ಅಕ್ರಮ ಗಣಿಗಾರಿಕೆ | ಲೋಕಾಯುಕ್ತ ಎಸ್‌ಐಟಿ ಅವಧಿ ಒಂದು ವರ್ಷ ವಿಸ್ತರಣೆ
ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ಎಸ್ಐಟಿ ಕಾರ್ಯಾವಧಿ ವಿಸ್ತರಿಸಲು ನಿರ್ಣಯಿಸಲಾಗಿತ್ತು. ಸಚಿವ ಸಂಪುಟದ ನಿರ್ಣಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜಾಗೃತ ವಿಭಾಗದ ಅಧೀನ ಕಾರ್ಯದರ್ಶಿ ಪ್ರತಿಭಾ ಕೆ. ಅವರು ಆದೇಶ ಹೊರಡಿಸಿದ್ದಾರೆ.;
ಗಣಿಗಾರಿಕೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ನೇಮಿಸಿದ್ದ ಲೋಕಾಯುಕ್ತ ವಿಶೇಷ ತನಿಖಾ ತಂಡದ ಕಾರ್ಯಾವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಲೋಕಾಯುಕ್ತ ವಿಶೇಷ ತನಿಖಾ ತಂಡದ (ಎಸ್ಐಟಿ) ಅವಧಿ 2024 ಜುಲೈ 1 ಕ್ಕೆ ಕೊನೆಗೊಂಡಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ಎಸ್ಐಟಿ ಕಾರ್ಯಾವಧಿ ವಿಸ್ತರಿಸಲು ನಿರ್ಣಯಿಸಲಾಗಿತ್ತು. ಸಚಿವ ಸಂಪುಟದ ನಿರ್ಣಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಜಾಗೃತ ವಿಭಾಗದ ಅಧೀನ ಕಾರ್ಯದರ್ಶಿ ಪ್ರತಿಭಾ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ.
ವಿಶೇಷ ತನಿಖಾ ತಂಡದ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯಗಳಿಗೆ ತಗುಲುವ ವೆಚ್ಚವನ್ನು ಪೊಲೀಸ್ ವಿಭಾಗದ ಪ್ರಧಾನ ಲೆಕ್ಕ ಶೀರ್ಷಿಕೆಯಲ್ಲಿ ಭರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಲೋಕಾಯುಕ್ತ ವಿಶೇಷ ತನಿಖಾ ತಂಡದ ಅವಧಿ ವಿಸ್ತರಣೆ ಕುರಿತು ಸೆ.30 ರಂದು ನೀಡಿರುವ ಅಭಿಪ್ರಾಯ, ಸಹಮತಿಯ ಮೇರೆಗೆ ಸಚಿವ ಸಂಪುಟ ಈ ನಿರ್ಣಯ ತೆಗೆದುಕೊಂಡಿದೆ. 2025 ಜುಲೈ 1ರವರೆಗೆ ಎಸ್ಐಟಿ ತನ್ನ ಬಾಕಿ ಉಳಿದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ಮುಗಿಸುವ ಸಲುವಾಗಿ ಅವಧಿ ವಿಸ್ತರಣೆ ಮಾಡಲಾಗಿದೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪೆನಿಗೆ ಗಣಿ ಗುತ್ತಿಗೆ ನೀಡಿದ್ದರಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಅನುಮತಿ ಕೋರಿತ್ತು. ಅನುಮತಿ ಕೋರಿದ್ದ ಅರ್ಜಿಯನ್ನು ರಾಜ್ಯಪಾಲರ ಸಚಿವಾಲಯ ಎಂಟು ವಿಲೇವಾರಿ ಮ ಮಾಡದೇ ಉಳಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಅರ್ಜಿಯ ಮಾಹಿತಿ ಸೋರಿಕೆ ಕುರಿತು ವರದಿ ನೀಡುವಂತೆ ರಾಜ್ಯಪಾಲರು ಲೋಕಾಯುಕ್ತ ಎಸ್‌ಐಟಿಗೆ ಸೂಚಿಸಿದ್ದರು. ಆಗ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಅವರು ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದು, ರಾಜಭವನ ಸಚಿವಾಲಯದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿದ್ದರು. ಈ ವಿಷಯ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.