Bangalore Stampede | ಆರ್‌ಸಿಬಿ ಆತುರ, ಕೆಎಸ್‌ಸಿಎ ನಿರ್ಲಕ್ಷ್ಯವೇ ಕಾರಣ; ನ್ಯಾಯಾಂಗ ತನಿಖಾ ವರದಿ ಪ್ರಕಟ
ಜೂ. 4 ರಂದು ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿತ್ತು.;
ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಅವರು ಸಿಎಂಗೆ ಕಾಲ್ತುಳಿತ ಘಟನೆಯ ತನಿಖಾ ವರದಿ ಸಲ್ಲಿಸಿದರು
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನಿರ್ಲಕ್ಷ್ಯವೇ ಕಾರಣ ಎಂಬುದು ನಿವೃತ್ತ ನ್ಯಾ. ಮೈಕಲ್ ಡಿ. ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗದ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಲ್ತುಳಿತ ಘಟನೆಯ ತನಿಖೆ ಪೂರ್ಣಗೊಳಿಸಿರುವ ನಿವೃತ್ತ ನ್ಯಾಯಮೂರ್ತಿ ಡಿ ಕುನ್ಹಾ ನೇತೃತ್ವದ ಆಯೋಗ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ. ಆರ್‌ಸಿಬಿಯ ಆತುರದ ನಿರ್ಧಾರಗಳು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ಲಕ್ಷ್ಯವು ಕಾಲ್ತುಳಿತಕ್ಕೆ ಪ್ರಮುಖ ಕಾರಣ. ಜತೆಗೆ ಪೊಲೀಸರು ಕೂಡ ಸರಿಯಾಗಿ ನಿಗಾ ವಹಿಸದಿರುವುದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ ಎಂದು ಹೇಳಲಾಗಿದೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನ್ಯಾ. ಡಿ ಕುನ್ಹಾ ಅವರು ಮುಚ್ಚಿದ ಲಕೋಟೆಯಲ್ಲಿ ಕಾಲ್ತುಳಿತ ಘಟನೆಯ ತನಿಖಾ ವರದಿ ಸಲ್ಲಿಸಿದರು.
ಜೂ. 4 ರಂದು ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಘಟನೆಯ ವಿವರಗಳು, ಸಂದರ್ಭದ ಕುರಿತಂತೆ ಮಾಹಿತಿ ಹಂಚಿಕೊಳ್ಳುವಂತೆ ಆಯೋಗವು ಸಾರ್ವಜನಿಕ ಅಭಿಪ್ರಾಯ, ಹೇಳಿಕೆಗಳಿಗೆ ಅವಕಾಶ ನೀಡಿತ್ತು. ಅಲ್ಲದೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯೋಜಕರನ್ನು ವಿಚಾರಣೆಗೆ ಒಳಪಡಿಸಿ, ಅಂತಿಮವಾಗಿ ವರದಿ ಸಲ್ಲಿಸಿದೆ.
ಕಾಲ್ತುಳಿತ ಘಟನೆ ಕುರಿತಂತೆ ಈಗಾಗಲೇ ಸಿಐಡಿ ತನ್ನ ತನಿಖಾ ವರದಿಯಲ್ಲಿ ಸಲ್ಲಿಸಿದ್ದು, ಆರ್‌ಸಿಬಿಯೇ ದುರಂತಕ್ಕೆ ನೇರ ಹೊಣೆ ಎಂದು ಬೊಟ್ಟು ಮಾಡಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಡಲು ಆರ್ಸಿಬಿ ಆಡಳಿತ ಮಂಡಳಿ ತೆಗೆದುಕೊಂಡ ಆತುರದ ನಿರ್ಧಾರ ಕಾರಣ ಎಂದು ಸಿಐಡಿ ಮೂಲಗಳು ತಿಳಿಸಿದ್ದವು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ಕೆಎಸ್ ಸಿಎ, ಡಿಎನ್ಎ ಹಾಗೂ ಆರ್‌ಸಿಬಿ ಪ್ರಾಂಚೈಸಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.
ಕೆಎಸ್‌ಸಿಎ ಮೇಲೆ ಒತ್ತಡ ಹೇರಿದ್ದ ಕೊಹ್ಲಿ ಆಪ್ತ
ಆರ್‌ಸಿಬಿ ಪಂಜಾಬ್ ವಿರುದ್ಧ ಜಯಗಳಿಸಿದರೆ ಜೂನ್ 4 ರಂದೇ ವಿಜಯೋತ್ಸವ ಆಚರಿಸಬೇಕೆಂದು ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು. ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಲಂಡನ್‌ಗೆ ತೆರಳಿದರೆ ಮತ್ತೆ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂಬ ಕಾರಣ ಮುಂದಿಟ್ಟಿದ್ದ ಆಪ್ತ ನಿಖಿಲ್ ಸೋಸಲೆ ಕೆಎಸ್‌ಸಿಎ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಕೂಡ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ 'ಪ್ರಾಥಮಿಕವಾಗಿ ಹೊಣೆಗಾರ' ಎಂದು ಅಭಿಪ್ರಾಯಪಟ್ಟಿತ್ತು.
ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ನಂತರ, ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಮತ್ತು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿತ್ತು. ಈ ಘೋಷಣೆಯ ಪರಿಣಾಮವಾಗಿ ಸುಮಾರು 2.5 ಲಕ್ಷದಿಂದ 5 ಲಕ್ಷದಷ್ಟು ಅಭಿಮಾನಿಗಳು ಎಂ.ಜಿ. ರಸ್ತೆ ಮತ್ತು ಕಬ್ಬನ್ ರಸ್ತೆ ಪ್ರದೇಶಗಳಲ್ಲಿ ಏಕಾಏಕಿ ಜಮಾಯಿಸಿದ್ದರು.
" ಆರ್‌ಸಿಬಿ ಹೇಳಿಕೆಯು ಸುಮಾರು ಮೂರರಿಂದ ಐದು ಲಕ್ಷ ಜನರ ಜನಸಂದಣಿಗೆ ಕಾರಣವಾಗಿದೆ. ಆರ್‌ಸಿಬಿಯು ಪೊಲೀಸರಿಂದ ಸೂಕ್ತ ಅನುಮತಿ ಅಥವಾ ಒಪ್ಪಿಗೆ ಪಡೆದಿರಲಿಲ್ಲ" ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿತ್ತು.