ಕಾಂತಾರ ಚಿತ್ರತಂಡ ತೆರಳುತ್ತಿದ್ದ ಬಸ್ ಅಪಘಾತ: 6 ಮಂದಿಗೆ ಗಾಯ
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಜೂನಿಯರ್ ಕಲಾವಿದರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹಲವರಿಗೆ ಗಾಯವಾಗಿದೆ.;
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡದ ಜೂನಿಯರ್ ಕಲಾವಿದರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿದ್ದಾರೆ.
ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಮತ್ತು ಪಶ್ವಿಮ ಘಟ್ಟದ ತಪ್ಪಲಿನಲ್ಲಿ ನಡೆಯುತ್ತಿದೆ. ಚಿತ್ರತಂಡ ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಮಿನಿ ಬಸ್ ಪಲ್ಟಿಯಾಗಿದ್ದು, ಆರು ಮಂದಿಗೆ ಗಂಭೀರ ಗಾಯವಾಗಿದೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ 20 ಕಿರಿಯ ಕಲಾವಿದರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮತ್ತೊಂದು ಮಹತ್ವದ ಚಿತ್ರೀಕರಣವನ್ನು ಮುಗಿಸಲು ಎದುರು ನೋಡುತ್ತಿದ್ದ ಚಿತ್ರತಂಡಕ್ಕೆ ಈ ಘಟನೆ ಬೇಸರ ಮೂಡಿಸಿದೆ.
ರಿಷಬ್ ಶೆಟ್ಟಿ ಇತ್ತೀಚೆಗೆ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯ ದಿನಾಂಕವನ್ನು ಹಂಚಿಕೊಂಡಿದ್ದರು. ಅಕ್ಟೋಬರ್ 2, 2025 ರಂದು ಈ ಸಿನಿಮಾ ಬಿಡುಗೆಯಾಗಲಿದ್ದು, ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆಕಾಣಲಿದೆ. ಕರಾವಳಿಯ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ʼಕಾಂತಾರ’ ಚಿತ್ರದಲ್ಲಿ ಕರಾವಳಿಯ ದೈವಾರಾಧನೆ ಬಗ್ಗೆ ತೋರಿಸಲಾಗಿತ್ತು. ಆ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದೂ ಅಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಬಂತು. ಈ ಎಲ್ಲ ಕಾರಣಗಳಿಂದಾಗಿ ಪ್ರೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಇದೆ. ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.