Covid-19 Scam | ಪಿಪಿಇ ಕಿಟ್, ಎನ್-95 ಮಾಸ್ಕ್ ಖರೀದಿ ಅಕ್ರಮ: ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಎಫ್‌ಐಆರ್
ಕೋವಿಡ್ ಅವಧಿಯಲ್ಲಿ ಮಾಸ್ಕ್ ಹಾಗೂ ಪಿಪಿಇ ಕಿಟ್ ಖರೀದಿಯಲ್ಲಿ ನೆಡದಿರುವ ಅಕ್ರಮಗಳ ತನಿಖೆಗೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಪತ್ರಾಧಿಕಾರಿ ಎಂ.ವಿಷ್ಣುಪ್ರಸಾದ್ ನೀಡಿರುವ ದೂರು ಆಧರಿಸಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಸೇರಿದಂತೆ ಇತರೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಪತ್ರಾಧಿಕಾರಿ ಎಂ.ವಿಷ್ಣುಪ್ರಸಾದ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಡಾ.ಪಿ.ಜಿ. ಗಿರೀಶ್, ರಾಜ್ಯ ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜಿ.ಪಿ.ರಘು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣೆ ಅಧಿಕಾರಿ ಎನ್ ಮುನಿರಾಜು, ಲಾಜ್ ಎಕ್ಸ್‌ಪೋರ್ಟ್, ಎಂಎಸ್ ಪ್ರೂಡೆಂಟ್ ಮ್ಯಾನೇಜ್‌ಮೆಂಟ್, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಎನ್-95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಉಪಕರಣ ಖರೀದಿಸುವ ವೇಳೆ ಕಾನೂನು ಪ್ರಕ್ರಿಯೆ ಉಲ್ಲಂಘಿಸಲಾಗಿದೆ. ಕೋವಿಡ್ ನಿರ್ವಹಣೆಗೆ ನೇಮಿಸಿದ್ದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಷಡ್ಯಂತ್ರ ರೂಪಿಸಿ ದೊಡ್ಡ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್‌ಗಳನ್ನು ಖರೀದಿ ಮಾಡಿದ ದಾಖಲೆಗಳಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿವೆ ಎಂದು ವಿಷ್ಣುಪ್ರಸಾದ್ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ 203 ಕೋಟಿ ಮೊತ್ತದ 15,51,713 ಪಿಪಿಇ ಕಿಟ್, 9.75 ಕೋಟಿ ಮೊತ್ತದ 42,15,047 ಎನ್-95 ಮಾಸ್ಕ್‌ಗಳನ್ನು ಖರೀದಿಸಿ ಸ್ವಂತ ಲಾಭಕ್ಕೆ ಬಳಕೆ ಮಾಡಿಕೊಂಡಿರುವುದು ಕಂಡುಬಂದಿತ್ತು. ರಾಜ್ಯ ಸರ್ಕಾರ 2020 ಆಗಸ್ಟ್ 18 ರಂದು 2,59,263 ಮಾಸ್ಕ್ ಮತ್ತು 2,59,263 ಪಿಪಿಇ ಕಿಟ್ ಸೇರಿ ಒಟ್ಟು ₹41.35 ಕೋಟಿ ಮೊತ್ತದ ಸಾಮಗ್ರಿಗಳ ಖರೀದಿಗೆ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಿ ಷರತ್ತು ವಿಧಿಸಿತ್ತು. ಆದರೆ, ನಿಯಮ ಉಲ್ಲಂಘಿಸಿ ಹೆಚ್ಚುವರಿ ಪಿಪಿಇ ಕಿಟ್‌ಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿತ್ತು.
