ಇಲ್ಲಿ ಕಾಗೆಗಳದ್ದೇ ಕಲರವ! ಭಟ್ಕಳ ಸಮುದ್ರ ಕಿನಾರೆಯ ಕಾಗೆಗುಂದದ ನಿಜ ಕಥೆಯಿದು...

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮುದ್ರ ಕಿನಾರೆಯಲ್ಲಿ ಈ ದೃಶ್ಯ ಸಾಮಾನ್ಯ. ಕಾಗೆಗಳ ಹಿಂಡುಗಳು ಸೂರ್ಯೋದಯವಾದ ಕೂಡಲೇ ಆ ನಡುಗುಡ್ಡೆಯಿಂದ ಭಟ್ಕಳದತ್ತ ಹಾರಿ ಬರುತ್ತವೆ. ಸೂರ್ಯಾಸ್ತವಾಗುತ್ತಿದ್ದಂತೆ ಮತ್ತೆ ವಾಪಸಾಗುತ್ತವೆ.;

Update: 2024-12-19 02:30 GMT

ಅಬ್ಬ.. ಮಾನವನ ಉಪಟಳವಿಲ್ಲ! ಇಲ್ಲಿ ಹಕ್ಕಿಗಳೇ ಎಲ್ಲ! ಮನುಷ್ಯನ ಸಹವಾಸ ಬೇಡವೆಂದೇನೋ.. ಗೊತ್ತಿಲ್ಲ.  ಕಾ .. ಕಾ.. ಎನ್ನುತ್ತಾ ಕಾಗೆಗಳು ಭಟ್ಕಳ ಸುತ್ತುಮುತ್ತಲಿನ ಊರುಗಳಲ್ಲಿ ಹಾರಾಡಿ, ಹುಳಹುಪ್ಪಟೆ ತಿಂದು ಊರನ್ನೆಲ್ಲಾ ಶುಚಿಮಾಡಿ,  ಸಂಜೆಯಾಗುತ್ತಿದ್ದಂತೆ ಸಮುದ್ರದಲ್ಲಿರುವ ಚಿಕ್ಕ ದ್ವೀಪದಂತಿರುವ ಗುಡ್ಡಕ್ಕೆ ಹಾರಿಹೋಗಿ ತಮ್ಮ ಗೂಡು ಸೇರುತ್ತವೆ. ಮರಿಗಳ ಲಾಲನೆಯನ್ನೂ ಮಾಡುತ್ತವೆ.  

ಇಂತಹ ಉದಾಹರಣೆ ಬೇರೆಲ್ಲಿದೆಯೋ ಗೊತ್ತಿಲ್ಲ. ಆದರೆ,  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮುದ್ರ ಕಿನಾರೆಯಲ್ಲಿ ಈ ದೃಶ್ಯ ಸಾಮಾನ್ಯ. ಕಾಗೆಗಳ ಹಿಂಡುಗಳು  ಸೂರ್ಯೋದಯವಾದ ಕೂಡಲೇ ಆ ನಡುಗುಡ್ಡೆಯಿಂದ ಭಟ್ಕಳದತ್ತ ಹಾರಿ ಬರುತ್ತವೆ. ಸೂರ್ಯಾಸ್ತವಾಗುತ್ತಿದ್ದಂತೆ ಮತ್ತೆ ವಾಪಸಾಗುತ್ತವೆ.  ಬೇರೆ ಹಕ್ಕಿಗಳು ಇದ್ದರೂ, ಕಾಗೆಗಳೇ ಹೆಚ್ಚಾಗಿರುವುದರಿಂದ ಕಾಡಿನಂತೆ ಮಾರ್ಪಾಡಾಗಿರುವ ಈ ನಡುಗುಡ್ಡೆಯನ್ನು ʼಕಾಗೆಗುಂದʼ ಎನ್ನಲಾಗುತ್ತದೆ. ಕುಂದ ಅಂದ್ರೆ ಗುಡ್ಡ ಎಂದರ್ಥ. ಕಾಗೆಗಳಿರುವ ಕುಂದ ಕಾಗೆ ಕುಂದವಾಗಿದೆ ಹಾಗೂ ಆಡುಬಳಕೆಯಲ್ಲಿ ಕಾಗೆಗುಂದವಾಗಿದೆ.

