ದ ಫೆಡರಲ್ ಕರ್ನಾಟಕದ ಜತೆಗಿನ ಸಂದರ್ಶನದಲ್ಲಿ 'ಬೂಕರ್ ಗೆಲ್ಲುವೆ' ಎಂದಿದ್ದ ಬಾನು ಮುಷ್ತಾಕ್
ಅಂದ ಹಾಗೆ ಪ್ರಶಸ್ತಿಯ ದೀರ್ಘ ಪಟ್ಟಿಗೆ ತಮ್ಮ ಕೃತಿ ಆಯ್ಕೆಯಾಗಿದ್ದ ವೇಳೆಯಲ್ಲಿ ಭಾನು ಮುಷ್ತಾಕ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ವಿಶೇಷ ಸಂದರ್ಶನ ನೀಡಿದ್ದರು. ಆ ವೇಳೆಯೇ ಅವರು ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.;
ಕನ್ನಡ ಸಾಹಿತ್ಯ ಲೋಕದಲ್ಲಿ ಇದೀಗ ಸಂಭ್ರಮದ ವಾತಾವರಣ ಮನೆಮಾಡಿದೆ. 2025ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್'ಗೆ ಲಭಿಸಿದೆ. ಈ ಕೃತಿಯನ್ನು ದೀಪಾ ಭಸ್ತಿ ಅನುವಾದ ಮಾಡಿದ್ದಾರೆ. ಲಂಡನ್ನಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಈ ಪುಸ್ತಕಕ್ಕೆ ಪ್ರಶಸ್ತಿ ನೀಡಲಾಗಿದೆ.
ಅಂದ ಹಾಗೆ ಪ್ರಶಸ್ತಿಯ ದೀರ್ಘ ಪಟ್ಟಿಗೆ ತಮ್ಮ ಕೃತಿ ಆಯ್ಕೆಯಾಗಿದ್ದ ವೇಳೆಯಲ್ಲಿ ಬಾನು ಮುಷ್ತಾಕ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ವಿಶೇಷ ಸಂದರ್ಶನ ನೀಡಿದ್ದರು. ಆ ವೇಳೆಯೇ ಅವರು ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.
ಮನಸ್ಸಿನ ಒಂದು ಮೂಲೆಯಲ್ಲಿ ನಿರೀಕ್ಷೆ ಇತ್ತು
ಬೂಕರ್ ಪ್ರಶಸ್ತಿಯ ದೀರ್ಘಪಟ್ಟಿಗೆ ತಮ್ಮ ಕೃತಿ ಆಯ್ಕೆಯಾದ ಬಗ್ಗೆ ಪ್ರಕಾಶಕರಿಂದ ಸಂದೇಶ ಬಂದಿದ್ದ ವೇಳೆಯ ತಮ್ಮ ಮನಸ್ಥಿತಿಯನ್ನು ವಿವರಿಸಿದ ಬಾನು ಮುಷ್ತಾಕ್, "ಸುಳ್ಳು ಹೇಳಲ್ಲ. ಬೂಕರ್ ಆಯ್ಕೆಗೆ ಪ್ರಕಾಶಕರು ಕಳುಹಿಸಿದ್ದ ಕಾರಣ, ಮನಸ್ಸಿನ ಒಂದು ಮೂಲೆಯಲ್ಲಿ, ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ನಿರೀಕ್ಷೆ ಇತ್ತು. ಮಂಗಳವಾರ ಸಂಜೆ 07.30ಕ್ಕೆ ನಮ್ಮ ಪ್ರಕಾಶಕರಾದ ತಾರಾ (ಇವರು ಮೆಕ್ಸಿಕನ್) ʻಇನ್ನು ಒಂದೆರಡು ಕ್ಷಣದಲ್ಲಿ ಆಯ್ಕೆ ಪ್ರಕಟವಾಗುತ್ತದೆ. ನಿಮಗೆ ಲಿಂಕ್ ಕಳುಹಿಸುತ್ತೇವೆʼ ಎಂದಾಗ ನಮ್ಮ 'ಹಾರ್ಟ್ ಲ್ಯಾಂಪ್' ದೀರ್ಘಪಟ್ಟಿಗೆ ಸೇರುವ ಬಗ್ಗೆ ಖಚಿತತೆ ಸಿಕ್ಕಿತು. ನಮ್ಮ ಲಿಟರರಿ ಏಜೆಂಟ್ ಕನಿಷ್ಕ ಅಂತೂ ಸಂತೋಷದಿಂದ ಕುಣಿದಾಡುತ್ತಿದ್ದ. ಅಂತಿಮವಾಗಿ ಪಟ್ಟಿಯಲ್ಲಿ ನಮ್ಮ ಕೃತಿ ಸೇರಿಕೊಂಡಿರುವುದು ಪ್ರಕಟವಾದಾಗ ನಾನು ನನ್ನ ಕಚೇರಿಯಲ್ಲಿದ್ದೆ. (ಬಾನು ಮುಷ್ತಾಕ್ ಹಾಸನದಲ್ಲಿ ವಕೀಲರಾಗಿದ್ದಾರೆ). ಎಲ್ಲರಲ್ಲೂ ಸಂಭ್ರಮ. ನನಗೆ ವ್ಯಕ್ತಪಡಿಸಲಾಗದ ಭಾವನೆ" ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು.
