ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ, ಬಿಜೆಪಿ ಶುದ್ಧೀಕರಣ ನನ್ನ ಗುರಿ: ಡಿ.ವಿ ಸದಾನಂದ ಗೌಡ

ನನಗೆ ಟಿಕೆಟ್ ನೀಡದಿರುವುದು ನೋವಾಗಿದೆ. ನನಗೆ ಅನ್ಯಾಯ ಮಾಡಿದವರು ಮತ್ತು ನೋವುಂಟು ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪಪಡಲಿದ್ದಾರೆ ಎಂದು ಡಿವಿಎಸ್ ಹೇಳಿದ್ದಾರೆ.

Update: 2024-03-21 11:11 GMT

ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಕ್ಕೆ ಮಾಜಿ ಸಿಎಂ ಸದಾನಂದಗೌಡ ಅವರು ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಆದರೆ, ನಾನು ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಡಿವಿಎಸ್ ಅವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

“ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವವರು ಸ್ವಾರ್ಥ ಬಿಡಬೇಕು” ಎಂದು ಹೇಳಿದ ಅವರು, "ತಾವು ಬಿಜೆಪಿಯಲ್ಲಿಯೇ ಇದ್ದು, ಪಕ್ಷ ಶುದ್ಧೀಕರಣ್ಕಕಾಗಿ ಕೆಲಸ ಮಾಡುತ್ತೇನೆ. ಕುಟುಂಬ ರಾಜಕಾರಣದ ವಿರುದ್ದ ಹೋರಾಡುತ್ತೇನೆ” ಎಂದು ಹೇಳಿದ್ದಾರೆ.

“ನನಗೆ ಅವಮಾನ ಮಾಡಲಾಗಿದೆ. ಆರತಿ ಮಾಡಿ ಒಳಗೆ ಕರೆದುಕೊಂಡವರು ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ. ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವವರು ಕುಟುಂಬ ರಾಜಕಾರಣ ಮಾಡಬಾರದು, ಸ್ವಾರ್ಥ ಬಿಡಬೇಕು. ಚುನಾವಣೆ ನಂತರ ಈ ಕುಟುಂಬ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಆಗಬೇಕು. ಅದಕ್ಕಾಗಿ ಬಿಜೆಪಿಯೊಳಗೆ ನಿಂತು ಹೋರಾಡುತ್ತೇನೆ” ಎಂದಿದ್ದಾರೆ.

"ನನಗೆ ಟಿಕೆಟ್ ನೀಡದಿರುವುದು ನೋವಾಗಿದೆ. ನನಗೆ ಅನ್ಯಾಯ ಮಾಡಿದವರು ಮತ್ತು ನೋವುಂಟು ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಲಿದ್ದಾರೆ" ಎಂದು ಡಿವಿಎಸ್ ಹೇಳಿದ್ದಾರೆ.

"ಮೋದಿ ಅವರು ಇಡೀ ದೇಶವೇ ನನ್ನ ಪರಿವಾರ ಎಂದಿದ್ದಾರೆ. ಆದರೆ, ಇಲ್ಲಿ ಒಂದು ಕುಟುಂಬದ ಹಿಡಿತಕ್ಕೆ ಪಕ್ಷ ಸಿಲುಕಿದೆ. ಪಕ್ಷ ಯಾವತ್ತೂ ಒಂದು ಜಾತಿ, ಒಂದು ಕುಟುಂಬಕ್ಕೆ ಸೀಮಿತವಾಗಬಾರದು. ಇದು ಪಕ್ಷದ ನಿಲುವು ಮತ್ತು ಸಿದ್ಧಾಂತಕ್ಕೆ ವಿರುದ್ಧವಾದದ್ದು" ಎಂದು ಅವರು ಹೇಳಿದ್ದಾರೆ.

Tags:    

Similar News