ಈ ಕಾಗೆಗುಂದ  ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿ ಹೆಸರಿನ ಸುಂದರ ಊರಿರುವ  ಸಮುದ್ರ ದಂಡೆಯಿಂದ ಎರಡು‌ ಕಿಮೀ ದೂರದ ಆಳ ಸಮುದ್ರದಲ್ಲಿ ತಲೆಯೆತ್ತಿ ನಿಂತಿದೆ. ಆಳ ಸಮುದ್ರದಲ್ಲಿ ಅತ್ಯಂತ ಸುಂದರವಾಗಿ ಕಾಣುವ ಈ "ಕಾಗೆಗುಂದ" ಹೆಸರಿನ  ಈ ನಡುಗಡ್ಡೆಯ ಕಾಡಲ್ಲಿ ಮನುಷ್ಯರ ವಾಸವಿಲ್ಲ. ಆದರೆ, ಇದು . ಕಾಗೆಗಳ ಸಹಿತ ವಿವಿದ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಈ ಸುಂದರ ಈ ಸುಂದರ ಕಾಗೆಗುಂದದ ವಿಶೇಷವೆಂದರೆ  ಸ್ವತಃ ಪಕ್ಷಿಗಳೇ ನಡುಗಡ್ಡೆಯಲ್ಲಿ ಅರಣ್ಯ ಬೆಳೆಸಿ ಅದು ಹಚ್ಚಹಸಿರಾಗಿ ಇನ್ನಷ್ಟು ಸುಂದರವಾಗಿ ಕಂಗೊಳಿಸುವಂತೆ ಮಾಡಿವೆ.


ಪಕ್ಷಿಗಳು ಈ ನಡುಗಡ್ಡೆಯಲ್ಲಿ ಹೇಗೆ ಅರಣ್ಯ ಬೆಳೆಸಲು‌ ಸಾಧ್ಯ?

ಕುಂದ ಜನವಸತಿ ಇರುವ ತೆಂಗಿನಗುಂಡಿ ಊರಿಗೆ ಹತ್ತಿರವಿರುವ‌ ನಡುಗಡ್ಡೆ. ರಾತ್ರಿ ಸಮಯದಲ್ಲಿ ಕುಂದ ನಡುಗಡ್ಡೆಯಲ್ಲಿ ವಾಸ್ತವ್ಯ ಹೂಡುವ‌ ಪಕ್ಷಿಗಳು ಸೂರ್ಯೋದಯವಾಗುತ್ತಿದ್ದಂತೆ ಜನವಸತಿ ಪ್ರದೇಶವಿರುವ ತೆಂಗಿನಗುಂಡಿ, ಅಳ್ವೇಕೋಡಿ, ಜಾಲಿ ಊರಿಗೆ ಹಾರಿಬರುತ್ತವೆ. ಇಲ್ಲಿ ದಿನವಿಡಿ ಕಳೆದು ಸಂಜೆ ವಾಪಾಸ್ ಕುಂದ‌‌ ನಡುಗಡ್ಡೆಗೆ ಹಾರಿಹೊಗುತ್ತವೆ ಹಾಗೆ ವಾಪಾಸ್ ಹೋಗುವಾಗ ಗೂಡಿನಲ್ಲಿರುವ ಮರಿಗಳಿಗೆ ವಿವಿಧ ಜಾತಿಯ ಹಣ್ಣು‌-ಕಾಯಿಗಳನ್ನು ಕಚ್ಚಿಕೊಂಡು ಹೋಗುತ್ತವೆ.  ಹಾಗೆ ತಿಂದು ಬಿಸಾಡಿದ,  ಹಕ್ಕಿ ಹಿಕ್ಕೆಗಳಿಂದ ನೆಲ ಸೇರಿದ ಬೀಜಗಳು ಮಳೆಗಾಲದಲ್ಲಿ ಚಿಗುರೊಡೆದು ಬೆಳೆದಿದ್ದರಿಂದ ಜನವಸತಿ ಇಲ್ಲದ "ಕುಂದ" ( ಕಾಗೆ ಕುಂದ) ನಡುಗಡ್ಡೆಯಲ್ಲಿ ದಟ್ಟವಾದ ಅರಣ್ಯ ಬೆಳೆದಿದೆ. ಇದರಲ್ಲಿ ಪಕ್ಷಿಗಳ ನೂರಾರು ವರ್ಷಗಳ ಶ್ರಮ ಅಡಗಿದೆ ಎಂದು ಸ್ಥಳೀಯ ನಿವಾಸಿ ಶಂಕರ್ ಮೋಗೆರ್   ಅಭಿಪ್ರಾಯಪಡುತ್ತಾರೆ.


