ಪಂಚಮಸಾಲಿ ಹೋರಾಟ ಹತ್ತಿಕ್ಕಲು ʼಪೊಲೀಸ್‌ಗಿರಿʼ: ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ
ʼದ ಪೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಅವರು,ನಮ್ಮ ಒಬ್ಬೇ ಒಬ್ಬ ಹೋರಾಟಗಾರರನ್ನು ಮುಟ್ಟಲು ಪ್ರಯತ್ನ ಮಾಡಿದರೆ, ಎರಡನೇ ನರಗುಂದ ಬಂಡಾಯ ಆಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದ್ದಾರೆ.;
ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನುಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಡಿದ್ದಾರೆ. ‘ದ ಫೆಡರಲ್ ಕರ್ನಾಟಕ’ಕ್ಕೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನಾವು 2ಎ ಮೀಸಲಾತಿ ಹೋರಾಟವನ್ನು ಮಾಡುತ್ತಿದ್ದೇವೆ. ಆದರೆ ಹಿಂದಿನ ಸರ್ಕಾರ ನಮ್ಮ ಹೋರಾಟವನ್ನು ಧಮನಿಸುವ ಕೆಲಸ ಮಾಡಿರಲಿಲ್ಲ.ಆದರೆ ಈಗಿನ ಸರ್ಕಾರ ಅಧಿಕಾರ ಬಳಸಿ ತೊಂದರೆ ಕೊಡುತ್ತಿದೆ ಎಂದಿದ್ದಾರೆ.
ʼದ ಫೆಡರಲ್ ಕರ್ನಾಟಕʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಂಚಮಸಾಲಿ ಹೋರಾಟದ ಬಗ್ಗೆ ಬಿಡಿಬಿಡಿಯಾಗಿ ವಿವರಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಹೋರಾಟವನ್ನು ಹತ್ತಿಕ್ಕಲು ಯಾವ ಯತ್ನ ನಡೆದಿದೆ ಎಂದು ವಿವರವಾಗಿ ಹೇಳಿಕೊಂಡಿದ್ದಾರೆ.
ಸರ್ಕಾರದಿಂದ ಹೋರಾಟ ಹತ್ತಿಕ್ಕುವ ಪ್ರಯತ್ನ
ʼಬೆಳಗಾವಿಯಲ್ಲಿ ನೀವು ಹೋರಾಟ ಮಾಡುವುದು ಬೇಡ ಎಂಬ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆಯೇʼ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಲಿಂಗಾಯತ ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕುವಂತಹ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ’ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
‘ಈಗಿನ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಮೂಲಕ ನಮ್ಮ ಪದಾಧಿಕಾರಿಗಳನ್ನು ಹೆದರಿಸಿ ಬೆದರಿಸುತ್ತಿದ್ದಾರೆ. ಇದರ ಉದ್ದೇಶ ಯಾರೂ ಹೋರಾಟಕ್ಕೆ ಬರಬಾರದು ಎಂಬುದು. ನಮ್ಮ ಒಬ್ಬೇ ಒಬ್ಬ ಹೋರಾಟಗಾರರನ್ನು ಮುಟ್ಟಲು ಪ್ರಯತ್ನ ಮಾಡಿದರೆ, ಎರಡನೇ ನರಗುಂದ ಬಂಡಾಯ (1980 ರಲ್ಲಿ ನರಗುಂದ ರೈತರ ಬಂಡಾಯ ಹಿಂಸೆಗೆ ತಿರುಗಿತ್ತು) ಆಗುವುದರಲ್ಲಿ ಸಂದೇಹವಿಲ್ಲ. ಅಂತಹ ಹಿಂಸಾತ್ಮಕ ಚಟುವಟಿಕೆಗಳಿಗೆ ಸರ್ಕಾರ ಆಸ್ಪದ ಕೊಡಬಾರದು. ಹಾಗೆ ಮಾಡಿದಲ್ಲಿ ಅದಕ್ಕೆ ಸರ್ಕಾರ ಹಾಗೂ ಪಂಚಮಸಾಲಿ ಋಣದಿಂದ ಶಾಸಕರಾದವರು ಜವಾಬ್ದಾರರಾಗಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಹೀಗಾಗಿರಲಿಲ್ಲ
"ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ 2ಎ ಮೀಸಲಾತಿ ಹೋರಾಟವನ್ನು ಜೋರಾಗಿ ಮಾಡಿದ್ದೆವು. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ಮಾಡಿದ್ದೆವು. ನಮ್ಮ ಕೂಗು ಸರ್ಕಾರಕ್ಕೆ ಕೇಳಲಿ ಎಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದೆವು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯಯತ್ನವನ್ನೂ ಮಾಡಿದ್ದೆವು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾಗಲೂ ನಮ್ಮ ಮೇಲೆ ಕೇಸ್ ಹಾಕಿರಲಿಲ್ಲ ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಮ್ಮ ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ," ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ನಮ್ಮ ಸಮುದಾಯದ ಬಗ್ಗೆ ಸಿದ್ದರಾಮಯ್ಯಗೆ ಕಾಳಜಿ ಇಲ್ಲ
"ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಡಬೇಕು ಎಂಬ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲ. ಅದಕ್ಕಾಗಿಯೇ ಸರ್ಕಾರ ಬಂದು ಎರಡು ವರ್ಷಗಳಾಗುತ್ತ ಬಂದರೂ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಹಿಂದಿನ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ ಹೆಗಡೆ ಅವರು ಸರ್ಕಾರಕ್ಕೆ ಈಗಾಗಲೇ ಮಧ್ಯಂತರ ವರದಿ ಕೊಟ್ಟಿದ್ದಾರೆ," ಎಂದು ಬಸವ ಸ್ವಾಮೀಜಿ ಹೇಳಿದ್ದಾರೆ.
ಆಗ ವಿಜಯೇಂದ್ರ, ಈಗ ಕಾಶಪ್ಪನವರ
‘ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಗ್ಗಟ್ಟಿನ ಕೊರತೆ ಇಲ್ಲ. ನಮ್ಮೊಂದಿಗಿದ್ದು ಹೋರಾಟ ಮಾಡಿದಂಥವರಿಗೆ ಸ್ವಲ್ಪ ಮಟ್ಟಿನ ಅಧಿಕಾರ ಸಿಕ್ಕಾಗ, ತಮ್ಮ ನಾಯಕರನ್ನು ಓಲೈಸಿ, ಹೆಚ್ಚಿನ ಅಧಿಕಾರ ಪಡೆದುಕೊಳ್ಳುವುದಕ್ಕಾಗಿ ಹೋರಾಟಕ್ಕೆ ಬರದೇ ಇರುವ ಪ್ರಯತ್ನ ಮಾಡುತ್ತಾರೆ. ನಮ್ಮ ಜೊತೆ ಇದ್ದ ಎಲ್ಲ ಹೋರಾಟಗಾರರು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಹಾಗೆಂದು ನಾನು ರಾಜಕಾರಣಿಗಳ ಮೇಲೆ ಅವಲಂಬಿತನಾಗಿಲ್ಲ. ಈಗ 12 ಜನ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಶಾಸಕರು ಹಾಗೆ ಮಾಡುತ್ತಿಲ್ಲ. ರಾಜಕಾರಣ ಬೇರೆ, ಹೋರಾಟ ಬೇರೆ ಎಂದು ಆಗಲೇ ಹೇಳಬೇಕಿತ್ತಲ್ಲವೇ? ಈಗ ಅಧಿಕಾರ ಸಿಕ್ಕ ಬಳಿಕ ಹಾಗೆ ಅನ್ನಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಿಂದೆ ಯಡಿಯೂರಪ್ಪಸರ್ಕಾರ ಇದ್ದಾಗ ವಿಜಯೇಂದ್ರ ಬರೆದುಕೊಡುತ್ತಿದ್ದುದನ್ನು ಮೂರ್ನಾಲ್ಕು ಪಂಚಮಸಾಲಿ ಶಾಸಕರು ಯಡಿಯೂರಪ್ಪ ಪರವಾಗಿ ಓದುತ್ತಿದ್ದರು. ಅಧಿಕಾರರದ ಆಸೆಗೆ ಅವರು ಹಾಗೆ ಮಾಡುತ್ತಿದ್ದರು. ಈಗ ಅಧಿಕಾರದಲ್ಲಿರುವವರು ಅದೇ ರೀತಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