'ಹಾರ್ಟ್ ಲ್ಯಾಂಪ್' ಕೃತಿಯ ಯಶಸ್ಸಿನ ಹಾದಿ
ತಮ್ಮ ಕಥೆಗಳ ಅನುವಾದಕ್ಕೆ ದೀಪಾ ಭಸ್ತಿ ಅವರನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಬಾನು ಮುಷ್ತಾಕ್, "ನನ್ನ ಕಥೆಗಳ ಅನುವಾದಕ್ಕೆ ಕಾಲ ಪಕ್ವವಾಗಿದೆ ಅನ್ನಿಸಿದಾಗ ನನ್ನ ಗೆಳೆಯರಾದ ಬಸವ ಬಿರಾದಾರ್ ಅವರ ಸಲಹೆ ಕೇಳಿದ್ದೆ. ಅವರು ದೀಪಾ ಭಸ್ತಿ ಅವರ ಹೆಸರನ್ನು ಸೂಚಿಸಿ, ಅವರಿಂದ ಅನುವಾದ ಮಾಡಿಸಬಹುದೆಂದರು. ದೀಪಾ ಭಸ್ತಿ ಗೆ ನನ್ನ ʻಹಸೀನಾʼ ಕಥೆಯನ್ನು ಕಳುಹಿಸಿ ಇಷ್ಟವಾದರೆ ಇಂಗ್ಲಿಷ್‌ಗೆ ಅನುವಾದ ಮಾಡಿ ಎಂದು ಮನವಿ ಮಾಡಿದೆ. ಅದರ ಅನುವಾದವಾದ ನಂತರ ಆ ಕಥೆಯನ್ನು PEN ಪ್ರಿಂಟರ್ ಪ್ರೈಜ್ ಪ್ರಶಸ್ತಿಗೆ ಅವರು ಕಳುಹಿಸಿದರು. ನಮ್ಮ ಕಥೆ ಅವರ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದೇ ಅಲ್ಲದೆ, ಪ್ರಶಸ್ತಿಯನ್ನೂ ಗಳಿಸಿಕೊಂಡಿತು.
ಈ ಪ್ರಶಸ್ತಿಯ ಒಂದು ಮುಖ್ಯ ಸಂಗತಿಯೆಂದರೆ, ಈ ರೀತಿ ಆಯ್ಕೆಯಾದ ಕಥೆಯೂ ಸೇರಿದಂತೆ ಹನ್ನೆರಡು ಕಥೆಗಳನ್ನು ಆಯ್ಕೆಮಾಡಿದರೆ ಅದನ್ನು ಪ್ರಕಟಿಸಲಾಗುತ್ತದೆ. ಅದಕ್ಕೆ ಅವರ ಲಿಟರರಿ ಏಜೆಂಟ್ ನಮ್ಮನ್ನು ಸಂಪರ್ಕಿಸಿದರು. ಅದರಲ್ಲಿನ 'ರೆಡ್ ಲುಂಗಿ' ಎನ್ನುವ ಕಥೆಗೆ ಪ್ಯಾರಿಸ್ ರಿವ್ಯೂನಲ್ಲಿ ಉತ್ತಮ ಪ್ರತಿಕ್ರಿಯೆ ಬಂದು ಅದರಲ್ಲಿ ಪ್ರಕಟವೂ ಆಯಿತು. ಅದೇ ರೀತಿ ನನ್ನ ಇನ್ನೊಂದು ಕಥೆ “ಒಮ್ಮೆ ಹೆಣ್ಣಾಗು ಪ್ರಭುವೇ” ಕಥೆ 'ದ ಬಫ್ಲರ್' (ಅಮೆರಿಕಾದ ಪ್ರಮುಖ ಎಡಪಂಥೀಯ ರಾಜಕೀಯ ವಿಮರ್ಶೆ, ಸಾಂಸ್ಕೃತಿಕ ವಿಶ್ಲೇಷಣೆ, ಸಣ್ಣ ಕಥೆಗಳು, ಕವಿತೆಗಳು ಮತ್ತು ಕಲೆ) ಸಾಹಿತ್ಯಿಕ ನಿಯತಕಾಲಿಕೆಯಲ್ಲಿ ಪ್ರಕಟವಾಯಿತು. ಇದೀಗ 'ಹಾರ್ಟ್ ಲ್ಯಾಂಪ್' ಕೃತಿ ಪ್ರಕಟಣೆಗೆ ಸಿದ್ಧವಾಗಿದೆ. ಏಪ್ರಿಲ್ ಮೊದಲವಾರದಲ್ಲಿ ಓದುಗರಿಗೆ ಲಭ್ಯವಾಗಲಿದೆ” ಎಂದು ತಿಳಿಸಿದ್ದರು. .
