Caste Census | ಕಾಂಗ್ರೆಸ್‌ಗೆ ಜನಗಣತಿ ವರದಿ ಬಿಸಿ; ಸ್ವಪಕ್ಷಿಯರಿಂದಲೇ ಹೆಚ್ಚಿದ ವಿರೋಧ
ಸಮೀಕ್ಷಾ ವರದಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಳೆದಿರುವ ನಿಲುವಿಗೆ ನಾನೂ ಬದ್ದನಾಗಿದ್ದೇನೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ತಿಳಿಸಿದ್ದಾರೆ.;
ಜಾತಿ ಜನಗಣತಿ ವರದಿ ಜಾರಿಗೆ ವೀರಶೈವ, ಒಕ್ಕಲಿಗ ಸಮುದಾಯಗಳ ಆಕ್ಷೇಪದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಶಾಸಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
“ರಾಹುಲ್ ಗಾಂಧಿ ಸೂಚನೆ ಮೇರೆಗೆ” ಎಂಬ ಸಿಎಂ ಮಾತಿಗೆ ಕಟ್ಟುಬಿದ್ದು ವರದಿ ಮಂಡನೆಗೆ ಸಚಿವರು ಅವಕಾಶ ಮಾಡಿಕೊಟ್ಟರೂ ಕಾಂಗ್ರೆಸ್ ಪಕ್ಷದ ಶಾಸಕರು ವರದಿ ಬಹಿರಂಗ ಮಾಡುವುದಕ್ಕೆ ಆಕ್ಷೇಪ ಹೊರಹಾಕಿದ್ದಾರೆ.
ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮತ್ತೊಮ್ಮೆ ವೀರಶೈವ-ಲಿಂಗಾಯತರ ಸಮೀಕ್ಷೆಗೆ ಆಗ್ರಹಿಸಿದರೆ, ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ಅವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ದಶಕದ ಹಿಂದೆ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸಾಕಷ್ಟು ಗೊಂದಲದಿಂದ ಕೂಡಿದೆ. ಈ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಳೆದಿರುವ ನಿಲುವಿಗೆ ನಾನೂ ಬದ್ದನಾಗಿದ್ದೇನೆ. ಸರ್ಕಾರ ವರದಿ ಹೊರತರುವುದಕ್ಕೂ ಮುನ್ನ ಚರ್ಚಿಸಬೇಕಿತ್ತು. ವರದಿ ಬಿಡುಗಡೆಗೊಳಿಸಿ ತಿದ್ದುಪಡಿಗೆ ಮುಂದಾದರೆ ಸರ್ಕಾರಕ್ಕೆ ಮುಜುಗರ ಎಂದು ಹೇಳಿದ್ದಾರೆ.
ಸಾದರ ಲಿಂಗಾಯತ ಸಮುದಾಯ 67 ಸಾವಿರ ಇದೆ ಎಂಬುದಾಗಿ ಸಮೀಕ್ಷೆ ಹೇಳುತ್ತಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಅಂದಾಜು 60 ಸಾವಿರ ಸಾದರ ಲಿಂಗಾಯತ ಸಮುದಾಯವಿದೆ. ಹಾಗಾದರೆ, ಸಮೀಕ್ಷೆ ಯಾವ ರೀತಿ ನಡೆದಿದೆ ಎಂಬುದೇ ಅರ್ಥವಾಗುತ್ತಿಲ್ಲ. ವೀರಶೈವ ಲಿಂಗಾಯತ ಸಮುದಾಯ 1.25 ಕೋಟಿ ಇದೆ. ಯಾವ ಜಾತಿಯ ಜನರ ಸಂಖ್ಯೆ ಎಷ್ಟಿದೆ ಎಂಬುದನ್ನು ಪಾರದರ್ಶಕವಾಗಿ ನೀಡಿದರೆ ಅನುಕೂಲ ಎಂದು ತಿಳಿಸಿದ್ದಾರೆ.
ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ
ಕರ್ನಾಟಕದಲ್ಲಿ ಗಣತಿದಾರರು ಮನೆ, ಮನೆಗೆ ಹೋಗಿ ವೈಜ್ಞಾನಿಕವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರ್ದೇಶನದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಇದನ್ನು ಬಿಡುಗಡೆ ಮಾಡಲು 10 ವರ್ಷ ಬೇಕಾಯಿತಾ ಎಂದು ಸಂಸದ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಲ್ಲಿ ಸಾಕಷ್ಟು ಆಕ್ರೋಶವಿದೆ. ಈಗ ಅದು ಹೊರಬರುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದ್ದಾರೆ.