BJP Infighting | ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ನಾನೂ ಪ್ರಬಲ ಆಕಾಂಕ್ಷಿ: ಕುಮಾರ್ ಬಂಗಾರಪ್ಪ
ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನಾನು. ಚುನಾವಣೆ ಬಂದಾಗ ಒಟ್ಟಾಗಿ ನಿರ್ಧಾರ ತೆಗೆದುಕೊಂಡು ನಮ್ಮ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.;
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ದಿನದಿಂದ ದಿನಕ್ಕೆ ತನ್ನ ಪಟ್ಟು ಬಿಗಿಗೊಳಿಸುತ್ತಿದೆ.
ಈ ನಡುವೆ, ವಿಜಯೇಂದ್ರ ಬದಲಾವಣೆ ಶತಸಿದ್ಧ. ಈ ವಿಷಯದಲ್ಲಿ ತಮ್ಮ ಬಣದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಬೆಂಗಳೂರಿನಲ್ಲಿ ಪುನರುಚ್ಚರಿಸಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಪ್ರಬಲ ಆಕಾಂಕ್ಷಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಕುಮಾರ ಬಂಗಾರಪ್ಪ, ಗುರುವಾರ ನಡೆದ ತಮ್ಮ ಬಣದ ಸಭೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗುತ್ತಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ತಮ್ಮ ಮುಂದಿನ ಹೋರಾಟದ ಕುರಿತೂ ಕುಮಾರ ಬಂಗಾರಪ್ಪ ವಿವರಿಸಿದ್ದಾರೆ.
ಹಿಂದಕ್ಕೆ ಸರಿಯುವ ಮಾತೇ ಇಲ್ಲ
ಯಾವುದೇ ಕಾರಣಕ್ಕೂ ನಾವು ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ ಎಂದು ಕುಮಾರ್ ಬಂಗಾರಪ್ಪ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ರಾಜ್ಯ ಅಧ್ಯಕ್ಷರ ಆಯ್ಕೆಯ ಚುನಾವಣೆಯಿಂದ ಹಿಂದೆ ಸರಿದಿದ್ದೇವೆ ಎಂದು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾವು ಹಿಂದಕ್ಕೆ ಸರಿಯುವುದಿಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರದ ನಾಯಕರಿಗೆ ವರದಿ ಸಲ್ಲಿಸಿದ್ದೇವೆ. ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾಧ್ಯಕ್ಷರ ಚುನಾವಣೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಬರುವ ದಿನಾಂಕವೇ ಇನ್ನೂ ನಿರ್ಧಾರ ಆಗಿಲ್ಲ. ಕೇಂದ್ರದ ವರಿಷ್ಠರು ಯಾವುದೇ ನಿರ್ಧಾರದ ಬಗ್ಗೆ ಚರ್ಚೆ ಮಾಡಿಲ್ಲ. ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಯಾರು ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ನಾವೆಲ್ಲ ಚರ್ಚೆ ಮಾಡುತ್ತೇವೆ. ನಮ್ಮ ಹೇಳಿಕೆಗೆ ನಾವು ಈಗಲೂ ಬದ್ದರಿದ್ದೇವೆ. ಶೋಕಾಸ್ ನೋಟಿಸ್ ಎಂಬುದು ರಾಜಕೀಯ ಅಲ್ಲ. ನೋಟಿಸ್‌ಗೆ ಹಿರಿಯರಾದ ಯತ್ನಾಳ್ ಸೂಕ್ತ ಉತ್ತರ ಕೊಟ್ಟಿದ್ದಾರೆ. ಜೊತೆಗೆ ಯತ್ನಾಳ್ ಅವರ ಹಿಂದೆ ನಾವೆಲ್ಲರೂ ಇದ್ದೇವೆ. ನಾವು ಯಾರೂ ವಿಚಲಿತರಾಗಿಲ್ಲ. ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಕುಮಾರ್ ಹೇಳಿದ್ದಾರೆ.
