ಕರ್ನಾಟಕದಲ್ಲಿ ಕನ್ನಡಕ್ಕಿಂತ ಪರಭಾಷಾ ಚಿತ್ರಗಳಿಗೇ ಬಂಪರ್ ಗಳಿಕೆ!
ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಹಾವಳಿ ದೊಡ್ಡ ಮಟ್ಟದಲ್ಲಿದೆ. ಪರಭಾಷೆಯ 20 ಚಿತ್ರಗಳು ಕರ್ನಾಟಕದಲ್ಲಿ 200 ಕೋಟಿ ಗಳಿಕೆ ಮಾಡಿದರೆ, ಕನ್ನಡದ 220 ಚಿತ್ರಗಳು 150 ಕೋಟಿ ರೂ. ಗಳಿಕೆ ಮಾಡಿಲ್ಲ;
ಆರಂಭದಿಂದಲೂ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಹಾವಳಿ ದೊಡ್ಡ ಮಟ್ಟದಲ್ಲಿದೆ. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ದೊಡ್ಡ ಗಳಿಕೆ ಆಗುವುದರ ಜೊತೆಗೆ ದೊಡ್ಡ ಪ್ರೇಕ್ಷಕವರ್ಗವೂ ಇದೆ. ಇದೊಂದೇ ವರ್ಷ ಉದಾಹರಣೆ ತೆಗೆದುಕೊಂಡರೆ, ಪರಭಾಷೆಯ 20 ಚಿತ್ರಗಳು ಕರ್ನಾಟಕದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದರೆ, ಕನ್ನಡದ 220 ಚಿತ್ರಗಳು 150 ಕೋಟಿ ರೂ. ಗಳಿಕೆ ಮಾಡಿಲ್ಲ ಎಂಬ ವಿಷಯ ಬೇಸರ ತರಿಸುತ್ತದೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಇಷ್ಟೊಂದು ಗಳಿಕೆ ಮಾಡಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೀ ಆಂಧ್ರ ಮತ್ತು ತೆಲಂಗಾಣವಷ್ಟೇ ಅಲ್ಲ, ಉತ್ತರ ಭಾರತ, ಕರ್ನಾಟಕ ಮುಂತಾದ ಕಡೆಯೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ.
ಕರ್ನಾಟಕದಲ್ಲೇ ‘ಪುಷ್ಪ 2’ ಚಿತ್ರವು ಮೊದಲ ವಾರ 67 ಕೋಟಿ ರೂ. ಗಳಿಕೆ (Gross) ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ ಆದ ಸಚ್ನಿಕ್ ಡಾಟ್‍ಕಾಮ್ ವರದಿ ಮಾಡಿದೆ. ಇದುವರೆಗೂ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳೆಂದರೆ ಅದು, ‘RRR’ ಮತ್ತು ‘ಜೈಲರ್’ ಚಿತ್ರಗಳಾಗಿದ್ದವು. ಈ ಪೈಕಿ ‘RRR’ ಚಿತ್ರವು ಕರ್ನಾಟಕದಲ್ಲಿ 76 ಕೋಟಿ ರೂ. ಗಳಿಕೆ ಮಾಡಿದರೆ, ‘ಜೈಲರ್’ ಚಿತ್ರವು 66 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಚ್ನಿಕ್ ಹೇಳುತ್ತದೆ. ಈಗ ‘ಪುಷ್ಪ 2’ ಚಿತ್ರವು ‘RRR’ಗಿಂತ ಒಂಬತ್ತು ಕೋಟಿಯಷ್ಟು ಮಾತ್ರ ಹಿಂದಿದ್ದು, ಮುಂದಿನ ದಿನಗಳಲ್ಲಿ ಆ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.
