Internal Reservation | ಶೀಘ್ರ ನೇಮಕಾತಿ ಪ್ರಕ್ರಿಯೆ ; ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಯೋಮಿತಿ ಸಡಿಲಿಕೆ ವರದಾನ
ಒಳ ಮೀಸಲಾತಿ ಜಾರಿಗೊಳಿಸಿದ ನಂತರ ನೇಮಕಾತಿಗಳಿಗೆ ಮರು ಚಾಲನೆ ನೀಡಲಾಗುವುದು ಹಾಗೂ ವಯೋಮಿತಿಯನ್ನು ಒಂದು ಬಾರಿ ಸಡಿಲಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಸದನದಲ್ಲಿ ತಿಳಿಸಿದ್ದಾರೆ.;
ಸಿಎಂ ಸಿದ್ದರಾಮಯ್ಯ
ಪರಿಶಿಷ್ಟ ಜಾತಿಗೆ ಒಳ ಮೀಸಲು ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವರದಿ ಜಾರಿಯ ಮೂಲಕ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ಮಾಡಿರುವ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ಬುಧವಾರ ವಿಧಾನಸಭೆಯಲ್ಲಿ ಒಳ ಮೀಸಲಾತಿ ಅಂಗೀಕಾರದ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ವಯೋ ಮಿತಿ ಸಡಿಲಿಕೆಗೂ ಮುಂದಾಗಿರುವುದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಪರಿಶಿಷ್ಟ ಸಮುದಾಯದಲ್ಲಿರುವ 101 ಉಪ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಶೇ. 6, ಸ್ಪೃಶ್ಯ ಸಮುದಾಯಕ್ಕೆ ಶೇ. 5 ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗೂ ವೇಗ ಸಿಗುವ ವಿಶ್ವಾಸ ಬಂದಿದೆ.
ದುರ್ಬಲರನ್ನು ಜತೆ ಕರೆದೊಯ್ಯಬೇಕಿದೆ
"ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿರುವುದು ಸಂತಸದ ಸಂಗತಿ. ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಇದೀಗ ಸದನದಲ್ಲಿ ಮುಖ್ಯಮಂತ್ರಿಗಳು ತಿಳಿಸಿದಂತೆ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುವಂತೆ ವಯೋಮಿತಿ ಸಡಿಲಿಕೆ ಮಾಡಿರುವುದು ಸ್ವಾಗತಾರ್ಹ, ವಿವಿಧ ಇಲಾಖೆಗಳು ರೋಸ್ಟರ್ ಪದ್ದತಿ ತಯಾರಿಸಿ ಆದಷ್ಟು ಶೀಘ್ರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಬಲಗೈ, ಎಡಗೈ ಹಾಗೂ ಸ್ಪಶ್ಯ ಸಮುದಾಯಗಳಿಗೆ ಪ್ರತ್ಯೇಕ ಮೀಸಲು ನೀಡಿದಂತೆ ಅಲೆಮಾರಿ ಸಮುದಾಯಗಳಿಗೂ ನೀಡಬೇಕು. ಆ ಮೂಲಕ ಅವರನ್ನು ಜತೆಯಲ್ಲಿ ಕರೆದೊಯ್ಯಬೇಕು" ಎಂದು ʼಅಕ್ಸರʼ ಸಂಘಟನೆ ಅಧ್ಯಕ್ಷ ಸಂತೋಷ್ ಮರೂರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಕನಿಷ್ಠ ಒಂದು ಲಕ್ಷ ಹುದ್ದೆಗಳಿಗೆ ಅಧಿಸೂಚನೆಯಾಗಲಿ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಚಿಕ್ಕಮಗಳೂರಿನ ದರ್ಶನ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, " ಸರ್ಕಾರ ಒಳಮೀಸಲಾತಿ ಘೋಷಣೆ ಮಾಡಿರುವುದರಿಂದ ದುರ್ಬಲ ವರ್ಗಗಳಿಗೆ ಅನುಕೂಲವಾಗಲಿದೆ. ವರದಿ ಜಾರಿಯಾದ ನಂತರ ನೇಮಕಾತಿಗಳನ್ನು ಆರಂಭಿಸುತ್ತೇವೆ ಎಂದು ಸಿಎಂ ಹೇಳಿರುವುದು ಸಂತಸ ತಂದಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಪೈಕಿ ಕನಿಷ್ಠ ಒಂದು ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಮೀಸಲಾತಿ ಗೊಂದಲ ನಿವಾರಿಸಿ
