ಜನಸ್ಪಂದನ ಅಹವಾಲಿಗೆ ಮೂರು ತಿಂಗಳೊಳಗೆ ಪರಿಹಾರ: ಅಧಿಕಾರಿಗಳಿಗೆ ಸಿಎಂ ತಾಕೀತು
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.;
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರ ಎರಡನೇ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಇದಾಗಿತ್ತು. ಆದರೆ, ಈ ಮೊದಲು ತಮ್ಮ ಗೃಹ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದ ಅವರು, ಮೊದಲ ಬಾರಿಗೆ ಈಗ ವಿಧಾನಸೌಧದ ಎದುರೇ ಸಾರ್ವಜನಿಕರ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, "ಸ್ವೀಕರಿಸಲಾದ ಜನಸ್ಪಂದನ ಅರ್ಜಿಗಳಿಗೆ ಮೂರು ತಿಂಗಳಲ್ಲಿ ಪರಿಹಾರ ಕೊಡಬೇಕು. ಕಾನೂನು ಪ್ರಕಾರ ಪರಿಹಾರ ಸಾಧ್ಯವಿಲ್ಲದಿದ್ದರೆ ಹಾಗೇ ಹಿಂಬರಹ ಕೊಡಬೇಕು. ಪ್ರತೀ ಅರ್ಜಿಗೂ ಸರ್ಕಾರದ ಸ್ಪಂದನೆ ಇರಬೇಕು" ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಇಲ್ಲಿಯವರೆಗೆ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಅಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ. ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಇಲಾಖಾವಾರು ಕೌಂಟರ್ ಗಳು
ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲಾ ಇಲಾಖೆಗಳಿಗೂ ಪ್ರತೇಕ್ ಕೌಂಟರ್ ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಕೌಂಟರ್ ಗಳಿಗೆ ಸಂಖ್ಯೆಯನ್ನು ನೀಡಲಾಗಿತ್ತು. ಜನಸ್ಪಂದನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ , ಯಾವ ಇಲಾಖೆಯ ಕೌಂಟರ್ ಗೆ ಕಳಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ- ಸಿಬ್ಬಂದಿಗಳ ವಿಚಾರಣಾ ಕೌಂಟರ್ ತೆರೆಯಲಾಗಿತ್ತು. ಆಲ್ಲಿ ನಾಗರಿಕರ ಮೊಬೈಲ್ ನಂಬರ್ & ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಕೌಂಟರ್ ನಂಬರ್ ನಮೂದಿಸಲಾಗುತ್ತಿತ್ತು. ಕೌಂಟರ್ ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರು / ಸಣ್ಣ ಮಕ್ಕಳೊಂದಿಗೆ ಬಂದಂತಹ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿತ್ತು.
ಜನತಾದರ್ಶನಕ್ಕೆ ಆಗಮಿಸುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಿಎಂಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿತ್ತು.
ನವೆಂಬರ್ 27 ರಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ ಈವರೆಗೆ 3738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.