ಯಲಹಂಕ ವ್ಯಾಪ್ತಿಯ ಎರಡು ಕೆರೆಗಳಲ್ಲಿ ತೇಲುವ ಸೌರ ಫಲಕ ಅಳವಡಿಕೆ -ಡಿಕೆಶಿ
ದೊಡ್ಡಬೊಮ್ಮಸಂದ್ರ ಹಾಗೂ ರಾಚೇನಹಳ್ಳಿ ಕೆರೆಗಳ ಒಟ್ಟು ನೀರಿನ ವಿಸ್ತೀರ್ಣದ ಶೇ.10ರಷ್ಟು ಭಾಗದಲ್ಲಿ ಸೌರ ಫಲಕ ಅಳವಡಿಸಲಾಗುತ್ತದೆ. ಇದರಿಂದ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಡಿಕೆಶಿ ಹೇಳಿದರು.;
ಬೆಂಗಳೂರಿನ ಯಲಹಂಕ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ಹಾಗೂ ರಾಚೇನಹಳ್ಳಿ ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ತರವಾದ ಹೆಜ್ಜೆ ಇಟ್ಟಿದೆ.
ದೊಡ್ಡಬೊಮ್ಮಸಂದ್ರ ಹಾಗೂ ರಾಚೇನಹಳ್ಳಿ ಕೆರೆಗಳ ಒಟ್ಟು ನೀರಿನ ವಿಸ್ತೀರ್ಣದ ಶೇ.10ರಷ್ಟು ಭಾಗದಲ್ಲಿ ಸೌರ ಫಲಕ ಅಳವಡಿಸಲಾಗುತ್ತದೆ. ಇದರಿಂದ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ರಾಜ್ಯ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು (KTCDA) ಯೋಜನೆಗೆ ಅನುಮೋದನೆ ನೀಡಿದೆ. ಫಲಕಗಳ ಅಳವಡಿಕೆಯನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ನಿರ್ವಹಿಸಲಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತೇಲುವ ಸೌರ ಫಲಕ ಯೋಜನೆ ಒಂದು ಹೊಸ ಪ್ರಯೋಗವಾಗಲಿದೆ. ಜೊತೆಗೆ, ಜಲ ಸಂಪನ್ಮೂಲ ಸಂರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.