₹7 ಕೋಟಿ ಮೊತ್ತದಲ್ಲಿ 55,784 ಪಿಪಿಇ ಕಿಟ್‌ಗಳನ್ನು ಕಾನೂನು ಬಾಹಿರವಾಗಿ ಖರೀದಿಸಲಾಗಿದೆ. 13,784 ಪಿಪಿಇ ಕಿಟ್‌ಗಳನ್ನು ಯಾವುದೇ ಆದೇಶವಿಲ್ಲದೇ ಖರೀದಿ ಮಾಡಲಾಗಿದೆ. ಆ ಪಿಪಿಇ ಕಿಟ್‌ಗಳನ್ನು ಎಲ್ಲಿಗೆ ಸರಬರಾಜು ಮಾಡಲಾಗಿದೆ ಎಂಬುದಕ್ಕೆ ದಾಖಲೆ ಇಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಂಡ್ಯ ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೀಡಿದ್ದ 80 ಸಾವಿರ ಪಿಪಿಇ ಕಿಟ್ಗಳನ್ನು ಬಳಸದೇ ವ್ಯರ್ಥ ಮಾಡಿದ್ದರಿಂದ ಸರ್ಕಾರಕ್ಕೆ 9.99 ಕೋಟಿ ನಷ್ಟ ಉಂಟು ಮಾಡಲಾಗಿದೆ ಎಂದು ದೂರಲಾಗಿದೆ.
ಇನ್ನು ಲಾಜ್ ಎಕ್ಸ್ಪೋರ್ಟ್ ಹಾಗೂ ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಸಂಸ್ಥೆಯವರು ಟೆಂಡರ್ ನಲ್ಲಿ ಭಾಗವಹಿಸಲು ಅರ್ಹರಲ್ಲದಿದ್ದರೂ ಅವರಿಗೆ ದೊಡ್ಡ ಪ್ರಮಾಣದ ಟೆಂಡರ್ ನೀಡಲಾಗಿದೆ.
ಎನ್-95 ಮಾಸ್ಕ್ ಮತ್ತು ಪಿಪಿಇ ಕಿಟ್ ಹೆಚ್ಚಾಗಿ ಖರೀದಿ ಮಾಡಿದ್ದು, ಖರೀದಿಯ ಪೂರ್ಣ ಮೊತ್ತವನ್ನು ಟೆಂಡರ್‌ನಲ್ಲಿ ಭಾಗವಹಿಸದ ಪೂಡೆಂಟ್ ಮ್ಯಾನೇಜೆಮೆಂಟ್ ಸಲ್ಯೂಷನ್ಸ್ ಸಂಸ್ಥೆಗೆ ಪಾವತಿಸಿರುವುದು ಕೋವಿಡ್ ಹಗರಣದ ತನಿಖೆಯಲ್ಲಿ ಕಂಡುಬಂದಿತ್ತು.
ಇಂದು ಅಥವಾ ನಾಳೆ ಎಸ್ಐಟಿ ರಚನೆ
ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೀಡಿರುವ ಆಯೋಗದ ಮಧ್ಯಂತರ ವರದಿ ಪರಿಶೀಲನೆಗಾಗಿ ಇಂದು ಅಥವಾ ನಾಳೆ ಎಸ್ಐಟಿ ರಚನೆ ಆಗಲಿದೆ. ಆ ಬಳಿಕ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಎಸ್ಐಟಿಗೆ ವರ್ಗಾವಣೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೋವಿಡ್ ಹಗರಣ ಕುರಿತಂತೆ ನಿವೃತ್ತ ನ್ಯಾ. ಮೈಕೆಲ್.ಡಿ. ಕುನ್ಹಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿತ್ತು. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿತ್ತು.
ಅಕ್ರಮಗಳ ತನಿಖೆಗಾಗಿ ಎಸ್ಐಟಿ ರಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿತ್ತು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಿ, ತಪ್ಪಿತಸ್ಥರಿಂದಲೇ ನಷ್ಟದ ಹಣ ವಸೂಲಿಗೆ ಸರ್ಕಾರ ತೀರ್ಮಾನಿಸಿತ್ತು.