ವಂತಾರಾ ವಿರುದ್ಧದ ಅಕ್ರಮ ಆರೋಪ: ಸುಪ್ರೀಂ ಕೋರ್ಟ್‌ನಿಂದ ಎಸ್​ಐಟಿ ತನಿಖೆಗೆ ಆದೇಶ

ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ.ಬಿ. ವರಾಲೆ ಅವರಿದ್ದ ನ್ಯಾಯಪೀಠ ಆದೇಶ ಹೊರಡಿಸಿದೆ.;

Update: 2025-08-26 05:46 GMT

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಂತರಾ ವನ್ಯಜೀವಿ ಕೇಂದ್ರಕ್ಕೆ ಭೇಟಿ ನೀಡಿದ್ದರು. 

ರಿಲಯನ್ಸ್ ಫೌಂಡೇಶನ್‌ನ ಮಹತ್ವಾಕಾಂಕ್ಷೆಯ ಗುಜರಾತ್‌ನ ಜಾಮ್‌ನಗರದಲ್ಲಿರುವ 'ವಂತಾರಾ' ವನ್ಯಜೀವಿ ಕೇಂದ್ರವು ಇದೀಗ ಗಂಭೀರ ಆರೋಪಗಳ ಸುಳಿಯಲ್ಲಿದೆ. ಕಾನೂನುಬಾಹಿರವಾಗಿ ಪ್ರಾಣಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಹಣಕಾಸಿನ ಅಕ್ರಮಗಳನ್ನು ನಡೆಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶಿಸಿದೆ.

ಪ್ರಾಣಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ಸ್ಥಾಪಿಸಲಾದ ಈ ಕೇಂದ್ರದ ವಿರುದ್ಧ ಮಾಧ್ಯಮಗಳು, ಎನ್‌ಜಿಒಗಳು ಮತ್ತು ವನ್ಯಜೀವಿ ಸಂಸ್ಥೆಗಳಿಂದ ಬಂದ ದೂರುಗಳನ್ನು ಆಧರಿಸಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ.ಬಿ. ವರಾಲೆ ಅವರಿದ್ದ ನ್ಯಾಯಪೀಠ ನಡೆಸಿತು. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರ ನೇತೃತ್ವದಲ್ಲಿ ನಾಲ್ಕು ಸದಸ್ಯರ ಎಸ್‌ಐಟಿಯನ್ನು ರಚಿಸಲಾಗಿದೆ. ಈ ತಂಡದಲ್ಲಿ ನಿವೃತ್ತ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಮತ್ತು ಮಾಜಿ ಕಂದಾಯ ಅಧಿಕಾರಿ ಅನೀಶ್ ಗುಪ್ತಾ ಅವರು ಸದಸ್ಯರಾಗಿರುತ್ತಾರೆ.

ಈ ವಿಶೇಷ ತನಿಖಾ ತಂಡವು, ಹಣ ವರ್ಗಾವಣೆ ಸೇರಿದಂತೆ ಅರ್ಜಿಗಳಲ್ಲಿ ಮಾಡಲಾದ ಎಲ್ಲಾ ಆರೋಪಗಳ ಕುರಿತು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಯಾವುದೇ ವಿಷಯಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ. ತನಿಖಾ ತಂಡವು ತನ್ನ ವರದಿಯನ್ನು ಸೆಪ್ಟೆಂಬರ್ 12ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ. ಎಸ್‌ಐಟಿ ವರದಿಯನ್ನು ಆಧರಿಸಿ ಮುಂದಿನ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

Tags:    

Similar News