ಕೋಲಾರ ಕಗ್ಗಂಟು | ಪಕ್ಷದ ನಿರ್ಧಾರಕ್ಕೆ ಬದ್ಧ, ಟಿಕೆಟ್‌ ತಪ್ಪಿಸಿದವರ ಬಗ್ಗೆ ಮಾತು ಬೇಡ: ಸಚಿವ ಮುನಿಯಪ್ಪ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊಸಮುಖಕ್ಕೆ ಮಣೆ ಹಾಕಿದ್ದು, ತನ್ನ ಅಳಿಯನಿಗೆ ಟಿಕೆಟ್‌ ಕೊಡಿಸಬೇಕೆಂದು ಭಾರೀ ಲಾಭಿ ಮಾಡಿದ್ದ ಸಚಿವ ಕೆ.ಎಚ್‌ ಮುನಿಯಪ್ಪ ಅವರಿಗೆ ಭಾರೀ ಹಿನ್ನಡೆಯಾಗಿದೆ.

Update: 2024-03-31 07:41 GMT

ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೆ.ವಿ ಗೌತಮ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು, ಕೋಲಾರದ ಟಿಕೆಟ್‌ಗಾಗಿ ಭಾರೀ ಲಾಬಿ ನಡೆಸಿದ್ದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣ ಹಾಗೂ ಸಚಿವ ಕೆ.ಎಚ್‌ ಮುನಿಯಪ್ಪ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಅದಾಗ್ಯೂ, ತಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಚಿವ ಮುನಿಯಪ್ಪ ಹೇಳಿದ್ದಾರೆ.

ಟಿಕೆಟ್‌ ಘೋಷಣೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿಯಪ್ಪ ಅವರು, ʼಗೌತಮ್​ಗೆ ಟಿಕೆಟ್​ ನೀಡಿರುವುದು ಸ್ವಾಗತಾರ್ಹ. ಅವರಿಗೆ ರಾಜಕೀಯ ಹಿನ್ನಲೆ ಇದೆ. ಅವರ ತಂದೆ ಮೇಯರ್‌ ಆಗಿದ್ದವರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಿದೆʼ ಎಂದಿದ್ದಾರೆ. 

"ಟಿಕೆಟ್‌ ಕೇಳಿದ್ದೆ. ಕೆ.ಸಿ.ವೇಣುಗೋಪಾಲ್, ರಣದೀಪ್‌ ಸಿಂಗ್ ಸುರ್ಜೇವಾಲ‌ ಅವರು ನಮ್ಮ ಹೆಸರು ಅಂತಿಮಗೊಳಿಸಿದ್ದರು. ಎಲ್ಲಾ ಶಾಸಕರು ಒಗ್ಗಟ್ಟಾಗಿ ಬರೋದಕ್ಕೆ ಆಗಲಿಲ್ಲ. ಹೀಗಾಗಿ ಬೇರೆಯವರಿಗೆ ಅನಿವಾರ್ಯವಾಗಿ ಟಿಕೆಟ್ ನೀಡಲಾಗಿದೆ. ನಮ್ಮಲ್ಲಿ ಒಮ್ಮತ ಅಭಿಪ್ರಾಯ ಮೂಡದಿರುವುದಕ್ಕೆ ಕೆ.ವಿ.ಗೌತಮ್​ಗೆ ಕೊಟ್ಟಿದ್ದಾರೆ. ನಮಗೆ ಟಿಕೆಟ್ ತಪ್ಪಿಸಿದ್ದವರ ಬಗ್ಗೆ ಮಾತಾಡುವುದು ಬೇಡ. ನಾವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು. ನನ್ನ ಕಡೆಯಿಂದ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅವರ (ರಮೇಶ್‌ ಬಣದ) ಕಡೆಯಿಂದ ಅವರು ಕೆಲಸ ಮಾಡಲಿ. ಅಂತಿಮವಾಗಿ ಕಾಂಗ್ರೆಸ್‌ ಗೆಲ್ಲುವುದಷ್ಟೇ ಮುಖ್ಯ" ಎಂದು ಮುನಿಯಪ್ಪ ಹೇಳಿದ್ದಾರೆ. 

"ನನ್ನ ಅಳಿಯನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್‌ ನವರು ನನ್ನ ಕರೆದು ಮಾತನಾಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡುತ್ತೇನೆ. ಕೇಂದ್ರದಲ್ಲಿಯೂ ನಾನು ಕೆಲಸ ಮಾಡಿದ್ದೇನೆ, ಸ್ವಪ್ರತಿಷ್ಠೆಗಳು ಏನೂ ಇಲ್ಲ. ಈ ರೀತಿಯ ಘಟನೆಗಳು ನನಗೆ ಎರಡರಿಂದ ಮೂರು ಸಲ ಆಗಿದೆ" ಎಂದು ಅವರು ಹೇಳಿದರು.

ಕೋಲಾರದ ಟಿಕೆಟ್‌ ತಮ್ಮ ಅಳಿಯನಿಗೆ ಕೊಡಬೇಕೆಂದು ಸಚಿವ ಮುನಿಯಪ್ಪ ಅವರು ಪ್ರಯತ್ನ ಪಟ್ಟಿದ್ದರು. ಒಂದು ಹಂತದಲ್ಲಿ ಮುನಿಯಪ್ಪ ಅಳಿಯನಿಗೆ ಟಿಕೆಟ್‌ ನೀಡುವ ಬಗ್ಗೆಯೂ ಹೈಕಮಾಂಡ್‌ ಯೋಚಿಸಿತ್ತು. ಆದರೆ, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಬಾರದೆಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಬಣ ಪಟ್ಟುಹಿಡಿದಿತ್ತು, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ರಾಜಿನಾಮೆ ನೀಡುವುದಾಗಿ ಐವರು ಕಾಂಗ್ರೆಸ್‌ ಶಾಸಕರು ಬೆದರಿಕೆ ಹಾಕಿದ್ದರು. ಹೀಗಾಗಿ, ಕೆ.ವಿ ಗೌತಮ್‌ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದೆ.

Tags:    

Similar News