ನಾನು ರಾಜೀನಾಮೆ ಕೊಡ್ತೀನಿ,...: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?

"ಅಮಿತ್ ಶಾ ಅವರು ದೇಶದ ಗೃಹ ಸಚಿವರು. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ನಾವ್ಯಾಕೆ ಸುಳ್ಳು ಹೇಳೋಣ?" ಎಂದು ಕೇಳಿದ್ದಾರೆ.

Update: 2024-04-03 09:47 GMT

ʻʻದೇಶದ ಗೃಹ ಸಚಿವರಿಗೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಒಡೆದಂತೆ ಸುಳ್ಳು ಹೇಳುತ್ತಾರೆʼʼ ಎಂದು ಸಿಎಂ ಸಿದ್ದರಾಮಯ್ಯ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಅಶೀರ್ವಾದ ಪಡೆದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದ್ದಾರೆ.

ʻʻಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ತಂಡವೂ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಅದು ಸುಳ್ಳಾಗಿದ್ದರೆ, ನಾನು ರಾಜೀನಾಮೆ ನೀಡಲು ಸಿದ್ಧವಿದ್ದೇನೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಕೊಡಲು ಸಿದ್ದರಿದ್ದಾರೆಯೇ?ʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ʻʻಅಕ್ಟೋಬರಿನಲ್ಲಿಯೇ ನಾವು ಮೂರು ಮನವಿ ಸಲ್ಲಿಸಿದ್ದೇವೆ. ಆ ಬಳಿಕ ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು, ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ. ನಾನು ಡಿಸೆಂಬರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೇ ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೇನೆ. ಇದಾಗಿ ನಾಲ್ಕು ತಿಂಗಳಾದರೂ ಪರಿಹಾರ ಬಂದಿಲ್ಲ. ವಿಳಂಬ ಮಾಡುತ್ತಿರುವುದೇಕೆ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

"ಅಮಿತ್ ಶಾ ಅವರು ದೇಶದ ಗೃಹ ಸಚಿವರು. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ನಾವ್ಯಾಕೆ ಸುಳ್ಳು ಹೇಳೋಣ?" ಎಂದು ಕೇಳಿದ್ದಾರೆ.

ʻʻಕೇಂದ್ರಕ್ಕೆ ಮನವಿ ಕೊಟ್ಟಿದ್ದು, ಭೇಟಿ ಆಗಿದ್ದೆಲ್ಲವೂ ಸತ್ಯವಲ್ಲವೇ? ಡಿಸೆಂಬರ್ 23ಕ್ಕೆ ಸಭೆ ಕರೆದಿದ್ದೇನೆ, ಅಂದು ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದೀರಲ್ವಾ? ಸಭೆ ಮಾಡಿದ್ರಾ? ಅನುದಾನ ಕೊಟ್ಟಿದ್ದೀರಾ? ಅದನ್ನೆಲ್ಲ ಸಾಬೀತುಪಡಿಸಲು ನಾನು ಸಿದ್ದನಿದ್ದೇನೆ. ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟಿಗೆ ಕೊಟ್ಟಿದ್ದೇವೆ. ದಾಖಲೆಗಳು ಇಲ್ಲದಿದ್ದರೆ ಕೋರ್ಟಿಗೆ ಹೋಗಲಾದೀತೇ?ʼʼ ಎಂದು ಸಿದ್ದರಾಮಯ್ಯ, ಅಮಿತ್ ಶಾ ಅವರಿಗೆ ಸರಣಿ ಪ್ರಶ್ನೆ ಮಾಡಿದ್ದಾರೆ.

ʻʻಎನ್‌ ಡಿಆರ್‌ ಎಫ್ (NDRF) ‌ಅಡಿ ಬರ ಪರಿಹಾರ ಹಣ ಕೊಡಲೇಬೇಕು. ಇದು ಕೇಂದ್ರ ಸರ್ಕಾರದ ಹಣ ಅಲ್ಲ. ರಾಜ್ಯದ ಹಣ. ಆ ಹಣವನ್ನು ಈವರೆಗೂ ಕೊಡದ ಬಿಜೆಪಿಯವರಿಗೆ ಮತದಾರರು ಮತ ಹಾಕಬಾರದು" ಎಂದು ಹೇಳಿದರು.

Tags:    

Similar News