ಹೋರಾಟ ಜೈಲು, ಅನ್ಯಾಯ ಬಯಲು: ರೈತ ಹೋರಾಟಕ್ಕೆ ಕಹಳೆಯೂದಿದ ಕಾಗೋಡು

Update: 2024-10-21 08:19 GMT

ಹೋರಾಟ ಜೈಲು, ಅನ್ಯಾಯ ಬಯಲು ಎಂಬ ಮಾತಿನಂತೆ ಮಲೆನಾಡಿನ ರೈತರ ಬದುಕಿನ ಉಳಿವಿಗೆ ಇಂದು ಹೋರಾಟ ಅನಿವಾರ್ಯ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟದಲ್ಲಿ ನಿಮ್ಮೊಂದಿಗೆ ಇರುವೆ ಎಂದು ಹೋರಾಟಕ್ಕೆ ರಣಕಹಳೆ ಊದುವ ಮೂಲಕ ಚಾಲನೆ ನೀಡಿದ ಸಮಾಜವಾದಿ ಹೋರಾಟಗಾರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಮಲೆನಾಡಿನ ರೈತರ ಭೂಮಿ ಕಿತ್ತುಕೊಳ್ಳುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿವಿಧ ರೈತ ಸಂಘಟನೆಗಳು ಮತ್ತು ಶರಾವತಿ ಯೋಜನೆ ಸಂತ್ರಸ್ತರು ಸೇರಿದಂತೆ ವಿವಿಧ ಯೋಜನಾ ಸಂತ್ರಸ್ತರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೋರಾಟಕ್ಕೆ ಶುಭ ಕೋರಿದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಮಾತನಾಡಿ, ಈ ಹಿಂದೆ ಐತಿಹಾಸಿಕ ಕಾಗೋಡು ಚಳವಳಿ ಮೂಲಕವೇ ನಾವು ಉಳುತ್ತಿದ್ದ ಗೇಣಿ ಭೂಮಿಯ ಹಕ್ಕು ಪಡೆದಿದ್ದೇವೆ. ಇದೀಗ ಮತ್ತೆ ಬಗರ್ಹುಕುಂ ಸಾಗುವಳಿ ಭೂಮಿಯ ಹಕ್ಕಿಗಾಗಿಯೂ ಹೋರಾಟಕ್ಕೆ ಇಳಿದಿದ್ದೇವೆ. 64 ವರ್ಷದ ಹಿಂದೆ ನಮ್ಮನ್ನು ಮುಳುಗಿಸಿ ನಮ್ಮ ಜಮೀನು, ಮನೆ ಕಿತ್ತುಕೊಂಡ ಸರ್ಕಾರ ಇಂದು ಮತ್ತೆ ನಾವು ನೆಲೆ ಕಳೆದುಕೊಂಡ ಭೂಮಿಯನ್ನು ಕಿತ್ತುಕೊಂಡು ನಮ್ಮನ್ನು ಬೀದಿಗೆ ತಳ್ಳುತ್ತಿದೆ. ಇದನ್ನು ನಮ್ಮ ಸರ್ಕಾರ ಎನ್ನಲಾದೀತೆ? ಇದನ್ನು ಜನರ ಸರ್ಕಾರ ಎನ್ನಲಾದೀತೆ? ಇದು ಬ್ರಿಟಿಷ್ ಸರ್ಕಾರಕ್ಕಿಂತ ಅಮಾನವೀಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅವರು, ಮಲೆನಾಡಿನ ಶರಾವತಿ ಮತ್ತಿತರ ಯೋಜನೆಗಳ ಮುಳುಗಡೆ ಸಂತ್ರಸ್ತರ ಭೂ ಹೋರಾಟಕ್ಕೆ ಕ್ಷೇತ್ರ ಜೊತೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಉಳುವವನೇ ಹೊಲದೊಡೆಯ

ಈ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಸಚಿವ, ಬಿಜೆಪಿ ಮುಖಂಡ ಹರತಾಳು ಹಾಲಪ್ಪ, ನಾವು ಉತ್ತಿಬಿತ್ತಿದ ಜಮೀನು ನಮ್ಮದು. ನಾಡಿಗೆ ಬೆಳಕು ಕೊಡಲು ಬದುಕನ್ನೇ ತ್ಯಾಗ ಮಾಡಿದ ನಾವು ಇಂದು ಮತ್ತೊಮ್ಮೆ ನನ್ನ ಕಾಲ ಕೆಳಗಿನ ಭೂಮಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ದುರಂತ ಎಂದರು.

ಆರು ದಶಕದ ಹಿಂದೆ ನಾಡಿಗೆ ಬೆಳಕು ಕೊಡಲು ಮನೆಮಠ ಕಳೆದುಕೊಂಡು ಸಂತ್ರಸ್ತರಾದ ಜನ ತಮ್ಮ ಸ್ವಂತ ಪ್ರಯತ್ನದಿಂದ ದುಡಿದು ಕಟ್ಟಿದ ತೋಟ-ಮನೆ- ಜಮೀನನ್ನು ಈಗ ಮತ್ತೆ ಅರಣ್ಯ ಕಾಯ್ದೆ, ಸರ್ಕಾರಿ ಜಾಗದ ಹೆಸರಲ್ಲಿ ಎತ್ತಂಗಡಿ ಮಾಡುತ್ತಿರುವುದು, ಕೇಸು ಹಾಕಿ ಜೈಲಿಗೆ ಕಳಿಸುತ್ತಿರುವುದು ಮಹಾ ದ್ರೋಹದ ಸಂಗತಿ ಎಂದು ಹಾಲಪ್ಪ ಕಿಡಿಕಾರಿದರು.

