Internal Reservation-1: ಜಾತಿ ಹೇಳಲು ಹಿಂಜರಿಕೆ: 'ಹಿಂದುಳಿದ' ಎಡ-ಬಲ ದಲಿತರ ಗಣತಿ?
ಎಸ್‌ಸಿ ಸಮುದಾಯಗಳ ಒಳ ಪಂಗಡಗಳ ನಿರ್ದಿಷ್ಟ ಜನಸಂಖ್ಯೆ ತಿಳಿದುಕೊಳ್ಳುವ ಸಮೀಕ್ಷೆಯಲ್ಲಿ ನಿರ್ದಿಷ್ಟ ಉಪ ಜಾತಿಗಳ ಹೆಸರುಗಳ ಬಳಕೆಯ ಬಗ್ಗೆ ಎಸ್ಸಿ ಸಮುದಾಯಗಳಲ್ಲಿನ ಜನರಲ್ಲಿ ಹಿಂಜರಿಕೆ ಕಾರಣದಿಂದ ಸ್ಪಷ್ಟ ಅಂಕಿ ಅಂಶ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.;
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ (ಎಸ್‌ಸಿ) ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯದಲ್ಲಿರುವ ಎಸ್‌ಸಿ ಸಮುದಾಯಗಳ ಒಳ ಪಂಗಡಗಳ ನಿರ್ದಿಷ್ಟ ಜನಸಂಖ್ಯೆ ತಿಳಿದುಕೊಳ್ಳಲು ಮತ್ತೆ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
ಆದರೆ, ಈ ಸಮೀಕ್ಷೆಯಲ್ಲಿ ನಿರ್ದಿಷ್ಟ ಉಪ ಜಾತಿಗಳ ಹೆಸರುಗಳ ಬಳಕೆಯ ಬಗ್ಗೆ ಎಸ್ಸಿ ಸಮುದಾಯಗಳಲ್ಲಿನ ಜನರಲ್ಲಿ ಹಿಂಜರಿಕೆ ಕಾರಣದಿಂದ ಒಳ ಪಂಗಡಗಳ ಸ್ಪಷ್ಟ ಅಂಕಿ ಅಂಶ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.
ರಾಜ್ಯದಲ್ಲಿರುವ ಎಸ್ಸಿ ಸಮುದಾಯದ 101 ಉಪ ಜಾತಿಗಳಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಪ್ರಕಾರ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದ್ದು, ಮಾದಿಗ (ಎಡಗೈ) ಸಮುದಾಯಕ್ಕೆ ಸೇರಿರುವ ಸುಮಾರು 39 ಉಪ ಪಂಗಡಗಳಿವೆ. ಹೊಲೆಯ (ಬಲಗೈ) ಸಂಬಂಧಿತ 29 ಜಾತಿಗಳಿವೆ. ಲಂಬಾಣಿ, ಕೊರಮ, ಕೊರಚ, ಸೇರಿದಂತೆ 13 ಸ್ಪೃಶ್ಯ ಜಾತಿಗಳು ಹಾಗೂ 11 ಅಲೆಮಾರಿ ಅಸ್ಪೃಶ್ಯ ಜಾತಿಗಳನ್ನು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಲಾಗಿದೆ.
ಎಡಗೈ ಮತ್ತು ಬಲಗೈ ಇವೆರಡೂ ಎಸ್‌ಸಿ ಸಮುದಾಯಗಳಾಗಿದ್ದು, ಇವರೆಡೂ ವರ್ಗಗಳಲ್ಲಿರುವ ʼಮಾದಿಗ ಜಾತಿ ಸೂಚಕ ಹಾಗೂ ʼಹೊಲೆಯʼ ಜಾತಿ ಸೂಚಕ ಪದಗಳ ಬಳಕೆಯ ಬಗ್ಗೆ ನಿರ್ಧಿಷ್ಟ ಸಮುದಾಯಗಳ ಜನರು ಹಿಂಜರಿಕೆ ಭಾವನೆ ಹೊಂದಿದ್ದಾರೆ ಎನ್ನಲಾಗಿದೆ.
