ಪರಿಣಾಮಕಾರಿ ಕರ್ತವ್ಯ ನಿರ್ವಹಿಸದಿದ್ದರೆ ಬದಲಿಸುವುದು ಅನಿವಾರ್ಯ :ಅಡ್ವೊಕೇಟ್ ಜನರಲ್‌ಗಳಿಗೆ ಸಿಎಂ ಎಚ್ಚರಿಕೆ

ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಕರ್ತವ್ಯ. ಸರ್ಕಾರದ ಆದ್ಯತೆಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.;

Update: 2025-06-26 14:12 GMT

ಸರ್ಕಾರದ ಪರ ನ್ಯಾಯಾಲಯಗಳಲ್ಲಿ ವಾದ ಮಂಡನೆಯನ್ನು ಪರಿಣಾಮಕಾರಿಯಾಗಿ ಮಾಡದೇ ಹೋದರೆ ಬದಲಾವಣೆ ಅನಿವಾರ್ಯ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.  

ವಿಧಾನಸೌಧದಲ್ಲಿ ನಡೆದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಪರ ಸಮರ್ಪಕವಾಗಿ ವಾದ ಮಾಡಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ.  ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಕರ್ತವ್ಯ. ಸರ್ಕಾರದ ಆದ್ಯತೆಗಳನ್ನು ಕಾಪಾಡುವುದು ತಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಹಲವು ಪ್ರಕರಣಗಳಲ್ಲಿ ಸರ್ಕಾರ ಹಿನ್ನಡೆ ‌ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಪ್ರಕರಣಗಳಲ್ಲಿ ಸಹ ಸರ್ಕಾರದ ಪರ ಆದೇಶಗಳು ಬರುತ್ತಿಲ್ಲ ಯಾಕೆ?  ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಯಾವ ಕಾರಣಕ್ಕಾಗಿ ತಡೆಯಾಜ್ಞೆ ದೊರೆಯುತ್ತದೆ? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 

ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಹ ಸರ್ಕಾರಕ್ಕೆ ಮುಜುಗುರವಾಗುವ ಬೆಳವಣಿಗೆಗಳಾಗಿವೆ. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ. ಸಂಪೂರ್ಣ ಸಿದ್ಧತೆಯೊಂದಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬೇಕು. ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ನೀಡಬಾರದು. ಪ್ರತಿಯೊಂದು ಪ್ರಕರಣಗಳನ್ನು ಸವಾಲಿನಿಂದ ಸ್ವೀಕರಿಸಿ, ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು. ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರವನ್ನು ನಿಗದಿಪಡಿಸಬೇಕು. ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಿ. ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ ಎಂದಿದ್ದಾರೆ. 

ರಾಜ್ಯ ಸರ್ಕಾರದ 21799 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿಯಿವೆ. ಇದರಲ್ಲಿ 5016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.  ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಅವರ ಸಭೆಯನ್ನು ಕರೆದು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

Tags:    

Similar News