ನ್ಯಾ.ಶ್ರೀಶಾನಂದರ ಹೇಳಿಕೆ ವಿವಾದ | ವಿವಿಧ ಸಂಘಟನೆಗಳ ಆತಂಕ
ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ನ್ಯಾಯಾಲಯದ ಕಲಾಪದ ವೇಳೆ ನಿರ್ದಿಷ್ಟ ಸಮುದಾಯ ಮತ್ತು ಮಹಿಳಾ ವಕೀಲರನ್ನು ಉದ್ದೇಶಿಸಿ ಮಾಡಿರುವ ಹೇಳಿಕೆಗಳು ವಿವಾದದ ಕಿಡಿ ಹೊತ್ತಿಸಿವೆ.;
ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ನ್ಯಾಯಾಲಯದ ಕಲಾಪದ ವೇಳೆ ನಿರ್ದಿಷ್ಟ ಸಮುದಾಯ ಮತ್ತು ಮಹಿಳಾ ವಕೀಲರನ್ನು ಉದ್ದೇಶಿಸಿ ಮಾಡಿರುವ ಹೇಳಿಕೆಗಳು ವಿವಾದದ ಕಿಡಿ ಹೊತ್ತಿಸಿವೆ. ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ ಸ್ವಯಂಪ್ರೇರಿತ ವಿಚಾರಣೆಗೆ ಚಾಲನೆ ನೀಡಿದೆ. ಈ ನಡುವೆ ʼಜಾಗೃತ ನಾಗರಿಕರು ಕರ್ನಾಟಕʼ ಸಂಘಟನೆ ಹಾಗೂ ರಾಜ್ಯ ವಕೀಲರ ಸಂಘಗಳು ಕೂಡ ನ್ಯಾಯಮೂರ್ತಿಗಳ ಹೇಳಿಕೆಗೆ ಆತಂಕ ವ್ಯಕ್ತಪಡಿಸಿವೆ.
ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ
'ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನಗರದ ಮುಸ್ಲಿಂ ಸಮುದಾಯ ಹೆಚ್ಚಾಗಿ ಇರುವ ಸ್ಥಳವನ್ನು ಭಾರತವಲ್ಲ ಪಾಕಿಸ್ತಾನ ಎಂದು ಹೈಕೋರ್ಟ್ ನ್ಯಾಯಮೂರ್ತಿಯವರು ಹೇಳಿದ್ದಾರೆ ಎಂದು ವರದಿಯಾಗಿರುವುದು ಆಘಾತ ಉಂಟುಮಾಡಿದೆ' ಎಂದು 'ಜಾಗೃತ ನಾಗರಿಕರು ಕರ್ನಾಟಕ' ಹೇಳಿದೆ.
ಜಾಗೃತ ನಾಗರಿಕರು ಕರ್ನಾಟಕ ಸಂಘಟನೆಯ ಕೆ. ಮರುಳ ಸಿದ್ದಪ್ಪ, ಜಿ. ರಾಮಕೃಷ್ಣ, ಎಸ್. ಜಿ. ಸಿದ್ದರಾಮಯ್ಯ, ರುದ್ರಪ್ಪ ಹನಗವಾಡಿ, ಬಿ. ಶ್ರೀಪಾದ ಭಟ್, ಮೀನಾಕ್ಷಿ ಬಾಳಿ, ಕೆ. ಎಸ್. ವಿಮಲಾ, ಎನ್.ಗಾಯತ್ರಿ, ಟಿ. ಸುರೇಂದ್ರ ರಾವ್, ವಸಂತ್ ರಾಜ್ ಎನ್.ಕೆ., ವಾಸುದೇವ ಉಚ್ಚಿಲ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
'ಸರ್ವ ಧರ್ಮ ಸಮಭಾವದ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ ನಮ್ಮದು. ಈಗಾಗಲೇ ವಿವಿಧ ರೀತಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ನಡೆಸುವ ಹಲವು ದೌರ್ಜನ್ಯಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯಪೀಠದಿಂದ ಬರುವ ಇಂತಹ ಅಭಿಪ್ರಾಯಗಳು ಜನರ ಮಧ್ಯೆ ಸಾಮರಸ್ಯವನ್ನು ಹದಗೆಡಿಸಲು ಕಾರಣವಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ವೈಯಕ್ತಿಕ ನೆಲೆಯಲ್ಲಿ ನಡೆಯಬೇಕಾದ ಪೂಜೆ, ಹಬ್ಬಗಳು ಸಾರ್ವಜನಿಕ ಪ್ರಚಾರ ಸಾಧನವಾಗುವುದು ಮತ್ತು ನ್ಯಾಯಾಂಗದಲ್ಲಿರುವವರು ರಾಜಕೀಯ ವ್ಯಕ್ತಿಗಳಿಂದ ದೂರ ಇರಬೇಕು ಎಂಬ ಸದಾಶಯಗಳ ಗಡಿ ಮೀರಿ ಪ್ರಧಾನ ಮಂತ್ರಿಯವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಮನೆಯ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ವಿಡಿಯೊ ಹಂಚಿಕೆ ಆಗಿದೆ. ಇವೆಲ್ಲವೂ ಬಹುತ್ವ ಭಾರತದ ಅಡಿಗಲ್ಲು ಸಡಿಲ ವಾಗುತ್ತಿದೆಯೇನೋ ಎಂಬ ಆತಂಕ ಹುಟ್ಟಿಸಿವೆ. ಇಂತಹ ಸ್ಥಿತಿ ಮರುಕಳಿಸದಂತೆ ಗಮನ ಹರಿಸುವುದು ಅಗತ್ಯವಿದೆ' ಎಂದು ಅವರೆಲ್ಲ ತಿಳಿಸಿದ್ದಾರೆ.