ಸಾಹಿತ್ಯ ಲೋಕಕ್ಕೆ ಪಯಣ
ತಮ್ಮ ಸಾಹಿತ್ಯ ಲೋಕದ ಹಾದಿಯ ಬಗ್ಗೆ ನೆನಪಿಸಿಕೊಂಡಿದ್ದ ಬಾನು ಮುಷ್ತಾಕ್ , "ನನಗೆ ಅಕ್ಷರ ಜ್ಞಾನ ಬರುತ್ತಿದ್ದಂತೆ ನಾನು ಬರೆಯಲು ಆರಂಭಿಸಿದೆ. ನನ್ನ ತಂದೆಗೆ ಸಾಮಾಜಿಕ ಪ್ರಜ್ಞೆ ಇತ್ತು. ಆದರೆ ತಾಯಿಗೆ ಅಷ್ಟಿರಲಿಲ್ಲ. ಆ ಕಾಲಕ್ಕೆ ಇಂದಿನಂತೆ ನಮಗೆ ದಾರಿ ತೋರಿಸುವವರೂ ಇರಲಿಲ್ಲ. ನಾನು ಏಳನೇಯ ತರಗತಿಯಲ್ಲಿ ಓದುತ್ತಿದ್ದಾಗಲೇ ಕಾದಂಬರಿಯೊಂದನ್ನು ಬರೆಯುವ ಸಾಹಸ ಮಾಡಿದ್ದೆ. ನಾನು ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಕಥೆಯೊಂದನ್ನು ಕಳುಹಿಸಿದೆ. ಆಗ ಸಂಪಾದಕರಿಂದ ʻಕಾಗದದ ಒಂದೇ ಮಗ್ಗಲಿಗೆ ಬರೆದು ಕಳುಹಿಸಿʼ ಎಂಬ ಪತ್ರ ಬಂತು. ಕಾಗದದ ಒಂದೇ ಮಗ್ಗಲಿಗೆ ಬರೆಯುವುದು ಹೇಗೆ? ಎಂಬ ಜಿಜ್ಞಾಸೆ. ನನಗೆ ಗೊತ್ತಿಲ್ಲ. ಕೇಳಲು ಯಾರೂ ಇಲ್ಲ. ಅನೇಕ ಕಥೆಗಳನ್ನು ಬರೆದರೂ, ಅದನ್ನು ಪ್ರಕಟಣೆಗೆ ಕಳುಹಿಸುವುದು ಹೇಗೆಂದು ನನಗೆ ಗೊತ್ತಿರಲಿಲ್ಲ.
