ರಾಜ್ಯದಲ್ಲಿ ಹೆಚ್ಚಾದ ಬಿಸಿಲು: ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ
ಯಾವುದೇ ವೇತನ ಕಡಿತವಿಲ್ಲದೆ ಅರ್ಧ ದಿನದ ಕೆಲಸದ ಸಮಯವನ್ನು ತಕ್ಷಣವೇ ಜಾರಿಗೊಳಿಸುವಂತೆ ಪೌರಕಾರ್ಮಿಕರು ಮನವಿ ಮಾಡುತ್ತಿದ್ದಾರೆ.
ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೇಶದಲ್ಲಿ ಶಾಖದ ಅಲೆಯ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲು ಹೆಚ್ಚಾಗಿದ್ದು, ಪೌರಕಾರ್ಮಿಕರು ಯಾವುದೇ ವೇತನ ಕಡಿತವಿಲ್ಲದೆ ಅರ್ಧ ದಿನದ ಕೆಲಸದ ಸಮಯವನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಇಲಾಖೆಗಳಿಗೆ ಪತ್ರ ಬರೆದಿರುವ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟ (ಎಐಸಿಸಿಟಿಯು) ಪತ್ರದಲ್ಲಿ ಕಾರ್ಮಿಕರಿಗೆ ಹೆಚ್ಚುವರಿ ವಿರಾಮ ನೀಡಬೇಕು. ಶಾಖದ ಹೊಡೆತಕ್ಕೆ ಒಳಗಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದಿದೆ.
ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುವ ಅಪಾಯವನ್ನು ಹೊಂದಿರುತ್ತಾರೆ ಎಂದು ಆಗ್ರಹಿಸಿದೆ.
ಪೌರಕಾರ್ಮಿಕರು ತಮ್ಮ ದಿನದ ಕೆಲಸವನ್ನು ಬೆಳಗ್ಗೆ 6 ಗಂಟೆಗೆ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 3 ಗಂಟೆಯವರೆಗೆ ಮನೆಯೊಳಗೆ ಇರಲು ಸೂಚನೆ ನೀಡಿದೆ. ಹೀಗಾಗಿ ಪೌರಕಾರ್ಮಿಕರ ಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಕಾರ್ಮಿಕ ಒಕ್ಕೂಟ ಮನವಿ ಮಾಡಿದೆ.
ಕಳೆದ ವರ್ಷ ಬೇಸಗೆಯಲ್ಲಿ ರಾಜ್ಯ ಸರ್ಕಾರವು ಪೌರಕಾರ್ಮಿಕರಿಗೆ ವೇತನ ಸಹಿತ ಅರ್ಧ ದಿನದ ಕೆಲಸ ಘೋಷಣೆ ಮಾಡಿತ್ತು. ಈ ಬಾರಿಯೂ ಹೆಚ್ಚಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಅದೇ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಿದ್ದೇವೆ ಎಂದು ಎಐಸಿಸಿಟಿಯು ಸದಸ್ಯೆ ನಿರ್ಮಲಾ ಎಂ ತಿಳಿಸಿದ್ದಾರೆ.