ಕನ್ನಡಿಗರಿಗೆ ಉದ್ಯೋಗ | ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

Update: 2024-06-30 13:20 GMT

ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಬೇಕು, ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ.

ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗದ ಸಮಗ್ರ ಕಾಯ್ದೆ ರೂಪಿಸಲು ಜುಲೈ 1ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದಾರೆ. ಈ ಪ್ರತಿಭಟನೆಗೆ ನಟಿ ಪೂಜಾ ಗಾಂಧಿ, ಲವ್ಲಿ ಸ್ಟಾರ್ ಪ್ರೇಮ್, ನಟ ಗೌರಿ ಶಂಕರ್, ನಟ ಶಶಿಧರ ಕೋಟೆ, ಜಾನಪದ ಗಾಯಕರಾದ ಸವಿತಕ್ಕ, ರಾಜಗುರು ಹೊಸಕೋಟೆ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ವೀರ ಸಂಗಯ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಸೋಮಶೇಖರ್ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಇನ್ಸ್ಟಾಗಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ಪೂಜಾ ಗಾಂಧಿ ಅವರು, ʻʻಒಂದು ಭಾಷೆ ಉಳಿಯಬೇಕಾದರೆ ಎರಡು ಕಾರಣ ಇರುತ್ತದೆ. ಒಂದು ಭಾಷೆಯ ಮೇಲೆ ಪ್ರೀತಿ ಇರಬೇಕು. ಆ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. 2ನೇ ಕಾರಣ, ಕನ್ನಡ ಅನ್ನದ ಭಾಷೆಯಾಗಿರಬೇಕು ಎಂದು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸದಲ್ಲಿ ಶೇ.100ರಷ್ಟು ಮೀಸಲಾತಿ ಸಿಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಬೇಕು. ಇದು ಕನ್ನಡ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆʼʼ ಎಂದಿದ್ದಾರೆ.

ʻʻಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ಜುಲೈ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಆಯೋಜನೆ ಆಗುತ್ತಿದೆ. ಈ ಹೋರಾಟಕ್ಕೆ ನಾನು ಇರುತ್ತೇನೆ. ನೀವು ಬನ್ನಿʼʼ ಎಂದು ಪೂಜಾ ಗಾಂಧಿ ಬೆಂಬಲ ಸೂಚಿಸಿದ್ದಾರೆ.

ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದೆಗಳಲ್ಲಿ ಶೇಕಡಾ 100 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಇತರೆ ಗ್ರೂಪ್‌ಗಳಲ್ಲಿ ಶೇ.80ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಲಾಗಿದೆ.

ಬೇಡಿಕೆಗಳು ಏನು?

ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ರ ಅನ್ವಯ ಬಲಿಷ್ಠ ಕಾನೂನೂ ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು.

ಖಾಸಗಿ ಸಂಸ್ಥೆಗಳ ಸಿ ಮತ್ತು ಡಿ ದರ್ಜೆ ಹುದ್ದೆ 100% ಕನ್ನಡಿಗರಿಗೆ ಮೀಸಲಿಡಬೇಕು

ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ 80% ಕನ್ನಡಿಗರಿಗೆ ಮೀಸಲಿಡಬೇಕು.

ಹದಿನೈದು ವರ್ಷ ರಾಜ್ಯದಲ್ಲಿದ್ದವರಿಗೆ ಕನ್ನಡಿಗರೆಂದು ಪರಿಗಣಿಸುವ ನಿಯಮವಿದ್ದು, ಅಂತವರಿಗೆ ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದರೆ ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು.

ನಿಯಮ‌‌ ಪಾಲಿಸದ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಬೇಕು. ಸರ್ಕಾರ ನೀಡಿರುವ ಭೂಮಿ, ಸವಲತ್ತುಗಳನ್ನ ವಾಪಾಸ್ ಪಡೆದು ಕ್ರಿಮಿನಲ್ ಮೊಕದ್ದಮೆ ಹಾಕಬೇಕು.

Tags:    

Similar News