ್ಟು ಉದ್ಯಾವನದ ಜಾಗವನ್ನು ಬಳಸಬೇಕಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ʼಹೆರಿಟೇಜ್ ಬೇಕುʼ ಸಂಘಟನೆಯ ಸಹ ಸಂಸ್ಥಾಪಕಿ ಪ್ರಿಯಾ ಚೆಟ್ಟಿ-ರಾಜಗೋಪಾಲ್ ಮಾತನಾಡಿ, 300 ಎಕರೆ ವಿಸ್ತೀರ್ಣದ ಉದ್ಯಾನವು ಈಗಾಗಲೇ ಅರ್ಧದಷ್ಟು ಗಾತ್ರಕ್ಕೆ ಕುಗ್ಗಿದ್ದು, ಹೆಚ್ಚಿನ ಅತಿಕ್ರಮಣಗಳಿಗೆ ಅವಕಾಶ ನೀಡಿದರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ ಎಂದರು.
ಬಿಜೆಪಿ ವಿರೋಧ
ಈ ಯೋಜನೆಗೆ ಬಿಜೆಪಿಯಿಂದಲೂ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ, ಬಿಜೆಪಿ ನಾಯಕ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಇದು ನಗರದ ಹಸಿರಿನ ಮೇಲೆ ʼದಾಳಿʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವುದಾಗಿ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.