ಒಮ್ಮೆ ಬೆಂಗಳೂರಿಗೆ ಹೋದಾಗ ಜಯನಗರದಲ್ಲಿ ತಿರುಗಾಡುತ್ತಿದ್ದೆ. ಆಗ ಮನೆಯೊಂದರ ಮುಂದೆ ಮ.ನ. ಮೂರ್ತಿ ಎಂಬ ಫಲಕ ಕಾಣಿಸಿತು. ಅವರು ಬರಹಗಾರರು ಮತ್ತು ಪ್ರಜಾಮತ ಪತ್ರಿಕೆಯ ಸಂಪಾದಕರೆಂದು ಆ ವೇಳೆಗೆ ಗೊತ್ತಾಗಿತ್ತು. ಧೈರ್ಯ ಮಾಡಿ ಬಾಗಿಲು ತಟ್ಟಿದೆ, ಬಾಗಿಲು ತೆರೆಯಿತು. ಮ.ನ. ಮೂರ್ತಿ ಮನೆಯಲ್ಲಿಯೇ ಇದ್ದು ಒಳಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿದರು. ಅವರ ಮುಂದೆ ಇದೇ ಪ್ರಶ್ನೆ ಇಟ್ಟೆ. ʼಕಾಗದದ ಒಂದೇ ಮಗ್ಗಲಿಗೆ ಬರೆಯುವುದೆಂದರೆ ಹೇಗೆ?ʼ ಅವರು ನಕ್ಕು ವಿವರಿಸಿದರು. ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿದರು. ಹಾಗೆ ಕಾಗದದ ಒಂದೇ ಮಗ್ಗಲಿಗೆ ಕಥೆಯನ್ನು ಬರೆದು ಕಳುಹಿಸುತ್ತಿದ್ದೆ. ಯಾವುದೂ ಪ್ರಕಟವಾಗಲಿಲ್ಲ. ಕೊನೆಗೆ ನನಗೆ ಉತ್ತಮವೆನ್ನಿಸಿದ ಕಥೆಯೊಂದನ್ನು ಬರೆದು ಮ. ನ. ಮೂರ್ತಿ ಅವರಿಗೆ ಕಳುಹಿಸಿದೆ. ಪ್ರತಿವಾರವೂ, ನನ್ನ ಕಥೆ ಪ್ರಕಟವಾಗುವುದೆಂದು ಕಾಯುವುದೇ ಕೆಲಸವಾಗಿತ್ತು. 1974ರಲ್ಲಿ ನನ್ನ ಮದುವೆಯಾಯಿತು, ನಾನು ನನ್ನ ತವರಿಗೆ ಹೋದಾಗ ಅಂಗಡಿಯಲ್ಲಿ ಪ್ರಜಾಮತ ಕೊಂಡ ನನ್ನ ಪತಿ ಸಂಭ್ರಮದಿಂದ ಮನೆಗೆ ಬಂದರು. ನನ್ನ ಕಥೆ ಪ್ರಕಟವಾಗಿತ್ತು. ನಾನು ಬರಹಗಾರಳಾದೆ. ಆಮೇಲಿನದು ಎಲ್ಲರಿಗೂ ಗೊತ್ತಿರುವ ಕಥೆ. ಪ್ರಜಾವಣಿಯಿಂದ ಲಂಕೇಶ್ ಪತ್ರಿಕೆಯ ವರೆಗೆ ಎಲ್ಲ ಸಾಪ್ತಾಹಿಕ, ಮಾಸಿಕಗಳಿಗೆ ಕಥೆಯನ್ನು ಬರೆಯುತ್ತಿದ್ದೆ…” ಎಂದು ತಮ್ಮ ಸಾಹಿತ್ಯದ ಪಯಣವನ್ನು ನೆನಪು ಮಾಡಿಕೊಂಡಿದ್ದರು.
" ನಾನು ಏಪ್ರಿಲ್ 8 ರಂದು ಅಂತಿಮ ಪಟ್ಟಿ ಪ್ರಕಟಗೊಂಡಿತ್ತು. ಅದರಲ್ಲಿ ಹಾರ್ಟ್ ಲ್ಯಾಂಪ್ ಆಯ್ಕೆಯಾಗಿತ್ತು. ಆ ಮೊದಲೇ ಮಾತನಾಡಿದ್ದ ಭಾನು ಮುಷ್ತಾಕ್ ಅವರು. ಮೇ 21ರಂದು ಆಯ್ಕೆಯಾಗುವ ಕೃತಿ ನನ್ನದಾಗಿರುತ್ತದೆಯೇ? ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದರು.
