ವ್ಯಾಟಿಕನ್ ನ್ಯೂಸ್ ಪೋರ್ಟಲ್‌ನಲ್ಲಿ 53ನೇ ಭಾಷೆಯಾಗಿ ́ಕನ್ನಡʼ ಸೇರ್ಪಡೆ!
ಇನ್ನುಮುಂದೆ ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ನ ಸುದ್ದಿ ಹಾಗೂ ಮಾಹಿತಿಗಳು ಕನ್ನಡ ಭಾಷೆಯಲ್ಲೂ ಪ್ರಕಟವಾಗಲಿದೆ. ಈ ವೆಬ್ ಪೋರ್ಟಲ್‌ನ ಕೇಂದ್ರ ಕಚೇರಿಯು ವ್ಯಾಟಿಕನ್ ನಗರದಲ್ಲಿದೆ.;
ಕನ್ನಡ ಭಾಷೆಗೆ ಇದೀಗ ಜಾಗತಿಕ ಮಟ್ಟದಲ್ಲೂ ಮನ್ನಣೆ ಸಿಗುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನವೆಂದರೆ, ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ಗೆ 53ನೇ ಭಾಷೆಯಾಗಿ ಕನ್ನಡ ಸೇರ್ಪಡೆಯಾಗಿರುವುದು.
ಇನ್ನುಮುಂದೆ ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ನ ಸುದ್ದಿ ಹಾಗೂ ಮಾಹಿತಿಗಳು ಕನ್ನಡ ಭಾಷೆಯಲ್ಲೂ ಪ್ರಕಟವಾಗಲಿದೆ. ಇನ್ನು ಈ ವೆಬ್ ಪೋರ್ಟಲ್‌ನ ಕೇಂದ್ರ ಕಚೇರಿಯು ವ್ಯಾಟಿಕನ್ ನಗರದಲ್ಲಿದ್ದು, ಕ್ರೈಸ್ತರ ಧರ್ಮ ಗುರುಗಳಾದ ಪೋಪ್ ಫ್ರಾನ್ಸಿಸ್ ಅವರ ಕಾರ್ಯಕ್ರಮಗಳು, ಸಂದೇಶಗಳು, ಕ್ಯಾಥೋಲಿಕ್ ಚರ್ಚ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಕ್ರೈಸ್ತ ಧರ್ಮದ ಮಾಹಿತಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಕಟಿಸಲಾಗುತ್ತಿದೆ.
ಇದೀಗ ಕನ್ನಡವು 53ನೇ ಭಾಷೆಯಾಗಿ ಸೇರ್ಪಡೆಯಾಗಿದ್ದು, ಮಂಗಳವಾರದಿಂದಲೇ ಕನ್ನಡದಲ್ಲೂ ಮಾಹಿತಿ ಪ್ರಸಾರವಾಗುತ್ತಿದೆ. ಈಗಾಗಲೇ ಭಾರತೀಯ ಭಾಷೆಗಳಾದ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಮಾಹಿತಿ ಪ್ರಕಟಿಸಲಾಗುತ್ತಿದೆ. ಇನ್ನು ವ್ಯಾಟಿಕನ್‌ನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಕನ್ನಡ ಭಾಷೆಯನ್ನು ವ್ಯಾಟಿಕನ್ ನ್ಯೂಸ್ ವೆಬ್ ಪೋರ್ಟಲ್‌ಗೆ ಸೇರಿಸಲಾಗಿದೆ.
"ವ್ಯಾಟಿಕನ್ ಪೋರ್ಟಲ್‌ಗೆ ಕನ್ನಡವನ್ನು ಸೇರಿಸಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ" ಎಂದು ಬೆಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ (ಆರ್ಚ್ ಬಿಷಪ್) ಪೀಟರ್ ಮಚಾದೊ ಅವರು ತಿಳಿಸಿದ್ದಾರೆ.
ಈ ಮೂಲಕ ಕನ್ನಡಿಗರಿಗೆ ಉತ್ತಮ ಮಾಹಿತಿ ಸಿಗಲಿದೆ. ಓದಲು ಸಾಧ್ಯವಾಗದೆ ಇರುವವರಿಗೆ ಆಡಿಯೋ ಮತ್ತು ವಿಡಿಯೋಗಳ ಪ್ರಸಾರದಿಂದ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯ ಆಯ್ಕೆಗೆ ಕಾರಣವೇನು ?
ಕರ್ನಾಟಕದ ಜನಸಂಖ್ಯೆಯಲ್ಲಿ ಅಂದಾಜು 1.9% ಪ್ರತಿಶತ ಜನ ಕೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕ್ರೈಸ್ತರ ಜನಸಂಖ್ಯೆ ಹೆಚ್ಚಾಗಿದೆ. ಅವುಗಳೆಂದರೆ ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಮೈಸೂರು ಹಾಗೂ ಕೋಲಾರ.
ಈ ಜೆಲ್ಲೆಗಳಲ್ಲಿರುವ ಕ್ರೈಸ್ತ ಧರ್ಮದವರಿಗೆ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡುವುದು, ಧರ್ಮದ ಬಗ್ಗೆ ಉತ್ತಮ ಸಂದೇಶಗಳನ್ನು ತಲುಪಿಸುವುದು ಹಾಗೂ ಕ್ರೈಸ್ತರ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ಸಂದೇಶ ಹಾಗೂ ಕಾರ್ಯಕ್ರಮದ ಮಾಹಿತಿಗಳನ್ನು ಸಮುದಾಯಕ್ಕೆ ತಲುಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.