ಸದ್ಯ ಮೂರನೇ ಸ್ಥಾನದಲ್ಲಿ ‘ಪುಷ್ಪ 2’
ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಪರಭಾಷಾ ಚಿತ್ರಗಳ ಪೈಕಿ ‘ಪುಷ್ಪ 2’ ಚಿತ್ರವು ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ‘RRR’ ಇದ್ದರೆ, ಎರಡನೇ ಸ್ಥಾನದಲ್ಲಿ ‘ಕಲ್ಕಿ 2898 AD’ ಚಿತ್ರವಿದೆ. ‘RRR’ ಚಿತ್ರವು 76 ಕೋಟಿ ಗಳಿಸಿದರೆ, ‘ಕಲ್ಕಿ’ 72 ಕೋಟಿ ರೂ.ಗಳನ್ನು ಸಂಗ್ರಹಿಸಿದೆಯಂತೆ. ಈ ಎರಡೂ ಚಿತ್ರಗಳು ಕರ್ನಾಟಕದಲ್ಲಿ ನಾಲ್ಕು ವಾರಗಳ ಪ್ರದರ್ಶನ ಕಂಡಿವೆ. ಆದರೆ, ‘ಪುಷ್ಪ 2’ ಚಿತ್ರವು ಈಗಷ್ಟೇ ಮೊದಲ ವಾರ ಮುಗಿಸಿ, ಎರಡನೇ ವಾರಕ್ಕೆ ಕಾಲಿಟ್ಟಿದೆ. ಮುಂದಿನ ದಿನಗಳಲ್ಲಿ ‘ಪುಷ್ಪ 2’ ಚಿತ್ರ ‘RRR’ ಮತ್ತು ‘ಕಲ್ಕಿ 2898 AD’ ಸ್ಥಾನವನ್ನು ಹಿಂದಿಕ್ಕುತ್ತದಾ ಎಂಬ ಕುತೂಹಲ ಎಲ್ಲರಿಗೂ ಇದೆ.
‘ಪುಷ್ಪ 2’ ದಾಖಲೆ ಮುರಿಯುತ್ತದೋ ಇಲ್ಲವೋ ಎಂಬುದು ನಂತರದ ಮಾತು. ಆದರೆ, ಈ ವರ್ಷ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಮಾಡಿರುವ ಗಳಿಕೆ ನೋಡಿದರೆ ಗಾಬರಿಯಾಗುತ್ತದೆ. ಈ ವರ್ಷ ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನ ನೂರಾರು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ, 20ಕ್ಕೂ ಹೆಚ್ಚು ಚಿತ್ರಗಳು 200 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆಯನ್ನು ಕರ್ನಾಟಕದಲ್ಲಿ ಮಾಡಿವೆ.
ಪರಭಾಷಾ ಚಿತ್ರಗಳ ಗಳಿಕೆ 200 ಕೋಟಿ ರೂ.
ಈ ವರ್ಷ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಚಿತ್ರ ‘ಕಲ್ಕಿ 2898 AD’ ಎಂಬ ಮಾಹಿತಿ ಇದೆ. ಈ ಚಿತ್ರವು 72 ಕೋಟಿ ರೂ. ಗಳಿಸಿದೆಯಂತೆ. ಎರಡನೇ ಸ್ಥಾನದಲ್ಲಿ ‘ಪುಷ್ಪ 2’ ಚಿತ್ರವಿದ್ದು, 67 ಕೋಟಿ ರೂ. ಸಂಗ್ರಹಿಸಿದೆ ಎಂಬ ಸುದ್ದಿ ಇದೆ. ನಂತರದ ಸ್ಥಾನಗಳಲ್ಲಿ ‘ದೇವರ’, ‘GOAT’, ‘ವೆಟ್ಟಾಯನ್’, ‘ಹನುಮ್ಯಾನ್’, ‘ಮಂಜುಮ್ಮೆಲ್ ಬಾಯ್ಸ್’, ‘ಆವೇಶಂ’, ‘ಆಡುಜೀವಿತಂ’, ‘ತಂಗಳಾನ್’, ‘ಕ್ಯಾಪ್ಟನ್ ಮಿಲ್ಲರ್ʼ ಮತ್ತು ‘ಇಂಡಿಯನ್ 2’ ಚಿತ್ರಗಳಿವೆ. ಇದರ ಜೊತೆಗೆ ಹಿಂದಿಯ ‘ಭೂಲ್ ಬುಲಯ್ಯ 3’, ‘ಸಿಂಗಂ ಅಗೇನ್ 2’, ‘ಫೈಟರ್’, ‘ಸ್ತ್ರೀ 2’ ಮುಂತಾದ ಕೆಲವು ಚಿತ್ರಗಳು ಕರ್ನಾಟಕದಲ್ಲಿ ತಕ್ಕ ಮಟ್ಟಿಗೆ ಗಳಿಕೆ ಮಾಡಿವೆ.