ಕನ್ನಡ ಸಾಹಿತ್ಯದಲ್ಲಿ ಹೊಸ ಉತ್ಸಾಹ
ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಉತ್ಸಾಹ ಮೂಡುತ್ತಿದ್ದು, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿವೆ. ಜಯಂತ ಕಾಯ್ಕಿಣಿ ಅವರ ಕಥೆಗಳ ಅನುವಾದ 'ನೋ ಪ್ರೆಸೆಂಟ್ಸ್ ಪ್ಲೀಸ್: ಮುಂಬೈ ಸ್ಟೋರೀಸ್' (ಅನುವಾದ: ತೇಜಸ್ವಿನಿ ನಿರಂಜನ) ಕೃತಿಗೆ ಡಿಎಸ್‌ಸಿ ಪ್ರೈಜ್ ಫಾರ್ ಸೌತ್ ಏಷ್ಯನ್ ಲಿಟರೇಚರ್ ದಕ್ಕಿದೆ. ವಿವೇಕ್ ಶಾನುಭಾಗ್ ಅವರ ಕೃತಿ 'ಘಾಚರ್ ಘೋಚರ್' (ಅನುವಾದ: ಶ್ರೀನಾಥ್ ಪೆರೂರ್) ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ವನಮಾಲಾ ವಿಶ್ವನಾಥ್ ಅವರು 'ಬ್ರೈಡ್ ಇನ್ ದ ಹಿಲ್ಸ್' ಎಂದು ಅನುವಾದಿಸಿದ್ದಾರೆ. ಖ್ಯಾತ ಕನ್ನಡದ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಆಯ್ದ ವಿಮರ್ಶಾ ಲೇಖನಗಳ ಸಂಕಲನ 'ಕೋರ್ಟೆಸಿ ಆಫ್ ಕ್ರಿಟಿಸಿಸಂ' ಎಂದು ಕಮಲಾಕರ ಭಟ್ ಅನುವಾದಿಸಿದ್ದಾರೆ. ಬಾನು ಮುಷ್ತಾಕ್ ಈಗ ಈ ಸಾಹಿತಿಗಳ ಸಾಲಿಗೆ ಸೇರಿರುವುದು, ಕನ್ನಡಕ್ಕೆ ಸಂದ ಮತ್ತೊಂದು ಗೌರವ.
2013ರಲ್ಲಿ ಯು. ಆರ್. ಅನಂತಮೂರ್ತಿ ಅವರ ಕೃತಿ ಬೂಕರ್ ಇಂಟರ್ನ್ಯಾಷನಲ್ ಪ್ರೈಜ್‌ಗೆ ನಾಮಕರಣಗೊಂಡಿತ್ತು. ಆದರೆ ಪ್ರಶಸ್ತಿ ಅವರಿಗೆ ದಕ್ಕಲಿಲ್ಲ. 2022ರಲ್ಲಿ ಗೀತಾಂಜಲಿ ಶ್ರೀ ಅವರಿಗೆ ʻರೇತ್ ಸಮಾಧಿʼ (ಇಂಗ್ಲಿಷ್ ಅನುವಾದ 'ಟಾಂಬ್ ಆಫ್ ಸ್ಯಾಂಡ್', ಅನುವಾದ: ಡೈಸಿ ರಾಕ್ವೆಲ್)ಗೆ ಈ ಬೂಕರ್ ಪ್ರಶಸ್ತಿ ಲಭ್ಯವಾಗಿತ್ತು. ಇದೇ ರೀತಿ 2023ರಲ್ಲಿ ಪೆರುಮಾಳ್ ಮುರುಗನ್ ಅವರ ʻಪೂಕಳ್ʼ ಕೃತಿಯ ಇಂಗ್ಲಿಷ್ ಅನುವಾದ 'ಪೈರ್' (ಅನುವಾದ: ಅನಿರುದ್ಧ್ ವಾಸುದೇವನ್) ಅವರ ಕೃತಿಯೂ ದೀರ್ಘಪಟ್ಟಿಯಲ್ಲಿ ಸೇರಿದ್ದನ್ನು ನೆನಪಿಸಿಕೊಳ್ಳಬಹುದು.
