ʻನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿʼ: ಸದನದಲ್ಲಿ ಗದ್ಗದಿತರಾದ ಹೆಚ್ ಡಿ ರೇವಣ್ಣ

Update: 2024-07-16 09:47 GMT

ʻʻನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ನಾನು ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನನ್ನ ಮೇಲೆ ಯಾರೋ ಆರೋಪ ಮಾಡುತ್ತಿದ್ದಾರೆʼʼ ಎಂದು ಹೊಳೆನರಸೀಪುರ ಶಾಸಕ ಹೆಚ್‌ಡಿ ರೇವಣ್ಣ ಅವರು ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ  ಗದ್ಗದಿತರಾದರು.

ವಿಧಾನ ಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಕೂಡ ವಾಲ್ಮೀಕಿ ಹಗರಣ ಕುರಿತು ಚರ್ಚೆ, ವಾದ-ವಿವಾದ ನಡೆಯುತ್ತಿದೆ. ಈ ವೇಳೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ʻʻಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಆದರೆ, ವಾಲ್ಮೀಕಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಅಷ್ಟೇ ಆಸಕ್ತಿಯಿಂದ ತನಿಖೆ ನಡೆಸುತ್ತಿಲ್ಲʼʼ ಎಂದು ಆರೋಪ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ʻʻಎರಡು ಪ್ರಕರಣವನ್ನು ಹೋಲಿಕೆ ಮಾಡುವುದು ಸರಿಯಲ್ಲ. ರೇವಣ್ಣ ಪ್ರಕರಣದಲ್ಲಿ ಮಹಿಳೆಯರ ಮಾನ ಹರಾಜಾಗಿದೆ. ಇದರ ವಿರುದ್ಧ ಕ್ರಮ ಆಗಬಾರದೇ? ರೇವಣ್ಣ ಪ್ರಕರಣ ಗಂಭೀರ ಅಲ್ವಾ? ಎರಡು ಪ್ರಕರಣ ಹೋಲಿಕೆ ಮಾಡುವುದು ಸರಿಯೇ?ʼʼ ಎಂದು ಪ್ರಶ್ನಿಸಿದರು.

ರಿಜ್ವಾನ್‌ ಮಾತಿಗೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ, ʻʻಹಣ ಹೋಗಿದೆ ಹಣ ಬರುತ್ತದೆ. ಆದರೆ ಮಾನ ಹೋದರೆ ವಾಪಸ್ ಬರುತ್ತಾ? ಹೆಣ್ಣುಮಕ್ಕಳ‌ಮಾನ ಕಾಪಾಡೋದು ಯಾರ?ʼʼ ಎಂದು ಕೇಳಿದರು.

ಈ ವೇಳೆ ಎಚ್ ಡಿ ರೇವಣ್ಣ ಮಾತನಾಡಿ, ʻʻನಿಮ್ಮ ಬಂಡವಾಳ ಏನು ಎಂದು ಗೊತ್ತಿದೆ. ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ. ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಾರೆ. ಡಿಜಿ ಆಗಲು ಯೋಗ್ಯನಾ ಅವನು? ಇದು ನೀಚ ಕೆಟ್ಟ ಸರ್ಕಾರʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಸದಸ್ಯರು ಎದ್ದು ನಿಂತು, ʻʻಪ್ರಜ್ವಲ್ ಮಾಡಿದ್ದು ಸರಿಯಾ? ಡಿಜಿ ದೂರು ತೆಗೆದುಕೊಳ್ಳುವುದು ತಪ್ಪಾ?ʼʼ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್, ರೇವಣ್ಣ ಅವರು ಅಧಿಕಾರಿಗಳ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅನ್ಯಾಯ ಆಗಿದ್ದರೆ ನೋಟಿಸ್ ಕೊಟ್ಟು ಚರ್ಚೆ ಮಾಡಲಿʼʼ ಎಂದರು.

ಅಶೋಕ್‌ ಮಾತನಾಡಿ, ʻʻವಾಲ್ಮೀಕಿ ನಿಗಮ ಕೇಸ್‌ನಲ್ಲಿ ಎಸ್‌ಐಟಿ ತಂಡ ನೋಟಿಸ್ ಕೊಟ್ಟು ಕರೆದೇ ಇಲ್ಲ. ಆದರೆ ಅದೇ ರೇವಣ್ಣ, ಭವಾನಿ ಪ್ರಕರಣದಲ್ಲಿ ಎಸ್​ಐಟಿ ತುಂಬಾ ಸ್ಟ್ರಾಂಗ್​ ಇದ್ದರು. ಎಷ್ಟು ಸ್ಟ್ರಾಂಗ್ ಎಂದರೆ ಎರಡೇ ದಿನದಲ್ಲಿ ಅರೆಸ್ಟ್​ ಮಾಡಿದರು. ಮಾಜಿ ಶಾಸಕ ಪ್ರೀತಂಗೌಡ ಕೇಸ್‌ನಲ್ಲೂ ಹಾಗೆ ಆಯಿತು. ವಾಲ್ಮೀಕಿ ನಿಗಮ ಕೇಸ್‌ನಲ್ಲಿ ಇನ್ನೂ ನೋಟಿಸ್ ಸಹ ಕೊಟ್ಟಿಲ್ಲ. ಎಸ್​ಐಟಿ ಕಚೇರಿಯಲ್ಲಿ 8 ಗಂಟೆಗಳ ಕಾಲ ಕೂರಿಸಿದ್ದರು. ಏನು ವಾಲ್ಮೀಕಿ ರಾಮಾಯಣ ಓದಲು ಕೂರಿಸಿದ್ದರಾ? ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರಶ್ನೆ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಹಿರಿಯ ಶಾಸಕ ಸುರೇಶ್‌ ಕುಮಾರ್‌ ಅವರು, ʻʻರಾಜ್ಯದಲ್ಲಿ ಎಸ್‌ಐಟಿ ಹಾಗೂ ಎಸ್‌ಎಸ್‌ಐಟಿ ಎಂಬ ಎರಡು ರೀತಿಯ ತನಿಖಾ ತಂಡಗಳಿವೆ. ಎಸ್‌ಐಟಿ ಎಂದರೆ ವಿಶೇಷ ತನಿಖಾ ದಳ. ಎಸ್‌ಎಸ್‌ಐಟಿ ಎಂದರೆ, ಸಿದ್ದರಾಮಯ್ಯ ಶಿವಕುಮಾರ್‌ ತನಿಖಾ ದಳ ಎಂದು ಹೇಳಿದರು.

Tags:    

Similar News