ಈ ಎಲ್ಲಾ ಚಿತ್ರಗಳು ರಾಜ್ಯದಲ್ಲಿ ಸೂಪರ್ ಹಿಟ್ ಅಲ್ಲದಿದ್ದರೂ, ನಿರೀಕ್ಷೆ ಹೆಚ್ಚಿದ್ದರಿಂದ ಆರಂಭಿಕ ಗಳಿಕೆ ಚೆನ್ನಾಗಿದೆ. ಇವೆಲ್ಲವನ್ನೂ ಸೇರಿಸಿದರೆ ಕರ್ನಾಟಕದಲ್ಲಿ ಈ ವರ್ಷ ಪರಭಾಷಾ ಚಿತ್ರಗಳು 200 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿವೆ ಎಂಬ ಸುದ್ದಿ ಇದೆ. ಇದೇ ನಿರ್ಧಿಷ್ಟ ಲೆಕ್ಕಾಚಾರ ಎಂದು ನಂಬುವುದು ಕಷ್ಟ. ಆದರೂ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ, ಈ ವರ್ಷ 150ರಿಂದ 200 ಕೋಟಿವರೆಗೂ ಗಳಿಕೆ ಮಾಡಿವೆ ಎಂದು ನಂಬಬಹುದು. ಮೊದಲೇ ಹೇಳಿದಂತೆ ಇದು ಗ್ರಾಸ್ ಲೆಕ್ಕ ಅಷ್ಟೇ. ಇದರಲ್ಲಿ ಬಾಡಿಗೆ, ಶೇಕಡಾವಾರು, ಕಮಿಷನ್ ಎಂದು ಕಳೆದರೆ ಇನ್ನೂ ಕಡಿಮೆಯಾಗುತ್ತದೆ.
ಇದು ಒಂದು ಕಡೆಯಾದರೆ, ರಾಜ್ಯದಲ್ಲಿ ಕನ್ನಡ ಚಿತ್ರಗಳು ಎಷ್ಟು ಗಳಿಕೆ ಮಾಡಿದವು ಎಂದು ನೋಡಿದರೆ ಗಾಬರಿಯಾಗುತ್ತದೆ. ಬಿಡುಗಡೆಯಾದ 220 ಚಿತ್ರಗಳ ಪೈಕಿ 20 ಚಿತ್ರಗಳಿಂದ 150 ಕೋಟಿಯಷ್ಟು ಗಳಿಕೆ ಆಗಿರಬಹುದು. ಮಿಕ್ಕಂತೆ ಬಹಳಷ್ಟು ಚಿತ್ರಗಳಿಂದ ನಯಾಪೈಸೆ ಗಳಿಕೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಈ ವರ್ಷ ಬಾಕ್ಸ್ ಆಫೀಸ್‍ನಲ್ಲಿ ಗಣನೀಯವಾಗಿ ಗಳಿಕೆ ಮಾಡಿರುವುದು ನಾಲ್ಕೇ ನಾಲ್ಕು ಚಿತ್ರಗಳು. ‘ದುನಿಯಾ’ ವಿಜಯ್ ಅಭಿನಯದ ‘ಭೀಮ’, ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’, ಶ್ರೀಮುರಳಿ ಅಭಿನಯದ ‘ಬಘೀರ’ ಮತ್ತು ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರಗಳು 18ರಿಂದ 20 ಕೋಟಿ ರೂ. ಗಳಿಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಈ ನಾಲ್ಕೂ ಚಿತ್ರಗಳೂ ಒಟ್ಟಾರೆ 80 ಕೋಟಿ ರೂ.ನಷ್ಟು ಗಳಿಕೆ ಮಾಡಿವೆ ಅಂತಂದುಕೊಂಡರೂ, ಉಳಿದ ಒಂದಿಷ್ಟು ಚಿತ್ರಗಳಿಂದ 50ರಿಂದ 70 ಕೋಟಿಯಷ್ಟು ಕಲೆಕ್ಷನ್ ಆಗಿರಬಹುದು. ಮಿಕ್ಕಂತೆ ಬಹಳಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದ್ದಷ್ಟೇ ಭಾಗ್ಯ. ಆ ಚಿತ್ರಗಳಿಂದ ನಿರ್ಮಾಪಕರಿಗೆ ಯಾವುದೇ ಪ್ರಯೋಜನವಾಗಿಲ್ಲ.
