ಮಾಹಿತಿ ಆಯುಕ್ತರ ನೇಮಕಾತಿ ವಿವಾದ: ನೇಮಕ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದ ಹೈಕೋರ್ಟ್‌

ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್, ನೇಮಕಾತಿಯು ಪ್ರಕರಣದ ಅರ್ಜಿಯ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು ಹೇಳಿದೆ.;

Update: 2025-02-04 11:40 GMT

ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್, ನೇಮಕಾತಿಯು ಪ್ರಕರಣದ ಅರ್ಜಿಯ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು ಹೇಳಿದೆ.

ಆ ಮೂಲಕ ಮಂಗಳವಾರ(ಫೆ.4) ಸಂಜೆಗೆ ಆಯೋಜನೆಯಾಗಿರುವ ಮಾಹಿತಿ ಆಯುಕ್ತರ ಪ್ರಮಾಣವಚನ ಕಾರ್ಯಕ್ರಮ ಮುಂದುವರಿಯಬಹುದು. ಆದರೆ, ನೇಮಕಾತಿ ಅಂತಿಮವಲ್ಲ ಎಂಬ ಸಂದೇಶವನ್ನು ಕೋರ್ಟ್ ನೀಡಿದೆ.

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಯನ್ನು ನಿಯಮದಂತೆ ಮಾಡಲಾಗಿಲ್ಲ. ಮಾಹಿತಿ ಹಕ್ಕು ಕಾಯಿದೆ ಸೆಕ್ಷನ್ 15(3)ರ ನಿಯಮ ಹಾಗೂ ಸುಪ್ರೀಂಕೋರ್ಟ್ ಸೂಚನೆಗಳನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಆ ಹಿನ್ನೆಲೆಯಲ್ಲಿ ನೇಮಕಾತಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಲ್ಲಿಕಾರ್ಜುನ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರಾಗಿ ನೇಮಕಗೊಂಡವರು ಪ್ರಮಾಣವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಆದೇಶವನ್ನು ಕುರಿತ ಅರ್ಜಿದಾರರು ಕೋರಿಕೆಯನ್ನು ಪರಿಗಣಿಸಬಾರದು ಎಂದೇನಿಲ್ಲ. ಹಾಗಾಗಿ ರಾಜ್ಯ ಸರ್ಕಾರ ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯ ಸೂಕ್ತ ಆದೇಶ ನೀಡಲಿದೆ. ನ್ಯಾಯಾಲಯ ನೀಡುವ ಆ ಆದೇಶಕ್ಕೆ ಈ ನೇಮಕಾತಿ ಒಳಪಟ್ಟಿದೆ ಎಂದೂ ಹೇಳಿದೆ.

ನಿಯಮದಂತೆ ಶೋಧನಾ ಸಮಿತಿ ರಚನೆ ಮಾಡದೆ ಸರ್ಕಾರ ನೇರವಾಗಿ ನೇಮಕಾತಿ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್ ಅಧಿಕಾರಿ ಆತಿಶ್ ಮೋಹನ್ ಪ್ರಸಾದ್ ಮತ್ತು ಮಾಹಿತಿ ಆಯುಕ್ತರ ಹುದ್ದೆಗೆ ಕೆ ರಾಮನ್, ಡಾ.ಹರೀಶ್ ಕುಮಾರ್, ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ & ಹಾಗೂ ಅಧಿಕಾರಿ ಬಿ ಆರ್ ಮಮತಾ ಅವರನ್ನು ನೇಮಕ ಮಾಡಲಾಗಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠವು “ರಾಜ್ಯ ಸರ್ಕಾರ ಮತ್ತು ಆತಿಶ್ ಮೋಹನ್ ಪ್ರಸಾದ್(ಎ ಎಂ ಪ್ರಸಾದ್), ಕೆ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ & ಬಿ ಆರ್ ಮಮತಾ ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ ಎಂದು ಸರ್ಕಾರ ಮತ್ತು ಪ್ರತಿವಾದಿಗಳಿಗೆ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ. ಈ ನೇಮಕಾತಿಯು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಆದೇಶಿಸಿದೆ.

ರಾಜ್ಯ ಸರ್ಕಾರ ಮತ್ತು ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ಅಶೋಕ್ ಪಾಟೀಲ್ “ಮಾಹಿತಿ ಹಕ್ಕು ಕಾಯಿದೆ ಸೆಕ್ಷನ್ 15(3)ರ ಅನ್ವಯ ಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗೂ ಒಬ್ಬ ಸಂಪುಟ ದರ್ಜೆಯ ಸಚಿವರ ನೇತೃತ್ವದ ಸಮಿತಿಯು ನಾಮನಿರ್ದೇಶನ ಮಾಡಿದವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಆದರೆ, ಈ ನೇಮಕಾತಿಯಲ್ಲಿ ಆ ನಿಯಮ ಪಾಲಿಸಿಲ್ಲ. ಅಂಜಲಿ ಭಾರದ್ವಾಜ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಪ್ರಕಾರ ಪ್ರತಿಯೊಂದು ರಾಜ್ಯವೂ ಶೋಧನಾ ಸಮಿತಿ ರಚಿಸಬೇಕು. ಸಲ್ಲಿಕೆಯಾಗುವ ಅರ್ಜಿಗಳನ್ನು ಶೋಧನಾ ಸಮಿತಿಯು ಪರಿಶೀಲಿಸಿ, ಶಿಫಾರಸ್ಸು ಮಾಡಬೇಕು. ಆ ಸೂಚನೆಯನ್ನು ಉಲ್ಲಂಘಿಸಲಾಗಿದೆ” ಎಂದರು.

ಅಲ್ಲದೆ, “ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವ ಆಶಿತ್ ಮೋಹನ್ ಪ್ರಸಾದ್ ಅವರು ಆ ನಿರ್ದಿಷ್ಟ ಹುದ್ದೆಗೆ ಅರ್ಜಿಯನ್ನೇ ಹಾಕಿರಲಿಲ್ಲ. ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಹಾಕಿದ್ದರು. ಅದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ” ಎಂದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಹಾಗೂ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಆತಿಶ್ ಮೋಹನ್ ಪ್ರಸಾದ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹಾಜರಿದ್ದರು.

Tags:    

Similar News