ನೂರಾರು ವರ್ಷಗಳ ಪರಿಶ್ರಮದಿಂದ ಪಕ್ಷಿಗಳು ನೈಸರ್ಗಿಕವಾಗಿ ಕಾಡನ್ನು ಬೆಳೆಸಿಕೊಂಡು ಮಾನವ‌ ಸಮುದಾಯದಿಂದ ಯಾವುದೇ ರೀತಿಯಲ್ಲಿ ಮಾನವನ ಉಪಟಳದಿಂದ ಅಡಚಣೆ ಆಗದ ರೀತಿಯಲ್ಲಿ ವಾಸ್ತವ್ಯ ಮಾಡಲು ಒಂದು ಸುಂದರ ನಡುಗಡ್ಡೆ ಆಯ್ಕೆ ಮಾಡಿಕೊಂಡಿರುವುದು, ಅವುಗಳ ಸಂತತಿ ಇನ್ನಷ್ಟು ವೃದ್ದಿಯಾಗಳು ಪೂರಕವಾಗಿವೆ. ಭಟ್ಕಳ ಸುತ್ತಮುತ್ತಲಿನ ‌ಕರಾವಳಿ ತೀರದಲ್ಲಿ "ಕುಂದ" ಮಾದರಿಯ ಹಲವಾರು ನಡುಗಡ್ಡೆಗಳಿವೆ ಈ ನಡುಗಡ್ಡೆಗಳು ಕೆಲವೊಂದು‌ ಜಾತಿಯ ಮೀನು‌, ಆಮೆ ಹಾಗೂ ಸಿಗಡಿಗಳ ಸಂತಾನೋತ್ಪತ್ತಿಯ ತಾಣವಾಗಿವೆ ಎಂದು ದೇವಿದಾಸ ಮೋಗೆರ‌ ಹೇಳುತ್ತಾರೆ.

ನೂರಾರು ಏಕರೆ ಪ್ರದೇಶದಲ್ಲಿ ವ್ಯಾಪಿಸಿರುವ " ಕುಂದ ನಡುಗಡ್ಡೆಯಲ್ಲಿ ಕಾಗೆಗಳು‌ ದೊಡ್ಡ ಪ್ರಮಾಣದಲ್ಲಿ ವಾಸ್ತವ್ಯ‌ ಮಾಡುತ್ತವೆ. ಉಳಿದಂತೆ ಗುಬ್ಬಚ್ಚಿ, ಗಿಡುಗ, ಪಾರಿವಾಳ, ಬಾವಲಿ, ಹದ್ದುಗಳು, ಗೂಬೆಗಳು ಈ ಪ್ರದೇಶದಲ್ಲಿ ವಾಸ್ತವ್ಯಮಾಡುತ್ತವೆ. ಹಾವುಗಳು, ಆಮೆಗಳು ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇವೆ ಎಂದು ಈ ನಡುಗಡ್ಡೆಗೆ ಹಲವಾರು ಬಾರಿ ಭೇಟಿ ನೀಡಿದ ಕೃಷ್ಣ ಮೋಗೆರ ಹೇಳುತ್ತಾರೆ.


ಪ್ರವಾಸಿಗಳ ತಕರಾರಿಲ್ಲ

ಭಟ್ಕಳದ "ಕುಂದ‌" ನಡುಗಡ್ಡೆಯ ಇನ್ನೊಂದು ವಿಶೇಷ ವೆಂದರೆ ಅದರ ಸುತ್ತ ಯಾವುದೇ ರೀತಿ‌ ಬೀಚ್ ಇಲ್ಲ ಒಂದು‌ ವೇಳೆ ಬೀಚ್ ಇದ್ದರೆ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ನಾನಾ ರೀತಿಯ ನಿರ್ಮಾಣ ಕಾಮಗಾರಿಗಳು ನಡೆಯುತ್ತಿತ್ತು. ಆಗ ಅದು ಬಂಡವಾಳಶಾಹಿಗಳ ವಾಣಿಜ್ಯತಾಣವಾಗಿ ಹಾಗೂ ಪ್ರವಾಸಿಗರ ಮೋಜು ಮಸ್ತಿಯ ಕೇಂದ್ರವಾಗಿ ಪರಿವರ್ತನೆಯಾಗುತ್ತಿತ್ತು ಇದರಿಂದ ನಡುಗಡ್ಡೆಯೂ ಮಾಲಿನ್ಯದ ಕೇಂದ್ರ ವಾಗುವುದರ ಜೊತೆಗೆ ಸುತ್ತ ಮುತ್ತಲಿನ ಕಡಲು ಮಾಲಿನ್ಯ ಕಾರಕವಾಗುತಿತ್ತು. ಬಂಡವಾಳ ಶಾಹಿಗಳ‌ ಕಾಕದೃಷ್ಟಿಗೆ ಬೀಳದೆ ಇರುವುದರಿಂದ ಇಂದಿಗೂ ಅದು ಕಾಗೆಗಳ ನೆಚ್ಚಿನ ತಾಣವಾಗಿ ಉಳಿದಿದೆ.

