ಯಶ್ ʼಟಾಕ್ಸಿಕ್‌ʼಗಾಗಿ ಅರಣ್ಯ ನಾಶ | ‌ಸ್ಥಳ ಭೇಟಿ ವೇಳೆ ದಿಗ್ಭ್ರಮೆಗೊಂಡ ಸಚಿವ ಖಂಡ್ರೆ, ತನಿಖೆಗೆ ಆದೇಶ

ಟಾಕ್ಸಿಕ್ ಚಿತ್ರದ ಸೆಟ್ ಗಾಗಿ ಸಾವಿರಾರು ಮರಗಳನ್ನು ಕಡಿದಿರುವುದು ಉಪಗ್ರಹ ಚಿತ್ರಗಳಿಂದ ಬಹಿರಂಗಗೊಂಡಿವೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಸ್ಥಳಕ್ಕೆ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ

Update: 2024-10-29 13:15 GMT
ಟಾಕ್ಸಿಕ್‌ ಸಿನಿಮಾದ ಸೆಟ್‌ನಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ
Click the Play button to listen to article

ನಟ ಯಶ್ ಅವರ ಮುಂಬರುವ ಸಿನಿಮಾ ʼಟಾಕ್ಸಿಕ್ʼ ಚಿತ್ರೀಕರಣ ನಡೆಯುತ್ತಿರುವ ಬೆಂಗಳೂರಿನ ಪೀಣ್ಯ ಪ್ಲಾಂಟೇಶನ್‌ನಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ.

ʼಟಾಕ್ಸಿಕ್ʼ ಚಿತ್ರದ ಸೆಟ್ ನಿರ್ಮಿಸಲು ಅರಣ್ಯ ಇಲಾಖೆಯ ಜಾಗದಲ್ಲಿ ಭಾರೀ ಸಂಖ್ಯೆಯ ಮರಗಳನ್ನು ಕಡಿದಿರುವುದು ಉಪಗ್ರಹ ಚಿತ್ರಗಳಿಂದ(ಸ್ಯಾಟಲೈಟ್ ಇಮೇಜಸ್)  ಬಹಿರಂಗಗೊಂಡಿವೆ. ಆ ಹಿನ್ನೆಲೆಯಲ್ಲಿ ಬಂದ ದೂರಿನ ಮೇಲೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಅಕ್ರಮ ಮರ ಕಡಿತಲೆ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. 

ಮರಗಳನ್ನು ಕಡಿದಿರುವುದು ಸ್ಯಾಟಲೈಟ್ ಫೋಟೋಗಳಿಂದ ಬಹಿರಂಗಗೊಂಡಿವೆ. 

"ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ" ಎಂದು ಸಚಿವ ಖಂಡ್ರೆ ಅವರು ಸ್ಥಳ ಪರಿಶೀಲನೆಯ ಬಳಿಕ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ತಿಳಿಸಿದ್ದಾರೆ.

ʼಟಾಕ್ಸಿಕ್ʼ ಚಿತ್ರಕ್ಕಾಗಿ ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಎಂಬುವರು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಈ ಸಂಬಂಧ ಹೈಕೋರ್ಟ್ ʼಟಾಕ್ಸಿಕ್ʼ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮ್ತತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿತ್ತು.

ʼಟಾಕ್ಸಿಕ್ʼ ಚಿತ್ರದಲ್ಲಿ ನಟ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಯಶ್ ಗೆ ಜೋಡಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಚಿತ್ರವನ್ನು ಮಲಯಾಳಿ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ  ಮಂಗಳವಾರ ಸ್ಥಳಕ್ಕೆ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ


 


Tags:    

Similar News