ಬೆಂಗಳೂರು| ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ವಿರುದ್ಧ 'ಹಿಟ್ ಅಂಡ್ ರನ್' ಕೇಸ್ ದಾಖಲು
ದಿವ್ಯಾ ಸುರೇಶ್ ಅವರು ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು. 2013 ರಲ್ಲಿ 'ಚಿಟ್ಟೆ ಹೆಜ್ಜೆ' ಎಂಬ ಪ್ರಸಿದ್ಧ ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಪದರ್ಪಣೆ ಮಾಡಿದರು.
ದಿವ್ಯಾ ಸುರೇಶ್
ನಗರದ ಬ್ಯಾಟರಾಯನಪುರದಲ್ಲಿ ನಡೆದ 'ಹಿಟ್ ಅಂಡ್ ರನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಜನಪ್ರಿಯ ನಟಿ, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್ ಅವರನ್ನು ಪೊಲೀಸರು ಪ್ರಮುಖ ಆರೋಪಿ ಎಂದು ಗುರುತಿಸಿದ್ದಾರೆ. ಅಕ್ಟೋಬರ್ 4ರ ನಸುಕಿನ ಜಾವದಲ್ಲಿ ಈ ಅಪಘಾತ ಸಂಭವಿಸಿದ್ದು, ಇದರಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರು ಗಾಯಗೊಂಡಿದ್ದರು.
ಘಟನೆ ವಿವರ
ಅಕ್ಟೋಬರ್ 4 ರ ಮುಂಜಾನೆ ಕಿರಣ್ ಜಿ ಮತ್ತು ಅವರ ಸೋದರ ಸಂಬಂಧಿಗಳಾದ ಅನುಷಾ ಮತ್ತು ಅನಿತಾ ಅವರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಅತಿ ವೇಗದಲ್ಲಿ ಬಂದ ಕಪ್ಪು ಕಾರು ಡಿಕ್ಕಿ ಹೊಡೆದಿದೆ. ಅಪಘಾತ ಮಾಡಿದ ಅಪರಿಚಿತ ಮಹಿಳೆ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಳು.
ಘಟನೆಯಲ್ಲಿ ಕಿರಣ್ (25) ಮತ್ತು ಅನುಷಾ (24) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅನಿತಾ (33) ಅವರ ಕಾಲು ಮುರಿದು ಹೋಗಿದೆ. ಅವರನ್ನು ಕೂಡಲೇ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದರು.
ಸಿಸಿಟಿವಿ ಆಧರಿಸಿ ಆರೋಪಿ ಗುರುತು
ಅಪಘಾತದ ನಂತರ ಅಕ್ಟೋಬರ್ 7 ರಂದು ಕಿರಣ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 (ಅಜಾಗರೂಕ ಚಾಲನೆ) ಮತ್ತು 125(ಎ) (ಜೀವಕ್ಕೆ ಅಪಾಯ) ಅಡಿಯಲ್ಲಿ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಪಘಾತಕ್ಕೆ ಕಾರಣವಾದ ಕಾರು ನಟಿ ದಿವ್ಯಾ ಸುರೇಶ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಾತ್ರವಲ್ಲದೆ, ಅಪಘಾತದ ಸಮಯದಲ್ಲಿ ಸ್ವತಃ ದಿವ್ಯಾ ಸುರೇಶ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾರಿದು ದಿವ್ಯಾ ಸುರೇಶ್?
ದಿವ್ಯಾ ಸುರೇಶ್ ಅವರು ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು. 2013 ರಲ್ಲಿ 'ಚಿಟ್ಟೆ ಹೆಜ್ಜೆ' ಎಂಬ ಪ್ರಸಿದ್ಧ ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಪದರ್ಪಣೆ ಮಾಡಿದರು. 'ಓಂ ಶಕ್ತಿ, ಓಂ ಶಾಂತಿ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ನಟನೆಯ ಹೊರತಾಗಿ, ಅವರು ಮಾಜಿ ಕಬಡ್ಡಿ ಆಟಗಾರ್ತಿಯಾಗಿದ್ದು, ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.