2014 ರಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಎಸ್ಪಿ ಸಮುದಾಯದ ಜನರು ಈ ಮೇಲಿನ ಎರಡು ನಿರ್ಧಿಷ್ಟ ಪದಗಳ ಹೆಸರುಗಳನ್ನು ಉಪ ಜಾತಿಯ ಕಾಲಂನಲ್ಲಿ ಸ್ಪಷ್ಟವಾಗಿ ಹೇಳದೇ ಇರುವುದರಿಂದ ಆ ಸಮೀಕ್ಷೆಯಲ್ಲಿ ಎಸ್ಸಿ ಸಮುದಾಯದ ಒಳ ಪಂಗಡಗಳ ನಿರ್ಧಿಷ್ಟ ಜನಸಂಖ್ಯೆ ತಿಳಿಯಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ.
ಆ ಸಂದರ್ಭದಲ್ಲಿ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಜಾತಿ ಸಮೀಕ್ಷೆಯಲ್ಲಿ ಯಾವುದೇ ಸಮುದಾಯದವರು ಹಿಂಜರಿಕೆಯಿಲ್ಲದೇ ತಮ್ಮ ನಿರ್ಧಿಷ್ಟ ಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚನೆ ಕೊಟ್ಟಿದ್ದರು. ಆದರೆ, ಅದು ಫಲಕಾರಿಯಾಗಿರಲಿಲ್ಲ.ನ್ಯಾ. ನಾಗಮೋಹನ ದಾಸ್
ನ್ಯಾ. ನಾಗಮೋಹನ ದಾಸ್
"ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಸುವ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸರ್ಕಾರ ನೀಡಿರುವ ನಿರ್ಧಿಷ್ಟ ಅವಧಿಯಲ್ಲಿ ಸಮೀಕ್ಷೆ ಕಾರ್ಯವನ್ನು ಮುಗಿಸುವ ಪಯತ್ನ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಯಿಂದ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗದಂತೆ ವರ್ಗೀಕರಣ ಮಾಡಿ ಸರ್ಕಾರಕ್ಕೆ ವರದಿ ಕೊಡಲಾಗುವುದು. ಸಮೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ," ಎಂದು ಒಳ ಮೀಸಲಾತಿ ವರ್ಗೀಕರಣ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ ದಾಸ್, "ದ ಫೆಡರಲ್ ಕರ್ನಾಟಕ"ಕ್ಕೆ ತಿಳಿಸಿದ್ದಾರೆ.
ಎಡ ಬಲ ಗೊಂದಲ:
ರಾಜ್ಯದಲ್ಲಿರುವ ಎಸ್ಸಿ ಅಸ್ಪೃಶ್ಯ ಸಮುದಾಯಗಳು ಬಹುತೇಕವಾಗಿ ಆದಿ ಕರ್ನಾಟಕ. ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸುತ್ತ ಬಂದಿವೆ. ಆದರೆ, ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬಲಗೈ ಸಮುದಾಯ ಆದಿ ಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಕಡೆಗಳಲ್ಲಿ ಬಲಗೈ ಸಮುದಾಯ ಆದಿ ದ್ರಾವಿಡ ಎಂದು ಗುರುತಿಸಿಕೊಂಡಿದೆ. ಅದೇ ರೀತಿ ಎಡಗೈ ಸಮುದಾಯಗಳೂ ಕೆಲವು ಜಿಲ್ಲೆಗಳಲ್ಲಿ ಆದಿ ಕರ್ನಾಟಕ ಎಂದೂ, ಇನ್ನು ಕೆಲವು ಜಿಲ್ಲೆಗಳಲ್ಲಿ ಆದಿ ದ್ರಾವಿಡ ಎಂದೂ ಗುರುತಿಸಿಕೊಂಡಿವೆ. ಇದೂ ಕೂಡ ಗೊಂದಲಕ್ಕೆ ಕಾರಣವಾಗಿದೆ.
ಇನ್ನು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಪಟ್ಟಿಯಲ್ಲಿ ಎಡ ಮತ್ತು ಬಲಗೈ ಪಂಗಡಗಳಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಪಂಗಡಗಳನ್ನು ಗುರುತಿಸಲಾಗಿದೆ. ಹೀಗಾಗಿ ಈ ಸಮುದಾಯಗಳ ಮೂಲ ಜಾತಿಯನ್ನು ನಮೂದಿಸಿದರೆ ಮಾತ್ರ ಒಳ ಮೀಸಲಾತಿ ಕಲ್ಪಿಸಲು ನಿರ್ಧಿಷ್ಟ ಸಮುದಾಯಗಳ ಜನಸಂಖ್ಯೆಯ ಅಂಕಿ ಅಂಶಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎನ್ನುವುದು ದಲಿತ ಮುಖಂಡರ ಅಭಿಪ್ರಾಯವಾಗಿದೆ.
