ಮುಡಾ ಹಗರಣದಲ್ಲಿ 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೇ ಸಿಎಂ ಭಾವಮೈದ; ಎಚ್ಡಿಕೆ ಆರೋಪ
ನಾನು ಸತ್ಯವಂತ, ಸತ್ಯಮೇವ ಜಯತೇ ಎಂದು ಹೇಳುವ ಸಿಎಂ ಅವರ ಸತ್ಯಾಸತ್ಯತೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಆಗಿದೆ. ಅದನ್ನು ಓದಿ ಸತ್ಯ ತಿಳಿದುಕೊಳ್ಳಬಹುದು,'' ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.;
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಶಾಮೀಲಾಗಿದ್ದಾರೆ ಎಂದು ಮತ್ತೊಮ್ಮೆ ಆರೋಪಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು; ಸಿಎಂ ಭಾವಮೈದ ಹದಿನೈದು ನಿವೇಶನಗಳ ಡಿನೋಟಿಫೈ ಮಾಡಲು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ನಕಲಿ ಸಹಿ ಮಾಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ನಾನು ಸತ್ಯವಂತ, ಸತ್ಯಮೇವ ಜಯತೇ ಎಂದು ಹೇಳುವ ಸಿಎಂ ಅವರ ಸತ್ಯಾಸತ್ಯತೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಆಗಿದೆ. ಅದನ್ನು ಓದಿ ಸತ್ಯ ತಿಳಿದುಕೊಳ್ಳಬಹುದು,'' ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಆಗ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಬಚ್ಚೇಗೌಡರು ನಗರಾಭಿವೃದ್ಧಿ ಸಚಿವರಾಗಿದ್ದರು. ಹದಿನೈದು ನಿವೇಶನ ಡಿನೋಟಿಫೈ ಮಾಡಿ ಎಂದು ಅವರ ಭಾವಮೈದ ಬಚ್ಚೇಗೌಡರಿಗೆ ಅರ್ಜಿ ಸಲ್ಲಿಸಿದರು. ಆ ಭಾವಮೈದ ಎಂಬುವವರ ಸಹಿಯನ್ನೇ ನಕಲಿ ಮಾಡಿರುವುದು ವರದಿಯಲ್ಲಿ ಇದೆ. ಅಲ್ಲದೆ ಅರ್ಜಿಯ ಮೇಲೆ ಇಂಗ್ಲಿಷ್ ನಲ್ಲಿ ಡಿಸಿಎಂ ಎಂದು ಬರೆಯಲಾಗಿದೆ. ಆ ಬಗ್ಗೆ ಬಂದಿರುವ ವಿಧಿ ವಿನ ಪ್ರಯೋಗಾಲಯದ ವರದಿಯೂ ಲೋಕಾಯುಕ್ತ ವರದಿಯಲ್ಲಿ ಇದೆ ಎಂದು ಕೇಂದ್ರ ಸಚಿವರು ಹೇಳಿದರು.
"ನಾನು ಸತ್ಯವಂತ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿರುವ ಸಿಎಂ ಅಸಲಿ ಮುಖ ಲೋಕಾಯುಕ್ತ ವರದಿಯಲ್ಲಿ ಇದೆ. ಈಗ ಅವರು ಹಗರಣದಿಂದ ಪಾರಾಗಲು ಯಾವ ಮಾರ್ಗ ಹಿಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ,'' ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.