Bengaluru Stampede| ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿಯೇ ಕಾರಣ: ಸಿಐಡಿ ವರದಿ
x
ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸೇರಿದ್ದ ಆರ್‌ಸಿಬಿ ಅಭಿಮಾನಿಗಳು

Bengaluru Stampede| ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿಯೇ ಕಾರಣ: ಸಿಐಡಿ ವರದಿ

ವಿರಾಟ್‌ ಕೊಹ್ಲಿ ಲಂಡನ್‌ಗೆ ತೆರಳಿದರೆ ಮತ್ತೆ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂಬ ಕಾರಣ ಮುಂದಿಟ್ಟಿದ್ದ ಆಪ್ತ ನಿಖಿಲ್‌ ಸೋಸಲೆ ಕೆಎಸ್‌ಸಿಎ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.


ಆರ್‌ಸಿಬಿ ವಿಜಯೋತ್ಸವದಂದು (ಜೂ. 4) ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಡಲು ಆರ್‌ಸಿಬಿ ಆಡಳಿತ ಮಂಡಳಿ ತೆಗೆದುಕೊಂಡ ಆತುರದ ನಿರ್ಧಾರವೇ ಕಾರಣ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕಾಲ್ತುಳಿತ ಘಟನೆಯ ನಂತರ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿತ್ತು. ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಪ್ರಾಂಚೈಸಿ ವಿರುದ್ದ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ನಂತರ ಕಬ್ಬನ್‌ ಪಾರ್ಕ್‌ನಲ್ಲಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು.

ಕೆಎಸ್‌ಸಿಎ ಮೇಲೆ ಒತ್ತಡ ಹೇರಿದ್ದ ಕೊಹ್ಲಿ ಆಪ್ತ

ಆರ್‌ಸಿಬಿ ಪಂಜಾಬ್‌ ವಿರುದ್ದ ಜಯಗಳಿಸಿದರೆ ಜೂನ್‌ 4 ರಂದೇ ವಿಜಯೋತ್ಸವ ಆಚರಿಸಬೇಕೆಂದು ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು. ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದರು. ವಿರಾಟ್‌ ಕೊಹ್ಲಿ ಲಂಡನ್‌ಗೆ ತೆರಳಿದರೆ ಮತ್ತೆ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂಬ ಕಾರಣ ಮುಂದಿಟ್ಟಿದ್ದ ಆಪ್ತ ನಿಖಿಲ್‌ ಸೋಸಲೆ ಕೆಎಸ್‌ಸಿಎ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟಿಕೆಟ್‌ ಗೊಂದಲವೂ ಕಾರಣ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದ ಆರ್‌ಸಿಬಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಉಚಿತ ಟಿಕೆಟ್‌ ಘೋಷಣೆ ಮಾಡಿದ್ದರು. ನಂತರ ಕೆಲವು ಮಂದಿಗಷ್ಟೇ ಟಿಕೆಟ್‌ ಎಂದು ತಿಳಿಸಿದ್ದರಿಂದ ಹೆಚ್ಚಿನ ಜನರು ಆಗಮಿಸಿದ್ದರು. ಈ ಮಾಹಿತಿ ಹಂಚುವುದಕ್ಕೂ ನಿಖಿಲ್‌ ಸೋಸಲೆಯೇ ಕಾರಣರಾಗಿದ್ದಾರೆ.

ಪ್ರವೇಶ ದ್ವಾರದ ಬಳಿ ಪೊಲೀಸರೆ ಇರಲಿಲ್ಲ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲು ಪೊಲೀಸರು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಹೆಚ್ಚು ಜನರು ಸೇರಿ ನೂಕುನುಗ್ಗಲು ಉಂಟಾದ ಪ್ರವೇಶದ್ವಾರಗಳ ಬಳಿ ಪೊಲೀಸರೇ ಇರಲಿಲ್ಲ. ವಿಧಾನಸೌಧದ ಬಳಿ ಕಾರ್ಯಕ್ರಮ ನಡೆದಿದ್ದರಿಂದ ಪೊಲೀಸರ ಗಮನ ಅಲ್ಲಿಯೇ ಇತ್ತು. ವಿಜಯೋತ್ಸವಕ್ಕೂ ಮುನ್ನ ಸಿಬ್ಬಂದಿ ನಿಯೋಜನೆಗೆ ರೋಲ್‌ಕಾಲ್‌ ಮಾಡಿರಲಿಲ್ಲ ಹಾಗೂ ಕೆಎಸ್‌ಆರ್‌ಪಿ ಸಿಬ್ಬಂದಿಗೂ ಸೂಕ್ತ ಮಾಹಿತಿ ನೀಡಿರಲಿಲ್ಲ. ಪಂದ್ಯಕ್ಕೆ ಬರುವಷ್ಟು ಜನರು ವಿಜಯೋತ್ಸವಕ್ಕೆ ಬರಬಹುದು ಎಂಬ ಸಂದೇಶ ರವಾನಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ

ಜೂನ್‌ 4 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು ಹಲವಾರು ಜನರು ಗಾಯಗೊಂಡಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಲು ಸರ್ಕಾರ ಸಿಐಡಿ, ಮ್ಯಾಜಿಸ್ಟೇರಿಯಲ್‌ ಹಾಗೂ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು.

Read More
Next Story