ಕಾಗೋಡು ಚಳವಳಿ ನೆನಪಿಸಿದ ರ್ಯಾಲಿ

ಹೋರಾಟದ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ರೈತರು ಟ್ರ್ಯಾಕ್ಟರ್ ಹತ್ತಿ ಸಾಗರ ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದರು. ಸಾವಿರಾರು ರೈತರು ಹಸಿರು ಬಾವುಟ ಹಿಡಿದು, ಹಸಿರು ಶಾಲು ಹಾಕಿ ಸಾಗರ ಪಟ್ಟಣದಲ್ಲಿ ಕಾಗೋಡು ಚಳವಳಿಯ ಕಾಲದ ಐತಿಹಾಸಿಕ ರೈತ ಹೋರಾಟವನ್ನು ನೆನಪಿಸಿದರು.

ಪಟ್ಟಣದ ಗಣಪತಿ ದೇವಾಲಯದ ಎದುರು ಆರಂಭವಾದ ಪ್ರತಿಭಟನಾ ಮೆರವಣಿಗೆ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾದು, ಉಪ ವಿಭಾಗಾಧಿಕಾರಿ ಕಚೇರಿ ಆವರಣವನ್ನು ತಲುಪಿತು.

ಮುಳುಗಡೆ ಸಂತ್ರಸ್ತ ರೈತ ಹೋರಾಟ ಸಮಿತಿಯ ತೀ ನಾ ಶ್ರೀನಿವಾಸ್, ಎಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ನಗರ ಹೋಬಳಿ ನಾಗರಿಕ ವೇದಿಕೆಯ ಅಧ್ಯಕ್ಷ ವಿ ಜಿ ಶ್ರೀಕರ್ ಹೋರಾಟದ ನೇತೃತ್ವ ವಹಿಸಿದ್ದಾರೆ.

ಪ್ರತಿಭಟನಾ ರ್ಯಾಲಿಯಲ್ಲಿ ಸಾಮಾಜಿಕ ಹೋರಾಟಗಾರ, ಲೇಖಕ ಜಿ ಟಿ ಸತ್ಯನಾರಾಯಣ ತುಮರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಎಸಿ ಕಚೇರಿಯಲ್ಲೇ ಅಡುಗೆ, ಊಟ

ಎಸಿ ಕಚೇರಿಯ ಆವರಣದಲ್ಲೇ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದ್ದು, ಭಾನುವಾರ ಸಂಜೆಯೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ರಾತ್ರಿ ಅಲ್ಲಿಯೇ ಮಲಗಿದ್ದರು. ಹಾಗಾಗಿ ಎಸಿ ಕಚೇರಿಯ ಆವರಣ ರೈತರ ಅಡುಗೆ ಮನೆಯಾಗಿ, ಮಲಗುವ ಹಜಾರವಾಗಿ ಪರಿವರ್ತನೆಯಾಗಿತ್ತು.

ಪ್ರತ್ಯೇಕ ರಾಜ್ಯ ಕೂಗು ಮೊಳಗಿಸಿದ ರೈತರು

ಮಲೆನಾಡಿನ ಶರಾವತಿ, ತುಂಗಾ- ಭ್ರದ್ರಾ, ವಾರಾಹಿ, ಚಕ್ರಾ, ಸಾವೇಹಕ್ಲು ಸೇರಿದಂತೆ ವಿವಿಧ ನದಿಗಳ ಕಣಿವೆಯಲ್ಲಿ ನೀರಾವರಿ ಮತ್ತು ಜಲ ವಿದ್ಯುತ್‌ ಉದ್ದೇಶಕ್ಕಾಗಿ ಸರಣಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಸಂತ್ರಸ್ತರಾಗಿ ಭೂಮಿ- ಮನೆ ಕಳೆದುಕೊಂಡ ರೈತರಿಗೆ ಏಳು ದಶಕ ಕಳೆದರೂ ಈವರೆಗೆ ನ್ಯಾಯಯುತ ಪರಿಹಾರ ಮತ್ತು ಪುನರ್ವಸತಿ ಆಗಿಲ್ಲ. ಜೊತೆಗೆ ಸಂತ್ರಸ್ತರು ಬದುಕು ಕಟ್ಟಿಕೊಂಡು ಭೂಮಿಯನ್ನೂ ಇದೀಗ ಅರಣ್ಯ ಮತ್ತು ಕಂದಾಯ ಕಾಯ್ದೆಗಳ ಅಸ್ತ್ರ ಪ್ರಯೋಗಿಸಿ ಕಿತ್ತುಕೊಂಡು ಸಂತ್ರಸ್ತರ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಲಾಗುತ್ತಿದೆ ಎಂದು ಆರೋಪಿಸಿ ಸಾಗರವನ್ನು ಕೇಂದ್ರವಾಗಿಟ್ಟುಕೊಂಡು ಮಲೆನಾಡು ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ನಾಡಿನ ಅಭಿವೃದ್ಧಿಗಾಗಿ ಜೀವನ ತ್ಯಾಗ ಮಾಡಿದ ಜನರಿಗೆ ಸರ್ಕಾರಗಳು ಎಸಗುತ್ತಿರುವ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಪ್ರತಿರೋಧಿಸಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಪ್ರತ್ಯೇಕ ಮಲೆನಾಡು ರಾಜ್ಯದ ಕೂಗು ಮೊಳಗಿಸಿದ್ದಾರೆ.

Tags:    

Similar News