ಬಾವ ಶಿವರಾಜ್ಕುಮಾರ್ ಬಗ್ಗೆ ವ್ಯಂಗ್ಯ: ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ
2024ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜಕುಮಾರ್ ಸೋತ ಬೆನ್ನಲ್ಲೇ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರು, ʼಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು” ಎಂದು ಸಾಮಾಜಿಕ ಮಾಧ್ಯಮದ ಮೂಲಕ ವ್ಯಂಗ್ಯವಾಡಿದ್ದರು. ಇದೀಗ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರ ಮನೆಗೆ ಶಿವಣ್ಣ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ.
ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಸಂಸದ ಬಿವೈ ರಾಘವೇಂದ್ರ, ಕಾಂಗ್ರೆಸ್ನಿಂದ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಮತ್ತು ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪರ್ಧಿಸಿದ್ದರು. ಬಿವೈ ರಾಘವೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಿಜಯೇಂದ್ರ ಗೆಲುವಿನ ಬಳಿಕ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರು ನಟ ಶಿವರಾಜಕುಮಾರ್ ಅವರ ಬಗ್ಗೆ ಲಘುವಾಗಿ ಬರೆದು ಫೇಸ್ಬುಕ್ ಮತ್ತು X ಹ್ಯಾಂಡಲ್ನಲ್ಲಿ ಪೋಸ್ಟ್ ಹಾಕಿದ್ದು, ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ಜೂ.08) ನಟ ಶಿವರಾಜಕುಮಾರ್ ಬೆಂಬಲಿಗರು ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.
ಫೇಸ್ಬುಕ್ ಪೋಸ್ಟ್ನಲ್ಲಿ ಕುಮಾರ್ ಬಂಗಾರಪ್ಪ ಬರೆದಿದ್ದೇನು?
ʻʻಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದುʼʼ ಎಂದು ಬರೆದಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಕುಮಾರ್ ಬಂಗಾರಪ್ಪ ಗುರಿಯಾಗಿದ್ದಾರೆ.
ʻʻನನ್ನ ತಂಗಿ (ಗೀತಾ ಶಿವರಾಜ್ ಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತುʼʼ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕುಮಾರ್ ಬಂಗಾರಪ್ಪ ಅವರ ಅವರ ಪೋಸ್ಟ್ನಿಂದ ಶಿವಣ್ಣ ಅಭಿಮಾನಿಗಳು ಅವರ ನಿವಾಸದ ಗೇಟ್ ಒಳಗೆ ನುಗ್ಗಿ ದಿಕ್ಕಾರ ಕೂಗಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯಿಂದ ಹೊರಗೆ ಹೋಗುವಂತೆ ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ಮತ್ತು ಪೊಲೀಸರ ಮಾತಿನ ಚಕಮಕಿ ಏರ್ಪಟ್ಟಿದೆ. ʻʻಶಿವರಾಜಕುಮಾರ್ ಅವರ ಬಗ್ಗೆ ರಾಜಕುಮಾರ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಇದು ನಮಗೆ ನೋವಾಗಿದೆ. ಅವರನ್ನ ಹೊರಗೆ ಕರೆಸಿ ಕ್ಷಮೆ ಕೇಳುವಂತೆ ಹೇಳಿʼʼ ಎಂದು ಅಭಿಮಾನಿಗಳು ಒತ್ತಾಯಿಸಿದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡರು.