M A Salim | ಡಿಜಿಪಿ ಎಂ.ಎ.ಸಲೀಂ ವಿರುದ್ಧ ಹೈಕೋರ್ಟ್ ವಕೀಲೆಯಿಂದ ಮುಖ್ಯ ಕಾರ್ಯದರ್ಶಿಗೆ ದೂರು
ಎಂ.ಎ.ಸಲೀಂ ನೇಮಕ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಹೈಕೋರ್ಟ್ ವಕೀಲೆ ಸುಧಾ ಕಟ್ವಾ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.;
ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ & ಐಜಿಪಿ) ನೇಮಕವಾಗಿರುವ ಕನ್ನಡಿಗ ಎಂ.ಎ.ಸಲೀಂ ಅವರಿಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ.
ಎಂ.ಎ.ಸಲೀಂ ನೇಮಕ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಹೈಕೋರ್ಟ್ ವಕೀಲೆ ಸುಧಾ ಕಟ್ವಾ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರವು ಮೇ 21ರಂದು ಸಲೀಂ ಅವರನ್ನು ಡಿಜಿ-ಐಜಿಪಿಯನ್ನಾಗಿ ನೇಮಕ ಮಾಡಿ ಆದೇಶಿಸಿತ್ತು.
ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಪ್ರಭಾರ ಡಿಜಿಪಿ ನೇಮಕ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರ್ಬಂಧಿಸಿದೆ. ಯುಪಿಎಸ್‌ಸಿ ಶಿಫಾರಸು ಮಾಡುವ ಸಮಿತಿಯಿಂದ ಮಾತ್ರ ಅರ್ಹತೆ ಆಧರಿಸಿ ಡಿಜಿಪಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಆದರೆ, ಕರ್ನಾಟಕ ಸರ್ಕಾರ ಇಂತಹ ಯಾವುದೇ ನಿಯಮ ಪಾಲಿಸದೇ ನೇಮಕಾತಿ ಮಾಡಿರುವುದು ಸಂವಿಧಾನ ಬಾಹಿರ ಹಾಗೂ ಕಾನೂನಿನ ಉಲ್ಲಂಘನೆ ಎಂದು ದೂರಿದ್ದಾರೆ.
ಸಲೀಂ ಅವರ ನೇಮಕಾತಿ ಆದೇಶ ತಕ್ಷಣ ಹಿಂಪಡೆಯಬೇಕು. ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಪ್ರಕಾರವೇ ಡಿಜಿಪಿ ಹುದ್ದೆಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸುಪ್ರೀಂಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕು. ಭವಿಷ್ಯದಲ್ಲಿ ಯಾವುದೇ ತಾತ್ಕಾಲಿಕ ಅಥವಾ ಪ್ರಭಾರ ಐಜಿ- ಡಿಜಿಪಿ ನೇಮಕಾತಿ ನಡೆಯದಂತೆ ನೋಡಿಕೊಳ್ಳಬೇಕು. ಅಪರೂಪದ ಸಂದರ್ಭಗಳಲ್ಲಷ್ಟೇ ಅವಶ್ಯಕತೆ ಇದ್ದಾಗ ಮಾತ್ರ ಪ್ರಭಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಏಳು ದಿನಗಳೊಳಗೆ ಪಾಲಿಸದೇ ಹೋದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ನಿಂದನಾ ಪ್ರಕರಣ ದಾಖಲಿಸಲಾಗುವುದು ಎಂದು ವಕೀಲೆ ಸುಧಾ ಕಟ್ವಾ ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಮೇ 21 ರಂದು ಐಜಿ-ಡಿಜಿಪಿ ಹುದ್ದೆಯಿಂದ ನಿವೃತ್ತರಾದ ಅಲೋಕ್ ಮೋಹನ್ ಅವರ ಜಾಗಕ್ಕೆ ಎಂ.ಎ.ಸಲೀಂ ಅವರನ್ನು ಸರ್ಕಾರ ನೇಮಿಸಿತ್ತು. 1993 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಎಂ.ಎ. ಸಲೀಂ ಅವರು ರಾಜ್ಯದ 43 ನೇ ಡಿಜಿ ಮತ್ತು ಐಜಿಪಿಯಾಗಿ ನೇಮಕಗೊಂಡಿದ್ದರು. ಸಲೀಂ ಅವರ ನಿವೃತ್ತಿಗೆ ಒಂದು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಿಸಲಾಗಿದೆ. 2026 ಜೂನ್ ತಿಂಗಳಲ್ಲಿ ಸಲೀಂ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.