ಕನ್ನಡ ಚಿತ್ರಗಳಿಗೆ ನೂರೆಂಟು ಸಮಸ್ಯೆಗಳು
ರಾಜ್ಯದಲ್ಲಿ ಪರಭಾಷಾ ಚಿತ್ರಗಳು ಅಷ್ಟೊಂದು ಗಳಿಕೆ ಮಾಡಿವೆ ಎಂದರೆ ಅದು ಸಂಪೂರ್ಣ organic ಎಂದು ಅರ್ಥೈಸುವುದು ತಪ್ಪಾಗುತ್ತದೆ. ಪ್ರಮುಖವಾಗಿ, ಪರಭಾಷೆಯ ಕೆಲವು ದೊಡ್ಡ ಚಿತ್ರಗಳ ಟಿಕೆಟ್ ಬೆಲೆ ಮೊದಲ ದಿನ ವಿಪರೀತ ಹೆಚ್ಚಿರುತ್ತದೆ. ಪ್ರಮುಖವಾಗಿ, ಬಿಡುಗಡೆಯ ಮೊದಲ ದಿನ ಕನ್ನಡ ಚಿತ್ರಗಳಿಗೆ ಇಲ್ಲಿ 100ರಿಂದ 200 ರೂ.ನಷ್ಟಿದ್ದರೆ, ಪರಭಾಷಾ ಚಿತ್ರಗಳಿಗೆ 100ರಿಂದ 2000 ರೂ.ವರೆಗೂ ಪ್ರವೇಶ ದರ ಇರುತ್ತದೆ. ನಿರೀಕ್ಷಿತ ಕನ್ನಡ ಚಿತ್ರಗಳಿಗೆ ಏಕಪರದೆಯ ಚಿತ್ರಮಂದಿರಗಳಲ್ಲಿ ನಾಲ್ಕು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ 10ರವರೆಗೂ ಪ್ರದರ್ಶನವಿದ್ದರೆ, ಪರಭಾಷಾ ಚಿತ್ರಗಳಿಗೆ ಏಕಪರದೆಯ ಚಿತ್ರಮಂದಿರಗಳಲ್ಲಿ ಆರು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ 20ಕ್ಕೂ ಹೆಚ್ಚು ಪ್ರದರ್ಶನಗಳಿರುತ್ತವೆ. ಕೆಲವೊಂದು ಚಿತ್ರಗಳಿಗೆ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ 30 ಪ್ರದರ್ಶನ ಮಾಡುವುದೂ ಇದೆ. ಇದು ನಿರೀಕ್ಷಿತ ಚಿತ್ರಗಳ ವಿಷಯ. ಮಿಕ್ಕಂತೆ ಅಷ್ಟೇನೂ ನಿರೀಕ್ಷೆಯಲ್ಲದ, ಸ್ಟಾರ್‍ಗಳಿಲ್ಲದ ಚಿತ್ರಗಳಿಗೆ, ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಸಿಗುವುದು ಸಹ ಕಷ್ಟವಾಗುತ್ತದೆ. ಇವೆಲ್ಲದರಿಂದ ಸಹಜವಾಗಿಯೇ ಪರಭಾಷಾ ಚಿತ್ರಗಳ ಗಳಿಕೆ ಕನ್ನಡ ಚಿತ್ರಗಳಿಗಿಂತ ಗಳಿಕೆ ಹೆಚ್ಚಾಗುತ್ತದೆ.
ಬಹುಶಃ ಟಿಕೆಟ್ ಬೆಲೆಯನ್ನು ಯದ್ವಾತದ್ವಾ ಏರಿಸುವುದಕ್ಕೆ ಕಡಿವಾಣ ಹಾಕಿದರೆ, ಸಹಜವಾಗಿಯೇ ಪರಭಾಷಾ ಚಿತ್ರಗಳ ಗಳಿಕೆ ಕಡಿಮೆ ಆಗಬಹುದು. ಆದರೆ, ಕನ್ನಡ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಏರಿಸಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಕನ್ನಡ ಚಿತ್ರರಂಗ ಉತ್ತರ ಕಂಡುಕೊಳ್ಳಬೇಕು.
ಕರ್ನಾಟಕದಲ್ಲಿ ಅಂದಾಜು ಗಳಿಕೆ ಮಾಡಿರುವ ಇತರೆ ಚಿತ್ರಗಳು
ದೇವರ (ತೆಲುಗು) - 34 ಕೋಟಿ ರೂ.
GOAT (ತಮಿಳು) – 28 ಕೋಟಿ ರೂ.
ವೆಟ್ಟಾಯನ್ ತಮಿಳು) - 23 ಕೋಟಿ ರೂ.
ಹನುಮ್ಯಾನ್ (ತೆಲುಗು) – 22 ಕೋಟಿ ರೂ.
ಮಂಜುಮ್ಮೆಲ್ ಬಾಯ್ಸ್ (ಮಲಯಾಳಂ) – 13 ಕೋಟಿ ರೂ.
ಆವೇಶಂ (ಮಲಯಾಳಂ) – 10 ಕೋಟಿ ರೂ.
ಆಡುಜೀವಿತಂ (ಮಲಯಾಳಂ) – 5 ಕೋಟಿ ರೂ.
ತಂಗಳಾನ್ (ತಮಿಳು) - 3.55 ಕೋಟಿ ರೂ.
ಇಂಡಿಯನ್ 2 (ತಮಿಳು) - 3.45 ಕೋಟಿ ರೂ.