ರಾಜಸ್ಥಾನದಿಂದ ಬಂದಿದ್ದು ಉದ್ದ ಬಾಲದ ʼದಮಾರಾʼ ಕುರಿ ಮಾಂಸವೇ? ನಾಯಿ ಮಾಂಸವೇ? ತನಿಖೆ ಶುರು

ರೈಲು ಸಂಖ್ಯೆ 1796 ಜೈಪುರ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2500 ಕೆಜಿ ಕುರಿ ಮಾಂಸ ವನ್ನು ಬೆಂಗಳೂರು ಶಿವಾಜಿನಗರದ ಅಬ್ದುಲ್‌ ರಜಾಕ್‌ ಎಂಬ ಮಾಂಸ ವ್ಯಾಪಾರಿ ಶುಕ್ರವಾರ ರಾತ್ರಿ ತರಿಸಿಕೊಂಡಿದ್ದು, ಇದು ಕುರಿ ಮಾಂಸವಲ್ಲ ನಾಯಿ ಮಾಂಸ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದರು. ಶಿವಾಜಿನಗರದ ಅಂಗಡಿಗಳಿಗೆ ಈ ಮಾಂಸ ತರಿಸಿಕೊಳ್ಳಲಾಗಿದ್ದು, ಬಳಿಕ ಪ್ರತಿಷ್ಠಿತ ಹೋಟೆಲುಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವನ್ನು ಪುನಿತ್‌ ಕೆರೆಹಳ್ಳಿ ಮಾಡಿದ್ದರು.;

Update: 2024-07-28 04:10 GMT

ರಾಜಸ್ಥಾನದಿಂದ ಬೆಂಗಳೂರಿಗೆ ರೈಲು ಮೂಲಕ ಕುರಿ ಮಾಂಸ ಬದಲಿಗೆ ನಾಯಿ ಮಾಂಸ ಸರಬರಾಜಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಆ ಮಾಂಸದ ಮಾದರಿಗಳನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿದೆ.

ಒಂದು ವೇಳೆ ನಾಯಿ ಮಾಂಸ ಎನ್ನುವುದು ಪತ್ತೆಯಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇಲ್ಲವೆಂದಾದಲ್ಲಿ ಸುಳ್ಳು ಆರೋಪದ ಹೊರಿಸಿ ಗೊಂದಲಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನದ ತಳಿಯ ಕುರಿಗಳಿಗೆ ಉದ್ದನೆಯ ಬಾಲವಿದ್ದು, ಇದನ್ನೇ ನಾಯಿ ಮಾಂಸ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಮಾಂಸ ತರಿಸಿಕೊಂಡವರು ಹೇಳಿಕೊಂಡಿದ್ದಾರೆ.

ರೈಲು ಸಂಖ್ಯೆ 1796 ಜೈಪುರ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2500 ಕೆಜಿ ಕುರಿ ಮಾಂಸ ವನ್ನು ಬೆಂಗಳೂರು ಶಿವಾಜಿನಗರದ ಅಬ್ದುಲ್‌ ರಜಾಕ್‌ ಎಂಬ ಮಾಂಸ ವ್ಯಾಪಾರಿ ಶುಕ್ರವಾರ ರಾತ್ರಿ ತರಿಸಿಕೊಂಡಿದ್ದು, ಇದು ಕುರಿ ಮಾಂಸವಲ್ಲ ನಾಯಿ ಮಾಂಸ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದರು. ಶಿವಾಜಿನಗರದ ಅಂಗಡಿಗಳಿಗೆ ಈ ಮಾಂಸ ತರಿಸಿಕೊಳ್ಳಲಾಗಿದ್ದು, ಬಳಿಕ ಪ್ರತಿಷ್ಠಿತ ಹೋಟೆಲುಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವನ್ನು ಪುನಿತ್‌ ಕೆರೆಹಳ್ಳಿ ಮಾಡಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ನಡುವೆ ವಾಗ್ವಾದ ನಡೆದಿತ್ತು. ಕಾಂಗ್ರೆಸ್ ಮುಖಂಡರೂ ಆಗಿರುವ ವ್ಯಾಪಾರಿ ಅಬ್ದುಲ್ ರಜಾಕ್ ಆರೋಪಗಳನ್ನು ತಳ್ಳಿಹಾಕಿದ್ದು, ನಾಯಿ ಮಾಂಸ ಎಂದು ಸಾಬೀತಾದರೆ ಯಾವುದೇ ರೀತಿಯ ತಪಾಸಣೆಗೂ ಸಿದ್ಧ ಎಂದು ಸವಾಲು ಹಾಕಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್, ಹಣ ಕೊಡುವಂತೆ ಪುನೀತ್ ಕೆರೆಹಳ್ಳಿ ಬೆದರಿಕೆ ಹಾಕಿದ್ದಾನೆ, ಇಲ್ಲವಾದರೆ ಗಲಾಟೆ ಮಾಡುವುದಾಗಿ ಮಾಂಸ ಮಾರಾಟಗಾರನ್ನು ಹೆದರಿಸಿದ್ದಾನೆ ಎಂದು ಆರೋಪಿಸಿದರು. ಎರಡು ದಿನಕ್ಕೊಮ್ಮೆ ಜೈಪುರದಿಂದ ಕುರಿ ಮಾಂಸ ಬರುತ್ತದೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾಂಸವನ್ನು ಸಾಗಾಟ ಮಾಡಲಾಗುತ್ತದೆ, ಇದರಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಹೇಳಿದ್ದಾರೆ.