ಯಾರಿಗೆ ಲಾಭ?
ರಾಜ್ಯದಲ್ಲಿರುವ ಸುಮಾರು 101 ಎಸ್‌ಸಿ ಸಮುದಾಯಗಳಲ್ಲಿಯೂ ಪ್ರಮುಖವಾಗಿ ಸ್ಪೃಶ್ಯ ಸಮುದಾಯಗಳಾದ ಲಂಬಾಣಿ, ಭೋವಿ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿಯ ಲಾಭಪಡೆಯುತ್ತಿವೆ ಎನ್ನುವ ಕಾರಣಕ್ಕೆ ಅಸ್ಪೃಶ್ಯ ಎಸ್ಪಿ ಸಮುದಾಯಗಳು ಸೇರಿದಂತೆ ಇನ್ನುಳಿದ ಎಸ್ಸಿ ಸಮುದಾಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು.
ವಿಶೇಷವಾಗಿ ಎಸ್ಪಿ ಎಡಗೈ ಸಮುದಾಯ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತ ಬಂದಿದ್ದು, ಈಗ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಈ ಸಮುದಾಯದ ಸಂತೋಷವನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಪಸ್ತುತ ಎಸ್ಸಿ ಸಮುದಾಯಕ್ಕೆ ಶೇ 17 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ ಮೀಸಲಾತಿಯನ್ನು ಶೇ 15 ರಿಂದ 17 ಕೈ ಹೆಚ್ಚಿಸಿರುವುದರಿಂದ ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣ ಶೇ 17 ಕ್ಕೆ ಏರಿದೆ.
ಒಳಮೀಸಲಾತಿ ವರ್ಗೀಕರಣ
ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ಎರಡು ರೀತಿಯಲ್ಲಿ ಮಾಡಲಾಗಿದ್ದು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಎಸ್ಪಿ ಸಮುದಾಯಕ್ಕೆ ಮೀಸಲಿದ್ದ ಶೇ 15 ರಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಿ, ಎಸ್ಸಿ ಎಡಗೈ ಸಮುದಾಯಕ್ಕೆ ಶೇ 6%, ಎಸಿ ಬಲಗೈ ಸಮುದಾಯಕ್ಕೆ ಶೇ 5 % ಬೇಡ ಜಂಗಮ, ಆದಿ ದ್ರಾವಿಡ ಸಮುದಾಯಳಿಗೆ ಶೇ 3% ಹಾಗೂ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇl% ರಷ್ಟು ಮೀಸಲಾತಿ ನೀಡಬಹುದು ಎಂದು ವರ್ಗೀಕರಣ ಮಾಡಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ 17% ರಲ್ಲಿ ಎಡಗೈ ಸಮುದಾಯಕ್ಕೆ ಶೇ 6%, ಬಲಗೈ ಸುಮದಾಯಕ್ಕೆ ಶೇ 5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೇ ಶೇ 4.5% ಹಾಗೂ ಇತರೇ ಎಸ್ಸಿ ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಈ ಎರಡೂ ಶಿಫಾರಸುಗಳಲ್ಲಿ ಪ್ರಮುಖವಾಗಿ ವ್ಯತ್ಯಾಸ ಇರುವುದು ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಭಜಂತ್ರಿ ಸಮುದಾಯಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿಯಲ್ಲಿ, ಇಲ್ಲಿ ಗಮನಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಳ ಮೀಸಲಾತಿಯನ್ನೇ ವಿರೋಧಿಸುತ್ತಿದ್ದ ಈ ಸಮುದಾಯಗಳಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 4.5 % ರಷ್ಟು ಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಈ ಐದು ಸ್ಪಶ್ಯ ಸಮುದಾಯಗಳಿಗೆ ಶೇ 1% ರಷ್ಟು ಮಾತ್ರ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು.