ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಸಿದರೆ ಹೋರಾಟ: ಅಹಿಂದ ಎಚ್ಚರಿಕೆ
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಸಿಎಂ ಬದಲಾವಣೆ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಶುರುವಾಗಿದೆ. ಈ ನಡುವೆ ಲಿಂಗಾಯತ ಸ್ವಾಮೀಜಿಗಳೂ ತಮ್ಮ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದಿದ್ದಾರೆ. ಇದೀಗ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಅಹಿಂದ ಅಖಾಡಕ್ಕೆ ಇಳಿದಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ, ʻʻಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. 5 ವರ್ಷ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರಬೇಕು. ಸಿದ್ದರಾಮಯ್ಯನವರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು. ಕೆಲವು ಸ್ವಾಮೀಜಿಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುತ್ತವೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡಬಾರದುʼʼ ಎಂದು ಆಗ್ರಹಿಸಿದ್ದಾರೆ.
ʻʻಸಿಎಂ ಬದಲಾವಣೆ ಆಗಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಹೀಗಾಗಿ ಅದು ಚಂದ್ರಶೇಖರ ಸ್ವಾಮೀಜಿಯವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ಬದಲಾವಣೆ ಆದರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಅಹಿಂದ ನಾಯಕರನ್ನು ತುಳಿಯೋ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯ ಬೆನ್ನೆಲುಬಾಗಿ ನಿಲ್ಲುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಅಹಿಂದ ಸಂಘಟನೆ ಮಾಡಿದ್ದೇವೆ. ರಾಜ್ಯದ ಜನ ಸಿದ್ದರಾಮಯ್ಯರನ್ನು ನೋಡಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆʼʼ ಎಂದರು.