ಮುಸ್ಲಿಂ ಸಮುದಾಯದ ಸಂವೇದನೆ ಮತ್ತು 'ಹಸೀನಾ' ಸಿನಿಮಾವಾಗಿ
"ಕೌಟುಂಬಿಕ ಹಾಗೂ ಸಮುದಾಯದ ತುಮುಲಗಳನ್ನು ಪ್ರಾದೇಶಿಕ ಸೊಗಡಿನೊಂದಿಗೆ ತಮ್ಮದೇ ಆದ ವ್ಯಂಗ್ಯದ ಶೈಲಿಯಲ್ಲಿ ಇಲ್ಲಿನ ಕಥೆಗಳು ಕಟ್ಟಿಕೊಟ್ಟಿವೆ” ಎಂದು 'ಹಾರ್ಟ್ ಲ್ಯಾಂಪ್' ಕೃತಿ ಕುರಿತು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. "ಸಮಾಜದ ಅಂಚಿನಲ್ಲಿರುವ ಸಮುದಾಯದ ಬದುಕಿನ ಅನ್ವೇಷಣೆಯ ಈ ಕೃತಿ ತೀರಾ ಸಾಂದ್ರವಾದ ಭಾವುಕ ಮತ್ತು ನೈತಿಕ ನೆಲೆಗಟ್ಟನ್ನು ಹೊಂದಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ತಳಮಳಗಳನ್ನು ಬಾನು ಮುಷ್ತಾಕ್ ತಮ್ಮ 1990 ರಿಂದ 2023ರ ವರೆಗಿನ ತಮ್ಮ ಸಣ್ಣ ಕಥೆಗಳಲ್ಲಿ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ. ಈ ರೀತಿ ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಗಾಢವಾಗಿ ತಮ್ಮ ಚಿತ್ರಕ ಶೈಲಿಯಲ್ಲಿ ಕಟ್ಟಿಕೊಟ್ಟವರೆಂದರೆ ಸಾರಾ ಅಬೂಬಕರ್. ಸಾರಾ ಅಬೂಬಕರ್ ಅವರ ಬಹುಶೃತ ಕೃತಿ ʻಚಂದ್ರಗಿರಿ ತೀರದಲ್ಲಿʼ ಅನ್ನು ವನಮಾಲಾ ವಿಶ್ವನಾಥ ಅವರು 'ಬ್ರೇಕಿಂಗ್ ಟೈಸ್' ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಬಾನು ಮುಷ್ತಾಕ್ ಅವರ ʻಹಸೀನಾʼ ಕೃತಿಯನ್ನು ಆಧರಿಸಿ, ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅದೇ ಹೆಸರಿನಲ್ಲಿ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. 2004ರಲ್ಲಿ ಬಿಡುಗಡೆಯಾದ ಈ ಚಿತ್ರದ ನಾಯಕಿ ಪಾತ್ರಕ್ಕೆ ತಾರಾ ಅನುರಾಧ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಶ್ರೇಷ್ಠ ಕೌಟುಂಬಿಕ ಚಿತ್ರ ಶೀರ್ಷೀಕೆಯಡಿಯಲ್ಲಿ ರಜತ ಕಮಲ ಪ್ರಶಸ್ತಿಯನ್ನು ʻಹಸೀನಾʼ ತನ್ನದಾಗಿಸಿಕೊಂಡಿತ್ತು. ಬಾನು ಮುಷ್ತಾಕ್ ಅವರು ಕೆಲವು ಕಾಲ ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದರು. ಲಂಕೇಶ್ ಗರಡಿಯಲ್ಲಿ ಪಳಗಿದ ಬಾನು ಮುಷ್ತಾಕ್ ʻಲಂಕೇಶ್ ಪತ್ರಿಕೆʼಗೆ ಅತ್ಯುತ್ತಮ ವರದಿಗಳನ್ನು ಕೂಡ ಬರೆದಿದ್ದಾರೆ.
ಬಾನು ಅವರ ಇತರ ಕೃತಿಗಳು
ಬಾನು ಮುಷ್ತಾಕ್ ಅವರ ಇತರೆ ಪ್ರಮುಖ ಕೃತಿಗಳೆಂದರೆ: ʻಹೆಜ್ಜೆ ಮೂಡದ ಹಾದಿʼ, ʻಬೆಂಕಿ ಮಳೆʼ, ʻಎದೆಯ ಹಣತೆʼ, ʻಬಡವರ ಮಗಳು ಹೆಣ್ಣಲ್ಲʼ (ಸಣ್ಣ ಕತೆಗಳು), ʻಕುಬ್ರʼ (ಕಾದಂಬರಿ), ʻಒದ್ದೆ ಕಣ್ಣಿನ ಬಾಗಿನʼ (ಕವನ ಸಂಕಲನ), ʻಇಬ್ಬನಿಯ ಕಾವುʼ (ಪ್ರಬಂಧಗಳು), ಕೌಟುಂಬಿಕ ದೌರ್ಜನ್ಯ ಕಾಯ್ದೆ (On Domestic Violence Act).
ಬೂಕರ್ ಪ್ರಶಸ್ತಿಯ ದೀರ್ಘಪಟ್ಟಿಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಕೃತಿಯು ಕನ್ನಡ ಸಾಹಿತ್ಯವನ್ನು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗಲಿ ಎಂದು ಹಾರೈಸೋಣ.