90 ಬಾಕ್ಸ್ ಮಾಂಸ ಬಂದಿದೆ, ಪ್ರತಿ ಬಾಕ್ಸ್‌ನಲ್ಲಿ 30 ಕೆಜಿ ಮಾಂಸ ಇರುತ್ತದೆ. ಯಾವ ಬಾಕ್ಸ್‌ ಬೇಕಾದರೂ ತೆಗೆದು ತೋರಿಸುತ್ತೇನೆ. ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಿ, ಇದು ಕುರಿ ಮಾಂಸ ಸೇವಿಸಲು ಕೂಡ ಸುರಕ್ಷಿತವಾಗಿದೆ, ಕಳೆದ 12 ವರ್ಷಗಳಿಂದ ಕೂಡ ಇದೇ ರೀತಿ ತರಿಸಲಾಗುತ್ತಿದೆ ಎಂದರು.

ಈ ಕುರಿತು ಹೇಳಿಕೆ ನೀಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಮಿಷನರೇಟ್, ‘ಪೊಲೀಸ್ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಜುಲೈ 26ರಂದು ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಪಾಸಣೆಯ ವೇಳೆ, ರಾಜಸ್ಥಾನದಿಂದ ರೈಲಿನ ಮೂಲಕ ಸ್ವೀಕರಿಸಿದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾರಿಗೆ ವಾಹನಕ್ಕೆ ಲೋಡ್ ಮಾಡುತ್ತಿರುವುದು ಕಂಡುಬಂದಿದೆ. ಒಟ್ಟು 90 ಪಾರ್ಸೆಲ್‌ಗಳಿದ್ದು, ಪಾರ್ಸೆಲ್‌ಗಳಲ್ಲಿ ಕಂಡುಬರುವ ಮಾಂಸ ಮಾದರಿಗಳನ್ನು ಸಂಗ್ರಹಿಸಿ ಪ್ರಾಣಿಗಳ ಜಾತಿಗಳ ಬಗ್ಗೆ ವಿಶ್ಲೇಷಣೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ," ಹೇಳಿದ್ದಾರೆ.

"ವಿಶ್ಲೇಷಣಾ ವರದಿಗಳ ಆಧಾರದ ಮೇಲೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪಾರ್ಸೆಲ್ ಕಳುಹಿಸುವವರ ಮತ್ತು ಸ್ವೀಕರಿಸುವವರ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪರವಾನಗಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ಮುಂದಿನ ಕಾನೂನು ಕ್ರಮಗಳು ನಿಯಮಾವಳಿಗಳ ಪ್ರಕಾರ ಪ್ರಾರಂಭಿಸಲಾಗುವುದು, ”ಎಂದು ಅದು ಹೇಳಿದೆ.