ಫೆ. 20 ರಂದು ನಾವೆಲ್ಲರೂ ಸಭೆ ಸೇರಿದ್ದೆವು. ಆಗ ಬಹಳಷ್ಟು ವಿಚಾರಗಳ ಕುರಿತು ಚರ್ಚೆ ಮಾಡಿದ್ದೇವೆ. ವಕ್ಫ್ ವಿಚಾರವಾಗಿಯೂ ನಾವು ಚರ್ಚೆ ಮಾಡಿದ್ದೇವೆ. ನಮ್ಮ ಮುಖಂಡರು, ಪಕ್ಷದ ಹಿರಿಯ ನಾಯಕರು ಸೇರಿದ್ದಾಗ ರಾಜಕೀಯ ವಿದ್ಯಮಾನ, ರಾಷ್ಟ್ರದ ಅನೇಕ ವಿಚಾರಗಳು ಚರ್ಚೆ ಆದವು. ವಕ್ಫ್ ಚರ್ಚೆಯಿಂದ ನಮಗೆ ಬಹಳಷ್ಟು ಮಾರ್ಗದರ್ಶನ ಆಗಿದೆ. ಇದು ಹಿಂದೂಗಳನ್ನು ಹತ್ತಿರ ತರುವ ಹೋರಾಟವಾಗಿದೆ. ವಕ್ಫ್ ಕುರಿತು ಈಗಾಗಲೇ ಜೆಪಿಸಿ ವರದಿ ಮಂಡನೆಯಾಗಿದೆ. ಅದು ಜಾರಿಯಾಗುವಂತೆ ಮುಂದೆ ಕೇಂದ್ರ ಸರ್ಕಾರಕ್ಕೆ ಒತ್ತಡ ಮಾಡಬೇಕಿದೆ. ವಕ್ಫ್ ದೊಡ್ಡ ಆಸ್ತಿಗಳನ್ನು ಇಡೀ ರಾಷ್ಟ್ರದ ರೈತರಿಗೆ ಕೊಡಬೇಕು ಎಂದು ಕುಮಾರ್ ಬಂಗಾರಪ್ಪ ಆಗ್ರಹಿಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ
ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ ಬಂಗಾರಪ್ಪ ಸ್ಪಷ್ಟಪಡಿಸಿದ್ದು, ಹಿಂದುಳಿದ, ದಲಿತ ಸಮುದಾಯಗಳ ಮತವನ್ನು ಪಕ್ಷಕ್ಕೆ ಕ್ರೋಡೀಕರಿಸುವ ವಿಚಾರ ಇದೆ. ದೇವೇಗೌಡರು, ಕುಮಾರಸ್ವಾಮಿ ನಮ್ಮ ಪಕ್ಷದ ಜೊತೆಗಿದ್ದಾರೆ. ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಾಧಕಬಾಧಕಗಳನ್ನು ನೋಡಬೇಕು. ಆ ಹಿನ್ನೆಲೆಯಲ್ಲಿ ನನ್ನನ್ನೂ ಪರಿಗಣಿಸಿದರೆ ನಾನು ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದಿದ್ದಾರೆ.
ಆ ಮೂಲಕ ತಾವು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬುದನ್ನು ಕುಮಾರ ಬಂಗಾರಪ್ಪ ಗಟ್ಟಿಯಾಗಿ ಹೇಳಿದ್ದಾರೆ.
ಯಡಿಯೂರಪ್ಪ ಬಗ್ಗೆ ಗೌರವವಿದೆ
ನಾವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವೈಯಕ್ತಿಕವಾಗಿ ಗೌರವ ಕೊಡುತ್ತೇವೆ. ಅವರಿಗೆ ಅಗೌರವ ತೋರುವ ವಿಚಾರ ನಮಗಿಲ್ಲ. ಯಡಿಯೂರಪ್ಪ, ದೇವೇಗೌಡರು, ಸಿದ್ದರಾಮಯ್ಯನವರ ಬಗ್ಗೆ ನಾವು ಅಗೌರವ ತೋರುವುದಿಲ್ಲ. ಆದರೆ ಸಿದ್ದರಾಮಯ್ಯ ಅವರ ಆಡಳಿತ ತಪ್ಪು ಅಲ್ಲವಾ? ಅದನ್ನು ನಾವು ವಿರೋಧ ಮಾಡುತ್ತಿದ್ದೇವೆ. ಆದರೆ, ಅವರ ರಾಜಕೀಯ ಹೋರಾಟ, ಸಾಧನೆಯ ಬಗ್ಗೆ ನಮಗ್ಯಾರಿಗೂ ಅಗೌರವ ಇಲ್ಲ. ನಾವೆಲ್ಲರೂ ಆ ಎಲ್ಲಾ ಹಿರಿಯ ನಾಯಕರನ್ನೂ ಗೌರವದಿಂದಲೇ ಎಂದು ಕುಮಾರ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷರ ಪರ ಜನಾಂದೋಲನವೇ?