ಯಾಕೆಂದರೆ ಈ ನಡುಗುಡ್ಡೆಗೆ ಹೋಗುವುದು ಅಷ್ಟು ಸುಲಭವಲ್ಲ. ಕಲ್ಲುಬಂಡೆಗಳು ಹಾಗೂ ಆಳ ಸಮುದ್ರ.. ಇವು ಪ್ರವಾಸಿಗರನ್ನು  ಆ ನಡುಗುಡ್ಡೆಗೆ ಹೋಗುವುದನ್ನು ತಪ್ಪಿಸಿವೆ. ಕೇವಲ ಸ್ಥಳೀಯ ಮೀನುಗಾರರು ಉಪ್ಪು ಸಂಗ್ರಹಿಸಲು, ಮೀನು ಹಿಡಿಯುಲು ಕಾಗೆಗುಂದ ಬಳಿ ಸಾಗಬೇಕಷ್ಟೇ. ಆದರೆ, ಆ ಗುಡ್ಡ ದಟ್ಟಕಾಡಿನಂತಾಗಿರುವುದರಿಂದ ಮೀನುಗಾರರಿಗೂ ಆ ಬೆಟ್ಟ ಹತ್ತುವ ಬಗ್ಗೆ ಒಂದು ರೀತಿಯ ಭಯ ಸೃಷ್ಟಿಸುತ್ತದೆ. ಇವೆಲ್ಲಾ ಕಾರಣಗಳಿಗಾಗಿ ಕಾಗೆಗುಂದ ಸುರಕ್ಷಿತವಾಗಿದೆ ಎಂದೇ ಹೇಳಬಹುದು.


ಪರಿಶುದ್ದ ಪರಿಸರದಲ್ಲಿ ಶುದ್ದ ಉಪ್ಪು

ಕುಂದ ನಡುಗಡ್ಡೆಯಲ್ಲಿ ಪರಿಶುದ್ದ ಉಪ್ಪು ಸಿಗುತ್ತದೆ. ನಡುಗಡ್ಡೆಯ ಸಮತಟ್ಟಾದ ಬಂಡೆಗಳ ಮೇಲೆ ಸಂಗ್ರಹವಾದ ಸಮುದ್ರದ ಅಲೆಗಳ ನೀರು ಬಿಸಿಲಿಗೆ ಆವಿಯಾಗಿ ಶುದ್ದ ಉಪ್ಪು ಉತ್ಪತ್ತಿಯಾಗುತ್ತದೆ. ಪ್ರತಿ ಎಪ್ರಿಲ್- ಮೇ ತಿಂಗಳ ಸಮಯದಲ್ಲಿ ಸ್ಥಳೀಯ ಮೀನುಗಾರರು ದೋಣಿಗಳ ಮೂಲಕ ಬಂಡೆಗಳ ಮೇಲೆ ಉತ್ಪತ್ತಿಯಾದ ಉಪ್ಪನ್ನು ಸಂಗ್ರಹಿಸಿ ದಿನ ನಿತ್ಯದ ಬಳಕೆಗೆ ಉಪಯೋಗಿಸುತ್ತಾರೆ.

ಸ್ಥಳೀಯ‌ ಮೀನುಗಾರ ನಿಂಗಯ್ಯ ನಾಗಪ್ಪ ಮೋಗೆರ್ ಅವರ ಪ್ರಕಾರ ವರ್ಷಕ್ಕೊಮ್ಮೆ ಕುಂದ‌ ನಡುಗಡ್ಡೆಗೆ ಹೋಗಿ ಅಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾದ ಪರಿಶುದ್ದ ಉಪ್ಪನ್ನು ಸಂಗ್ರಹಿಸಿ ಮನೆಗೆ ತಂದು ವರ್ಷಪೂರ್ತಿ ಅಡುಗೆಗೆ ಬಳಸುತ್ತೇವೆ ಎನ್ನುತ್ತಾರೆ. ಅದೇ ರೀತಿ ಕಲ್ಲಿನ‌ ಮೇಲೆ ಬೆಳೆಯುವ ಸಮುದ್ರದ ಚಿಪ್ಪುಗಳನ್ನು ಸಂಗ್ರಹಿಸಲು ಆಗಾಗ ಹೋಗುತ್ತೇವೆ ಎಂದು ಹೇಳುತ್ತಾರೆ.

Tags:    

Similar News