ಆದರೆ, ಹಿಂದೂಪರ ಸಂಘಟನೆಗಳ ಆರೋಪ ಸಾಬೀತಾಗದೇ ಇದ್ದಲ್ಲಿ ಅವರ ವಿರುದ್ಧ "ವಿನಾ ಕಾರಣ ಗೊಂದಲ ಸೃಷ್ಟಿಸಿ ತಪ್ಪು ಸಂದೇಶ ನೀಡಲು ಕಾರಣವಾದʼ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ

ದಮಾರಾ ಕುರಿ

ಕುರಿ ಮಾಂಸವೇ ಅಥವಾ ನಾಯಿ ಮಾಂಸವೇ ಎಂಬ ಗೊಂದಲಕ್ಕೆ ದಮಾರಾ ಕುರಿ ತಳಿ ಕಾರಣವಾಗಿರಬಹುದು. ದಮಾರಾ ತಳಿಯ ಕುರಿ ನಾಯಿಯ ಆಕಾರವನ್ನು ಹೋಲುತ್ತದೆ . ರಾಜಸ್ತಾನದ ಕೆಲ ರೈತರು ಈ ತಳಿಯನ್ನು ಸಾಕುತ್ತಾರೆ ಹಾಗೂ ಅರಬ್‌ ಮತ್ತಿತರ ದೇಶಗಳಿಂದ ಸರಬರಾಜು ಮಾಡಿಕೊಂಡು ಇಲ್ಲಿ ವಿತರಿಸುತ್ತಾರೆ. ದಮಾರಾ ತಳಿಯ ಮಾಂಸ ಹೆಚ್ಚು ರುಚಿಕರವಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ ಎಂದು ಶಿವಾಜಿನಗರದ ಕುರಿ ಮಾಂಸ ವ್ಯಾಪಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಇಲಾಖೆ ನಡೆಸುವ ತನಿಖೆಯಿಂದಷ್ಟೇ ಸಾಬೀತಾಗಬೇಕಿದೆ. 

ದೊಡ್ಡದಾದ, ಕೊಬ್ಬಿದ ಬಾಲಗಳು ಮತ್ತು ಹಿಂಗಾಲುಗಳಿಗೆ ಹೆಸರುವಾಸಿಯಾದ ನಮೀಬಿಯಾ ಮೂಲದ ದಮಾರಾ ಕುರಿ ತಳಿಗೆ ಏಷ್ಯಾ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಪೂರ್ವ ಏಷ್ಯಾ ಮತ್ತು ಈಜಿಪ್ಟ್‌ ಮೂಲದ ಈ ತಳಿಯನ್ನು ಅಲ್ಲಿನ ಅಲೆಮಾರಿ ಬುಡಕಟ್ಟು ಜನರು ಮಾಂಸಕ್ಕಾಗಿ ಸಾಕುತ್ತಿದ್ದರು. ಈ ಕುರಿಗಳು ರೋಗಗಳಿಗೆ ಈಡಾಗದೆ ಇರುವ ಪ್ರತಿರೋಧ ಶಕ್ತಿಯನ್ನು ಹೊಂದಿವೆ ಎನ್ನಲಾಗಿದೆ. ಉದ್ದನೆಯ ದಪ್ಪ ಬಾಲದ ಈ ಕುರಿಗಳು ಒಮ್ಮೆ ಹತ್ತು ಅಥವಾ ಹೆಚ್ಚಿನ ಸಂಖ್ಯೆಯ ಮರಿಗಳಿಗೆ ಜನ್ಮ ನೀಡುತ್ತವೆ. ಹಾಗಾಗಿ ರೈತರಿಗೆ ಹೆಚ್ಚು ಲಾಭದಾಯಕ ಈ ತಳಿ ಎನ್ನಲಾಗಿದೆ. ರಾಜಸ್ತಾನ ಮತ್ತಿತರ ಕಡೆ ಈ ತಳಿಯ ಕುರಿಗಳನ್ನು ಹೆಚ್ಚು ಸಾಕಾಣಿಕೆ ಮಾಡಲಾಗುತ್ತಿದೆ. ಈ ಕುರಿಗಳನ್ನು ರಾಜಸ್ತಾನ ಮತ್ತಿತರ ಕಡೆಗಳಿಗೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗೂ ಕೆಲವು ರೈತರು ಈ ತಳಿಯ ಕುರಿಗಳ ಸಾಕಾಣಿಗೂ ಮುಂದಾಗಿದ್ದಾರೆ.

Tags:    

Similar News