ರಾಜ್ಯಾದ್ಯಂತ ಸಂಭ್ರಮದ ಸ್ವಾತಂತ್ರ್ಯೋತ್ಸವ; ಮನೆ-ಮನಗಳಲ್ಲಿ ಮೊಳಗಿದ ದೇಶಭಕ್ತಿ
ಮುಂಜಾನೆಯಿಂದಲೇ ಶಾಲಾ-ಕಾಲೇಜುಗಳ ಆವರಣಗಳಲ್ಲಿ ಮಕ್ಕಳ ಕಲರವ ಜೋರಾಗಿತ್ತು. ಬಿಳಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುತ್ತಾ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಧ್ವಜಾರೋಹಣ ನೆರವೇರಿಸಿದರು.;
ಬಿಬಿಎಂಪಿ ಆವರಣದಲ್ಲಿ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು.
79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶುಕ್ರವಾರ ಇಡೀ ಕರ್ನಾಟಕವೇ ದೇಶಭಕ್ತಿಯ ಅಲೆಯಲ್ಲಿ ಮಿಂದೆದ್ದಿತು. ರಾಜಧಾನಿ ಬೆಂಗಳೂರಿನಿಂದ ಹಿಡಿದು ಬೀದರ್, ಚಾಮರಾಜನಗರದ ಕಟ್ಟಕಡೆಯ ಹಳ್ಳಿಯವರೆಗೂ ತ್ರಿವರ್ಣ ಧ್ವಜಗಳು ರಾರಾಜಿಸಿದವು. ಜಾತಿ, ಧರ್ಮ, ಭಾಷೆಯ ಎಲ್ಲೆ ಮೀರಿ ಕನ್ನಡಿಗರು ಒಗ್ಗೂಡಿ ಸ್ವಾತಂತ್ರ್ಯದ ಸಂಭ್ರಮ ಅನುಭವಿಸಿದರು.
ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಕಲರವ
ಮುಂಜಾನೆಯಿಂದಲೇ ಶಾಲಾ-ಕಾಲೇಜು ಆವರಣಗಳಲ್ಲಿ ಮಕ್ಕಳ ಕಲರವ ಜೋರಾಗಿತ್ತು. ಬಿಳಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುತ್ತಾ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟದ ಮಹತ್ವ ಮತ್ತು ಇಂದಿನ ಪೀಳಿಗೆಯ ಜವಾಬ್ದಾರಿಗಳ ಕುರಿತು ಮಕ್ಕಳಿಗೆ ತಿಳಿ ಹೇಳಿದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್
ಕಚೇರಿ ಮತ್ತು ಬಡಾವಣೆಗಳಲ್ಲಿ ಧ್ವಜಾರೋಹಣ
ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಜಿಲ್ಲಾಡಳಿತ, ತಾಲ್ಲೂಕು ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಅದೇ ರೀತಿ, ನಗರ ಮತ್ತು ಪಟ್ಟಣಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಸ್ಥಳೀಯ ಸಂಘಟನೆಗಳು ತಮ್ಮ ಬಡಾವಣೆಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದವು. ಮಕ್ಕಳು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು, ಸಿಹಿ ಹಂಚಿ ಸಂಭ್ರಮಿಸಿದರು. ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮನೆಗಳ ಮೇಲೂ ರಾರಾಜಿಸಿದ ತಿರಂಗ
ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ಸಾರ್ವಜನಿಕರು ತಮ್ಮ ಮನೆಗಳ ಮೇಲೂ ತಿರಂಗ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಬೆಂಗಳೂರಿನ ವಿವಿಧ ಬಡಾವಣೆಗಳ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಾಡುತ್ತಿರುವುದು ನೋಡುಗರನ್ನು ಕಣ್ಮನ ಸೆಳೆಯುವಂತಿತ್ತು.
ಯಲಹಂಕ ಸಿಆರ್‌ಪಿಎಫ್ ಮೈದಾನದ ಬಳಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯೋಧರು ಬೈಕ್ ರ‍್ಯಾಲಿ ನಡೆಸಿದರು.
ಸಿಆರ್‌ಪಿಎಫ್ ಯೋಧರಿಂದ ಬೈಕ್ ಜಾಥಾ
ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಯಲಹಂಕದ ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಯೋಧರು ಬೈಕ್‌ಗಳಿಗೆ ರಾಷ್ಟ್ರಧ್ವಜ ಕಟ್ಟಿಕೊಂಡು ಬೈಕ್ ಜಾಥಾ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಕ್ಯಾಂಪಸ್‌ನಲ್ಲಿ ಯೋಧರ ಆಕರ್ಷಕ ಪಥ ಸಂಚಲನವೂ ನಡೆಯಿತು. ಯಲಹಂಕ ಕೇಂದ್ರೀಯ ವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ವಿಜಯಪುರದಲ್ಲಿ ಧ್ವಜಾರೋಹಣ: ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು, ಶರಣರು, ಸೂಫಿಸಂತರು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅನನ್ಯ ಕೊಡುಗೆ ನೀಡಿದ ಜಿಲ್ಲೆಯ ಎಲ್ಲ ಮಹನೀಯರನ್ನು, ಮಹಾತ್ಮಾಗಾಂಧಿ ಅವರ ಆದಿಯಾಗಿ ರಾಜ್ಯ-ರಾಷ್ಟ್ರದ ಚಳುವಳಿಕಾರರನ್ನು ಭಕ್ತಿಯಿಂದ ಸ್ಮರಿಸಿ, ಗೌರವದ ವಂದನೆ ಸಲ್ಲಿಸಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಸಿಇಒ ರುಷಿ ಆನಂದ್ ಭಾಗಿಯಾಗಿದ್ದರು.