ಸಿಜೆಗೆ ವಕೀಲರ ಸಂಘದ ಪತ್ರ
'ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ನ್ಯಾಯಾಲಯದ ತೆರೆದ ಕಲಾಪದಲ್ಲಿ ಕಿರಿಯ ವಕೀಲರನ್ನು ನಿರುತ್ಸಾಹಗೊಳಿಸುವ ಮತ್ತು ಮಹಿಳಾ ವಕೀಲರನ್ನು ಮುಜುಗರಕ್ಕೆ ಈಡು ಮಾಡಿದ ಪ್ರಸಂಗಗಳ ಬಗ್ಗೆ ದೂರುಗಳು ಬರುತ್ತಿವೆ' ಎಂದು ಬೆಂಗಳೂರು ವಕೀಲರ ಸಂಘ ಆತಂಕ ವ್ಯಕ್ತಪಡಿಸಿದೆ.
ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ (ಸಿಜೆ) ಎನ್.ವಿ. ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್ ಅವರು, 'ಕೆಲವು ದಿನಗಳವರೆಗೆ ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ಅನ್ನು ನಿರ್ಬಂಧಿಸಬೇಕು' ಎಂದು ಕೋರಿದ್ದಾರೆ. ನ್ಯಾಯಮೂರ್ತಿ ಶ್ರೀಶಾನಂದ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಗಂಭೀರ ವಿವಾದ ಸೃಷ್ಟಿಸಿವೆ. ಅವರ ಹೇಳಿಕೆಗಳು ವೈರಲ್ ಆಗಿವೆ. ಇದರಿಂದ ವಕೀಲಿ ವೃತ್ತಿಯನ್ನು ಪರಿಶುದ್ಧ ಎಂದು ಪರಿಗಣಿಸಿರುವ ಎಲ್ಲ ವಕೀಲರ ಭಾವನೆಗಳಿಗೆ ನೋವುಂಟಾಗಿದೆ' ಎಂಬ ಅಂಶವನ್ನು ಪತ್ರದಲ್ಲಿ ಬರೆಯಲಾಗಿದೆ.
'ನ್ಯಾಯಮೂರ್ತಿ ಶ್ರೀಶಾನಂದ ಅವರು ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಮೂದಲಿಕೆಗಳು ಅಪ್ರಸ್ತುತವಾಗಿವೆ. ಆದರೆ, ಅವರು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಅವರು ಮಾಡಿರುವ ಉತ್ತಮ ಕೆಲಸಗಳಿಗೆ ಅಪಚಾರ ಉಂಟಾಗುತ್ತಿದೆ' ಎಂದು ವಿವರಿಸಲಾಗಿದೆ.
'ನ್ಯಾಯಾಲಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಸಂಪೂರ್ಣ ನಿರ್ಬಂಧಿಸದೇ ಹೋದರೆ ಪರಿಸ್ಥಿತಿ ಕೈಮೀರಲಿದೆ. ಸಾರ್ವಜನಿಕರ ಮನಸ್ಸಿನಲ್ಲಿ ನ್ಯಾಯಾಲಯಗಳ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಕುರಿತು ತಾವು ತುರ್ತು ಕ್ರಮ ಕೈಗೊಳ್ಳುತ್ತೀರಿ ಎಂಬ ಆಶಾಭಾವನೆ ಹೊಂದಿದ್ದೇವೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.