ಸರ್ಕಾರದ ಶೇ.56 ಮೀಸಲಾತಿಯ ನಿಯಮಗಳಿಗೆ ಅನ್ವಯವಾಗುವಂತೆ ಕೆಪಿಎಸ್‌ಸಿ ಕಳೆದ ವರ್ಷ ಹೊರಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ಅಧಿಸೂಚನೆಯನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ರದ್ದುಗೊಳಿಸಿದೆ. ಈಗ ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಸರ್ಕಾರ ಪುನಃ ಶೇ. 56 ಮೀಸಲಾತಿಯ ನಿಯಮದಂತೆಯೇ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೊರಡಿಸುವ ಹೊಸ ನೇಮಕಾತಿಗಳಲ್ಲಿಯೂ ಗೊಂದಲ ಉಂಟಾಗಲಿದೆ. ಆದ್ದರಿಂದ ಸರ್ಕಾರ ಮೊದಲು ಮೀಸಲಾತಿ ಗೊಂದಲವನ್ನು ನಿವಾರಣೆ ಮಾಡಿ ಹೊಸ ನೇಮಕಾತಿಗಳಿಗೆ ಚಾಲನೆ ನೀಡಬೇಕು. ಹೊಸ ಅಧಿಸೂಚನೆಗಳು ಒಂದು ವರ್ಷದ ಒಳಗೆ ಪೂರ್ಣಗೊಳ್ಳುವಂತೆ ಕಾಲಮಿತಿ ನಿಗದಿಪಡಿಸಬೇಕು ಎಂದು ತರಿಕೆರೆಯ ಚೇತನ್ ಶರ್ಮಾ ಅವರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಒಂದು ವರ್ಷದಿಂದ ನೇಮಕಾತಿ ಸ್ಥಗಿತ
ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವನ್ನು ರಚಿಸಿರುವುದರಿಂದ ಯಾವುದೇ ನೇಮಕಾತಿ ಹಾಗೂ ಬಡ್ತಿ ನೀಡಬಾರದು ಎಂದು ಪರಿಶಿಷ್ಟ ಸಮುದಾಯದ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ್ದ ಸರ್ಕಾರ, ಒಳ ಮೀಸಲಾತಿ ಜಾರಿಗೊಳಿಸುವವರೆಗೂ ಯಾವುದೇ ನೇಮಕಾತಿ ನಡೆಸದಂತೆ ಆದೇಶಿಸಿತ್ತು. ಇದೀಗ ಸ್ವತಃ ಮುಖ್ಯಮಂತ್ರಿಯವರೇ ನೇಮಕಾತಿ ಪ್ರಾರಂಭಿಸಲಾಗುವುದು ಎಂದು ತಿಳಿಸಿರುವುದು ಸ್ಪರ್ಧಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ವಯೋಮಿತಿ ಸಡಿಲಿಕೆ
ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಹಿಂದುಳಿದ ವರ್ಗಗಳಿಗೆ(ಒಬಿಸಿ) 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1ರ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿಗಳು ನಡೆಯದಿರುವ ಕಾರಣ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯಲ್ಲಿ ತಿಳಿಸಿರುವಂತೆ ಒಂದು ಬಾರಿ ವಯೋಮಿತಿ ಸಡಿಲಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಧಿಸೂಚನೆಗೆ ಸಿದ್ಧವಿರುವ ಹುದ್ದೆಗಳು
ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಹಲವು ಇಲಾಖೆಗಳು ಸಿದ್ದತೆ ನಡೆಸಿವೆ.
ಒಳ ಮೀಸಲು ಜಾರಿಗೊಳಿಸಿದ ನಂತರ ಪದವಿ ಪೂರ್ವ ಕಾಲೇಜಿನ 804 ಉಪನ್ಯಾಸಕ ಹುದ್ದೆಗಳು, 2,000 ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹುದ್ದೆಗಳು, ವಸತಿ ಶಾಲೆಯಲ್ಲಿ 875 ಹುದ್ದೆಗಳು, ಅಬಕಾರಿ ಇಲಾಖೆಯ 268 ಉಪ ನಿರೀಕ್ಷಕರು, 677 ಅಬಕಾರಿ ಪೇದೆ, 16,000 ಶಿಕ್ಷಕರು, 600 ಪೊಲೀಸ್ ಇನ್ಸ್ಪೆಕ್ಟರ್, 4,000ಕ್ಕೂ ಹೆಚ್ಚು ಪೊಲೀಸ್ ಪೇದೆ, ವಿವಿಧ ಇಲಾಖೆಗಳಲ್ಲಿ 1,000ಕ್ಕೂ ಹೆಚ್ಚು ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು ಅಧಿಸೂಚನೆಗೆ ಸಿದ್ದವಾಗಿದ್ದು, ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ.
ಖಾಲಿ ಇರುವ ಹುದ್ದೆಗಳು
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5,11,272 ಹುದ್ದೆಗಳು ಭರ್ತಿಯಾಗಿವೆ. ಉಳಿದ 2,58,709 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ 58,298, ಒಳಾಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಸಹಕಾರ ಇಲಾಖೆಯಲ್ಲಿ 4,855 , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 , ಉನ್ನತ ಶಿಕ್ಷಣ ಇಲಾಖೆಯಲ್ಲಿ13,227, ಗೃಹ ಇಲಾಖೆಯಲ್ಲಿ 20,000 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ 6,191 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಕಳೆದ ಅಧಿವೇಶನದಲ್ಲಿ ತಿಳಿಸಿತ್ತು.