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಜನಾಂದೋಲನ ಕಾರ್ಯಕ್ರಮದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರ್, ಏನು ಜನಾಂದೋಲನ ಅದು? ಜನಾಂದೋಲನದ ಪತ್ರಿಕಾಗೋಷ್ಠಿಯಲ್ಲಿ ಅವರು (ವಿಜಯೇಂದ್ರ) ರಾಜ್ಯದ ಜನರ ಸಮಸ್ಯೆ, ಸಂಕಷ್ಟ, ಕಾಂಗ್ರೆಸ್ ದುರಾಡಳಿತದ ಬಗ್ಗೆ ಮಾತನಾಡುವ ಬದಲು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಬಣ ಪ್ರಯತ್ನಿಸುತ್ತಿದೆ ಎಂದು ಡಿ ಕೆ ಶಿವಕುಮಾರ್ ಪರ ವಕಾಲತು ವಹಿಸಿದ್ದಾರೆ. ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ವಿಚಾರವನ್ನು, ಕಾಂಗ್ರೆಸ್ಸಿನ ಬಣ ರಾಜಕಾರಣವನ್ನು ಮಾತನಾಡಲು ಜನಾಂದೋಲನ ಮಾಡಬೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಅಲ್ಲದೆ, ಮತ್ತೊಂದು ಪಕ್ಷದ ಆಂತರಿಕ ವಿಷಯವನ್ನು ನೀವು ಪ್ರಸ್ತಾಪಿಸುತ್ತಿದ್ದೀರಿ, ಅವರ ಪಕ್ಷದ ಅಧ್ಯಕ್ಷರ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದೀರಿ. ಸ್ವಾಮಿ, ನಮ್ಮದೇ ಪಕ್ಷದ ಬಗ್ಗೆ ಮಾತನಾಡಿ, ನಾವು ನಿಮ್ಮನ್ನೇ ಬದಲಾಯಿಸಬೇಕು ಎಂದು ಹೋರಾಡುತ್ತಿದ್ದೇವೆ. ಅದರ ಬಗ್ಗೆನೂ ಮಾತನಾಡಿ ಎನ್ನುವ ಮೂಲಕ ಬಿ ವೈ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದರು.
ಇದೇನಾ ನಿಮ್ಮ ಬದ್ಧತೆ?
ಜೊತೆಗೆ ಸಭೆಯಲ್ಲಿ ನಾವು 'ಒನ್ ನೇಷನ್ ಒನ್ ಎಲೆಕ್ಷನ್' ಕುರಿತೂ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ರಾಜಕೀಯವಾಗಿ ಏನೇ ಹೇಳಬಹುದು. ಕೆಎಸ್ಆರ್ಟಿಸಿ, ಕೆಪಿಟಿಸಿಲ್ ಹೀಗೆ ಅನೇಕ ಸಂಸ್ಥೆಗಳು ನಷ್ಟದಲ್ಲಿವೆ. ಕರ್ನಾಟಕ ರಾಜ್ಯ ಹಾದಿ ತಪ್ಪಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯವನ್ನು ಅಧೋಗತಿರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣೆಗೆ ಮೊದಲು ಬೆಂಗಳೂರನ್ನು ಹಾಗೆ ಮಾಡುತ್ತೇವೆ, ಹೀಗೆ ಅಭಿವೃದ್ಧಿ ಮಾಡುತ್ತೇವೆ ಎಂದವರು, ಈಗೇನು ಅನ್ನುತ್ತಿದ್ದಾರೆ? ದೇವರೇ ಬಂದರೂ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚೋಕೆ ಆಗೊಲ್ಲ ಎನ್ನುತ್ತಿದ್ದಾರೆ. ಇದೇನಾ ಅವರು ಮಾಡಿದ್ದ ವಾಗ್ದಾನ? ಎಂದು ಕುಮಾರ ಬಂಗಾರಪ್ಪ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಹಣ ಬಿಡುಗಡೆಗೆ ಚುನಾವಣೆ ಬರಬೇಕು!
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸ್ಕೀಮ್ಗಳನ್ನು ಹಾಕಿಕೊಂಡು ಕೂತಿದೆ. ಆದರೆ ಚುನಾವಣೆ ಬಂದಾಗ ಗೌರವಧನ ಬಿಡುಗಡೆ ಮಾಡ್ತಾರೆ. ಈಗ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ ವೇಳೆ ಗ್ಯಾರೆಂಟಿ ಹಣ ಬಿಡುಗಡೆ ಮಾಡುತ್ತಾರೆ. ಈ ಗ್ಯಾರಂಟಿಗಳಿಗೆ ದೆಹಲಿ ಸ್ಪಷ್ಟ ಉದಾಹರಣೆಯಾಗಿದೆ. ದೆಹಲಿಯಲ್ಲಿ ಆಗಿರುವ ರಾಜಕೀಯ ಸ್ಥಿತಿ ಇಲ್ಲಿಯೂ ಆಗಬಹುದು. ಅಲ್ಲಿ ಗ್ಯಾರಂಟಿ ಸ್ಕೀಮ್ಗಳಿಂದ ಏನಾಯ್ತು? ಇಲ್ಲಿಯೂ ಅದೇ ರೀತಿ ಆಗುತ್ತದೆ ಎಂದರು.
ದೆಹಲಿ ಸೇರಿದಂತೆ ಎಲ್ಲೆಡೆ ಬಾಂಬ್ ಬ್ಲಾಸ್ಟ್ಗಳು ಆಗಿವೆ. ಬೆಂಗಳೂರಿನಲ್ಲೂ ಬಾಂಬ್ ಸ್ಫೋಟವಾಗಿವೆ. ಜಪಾನ್, ನ್ಯೂಜಿಲ್ಯಾಂಡ್, ಭೂತಾನ್ ನಂತಹ ದೇಶಗಳಲ್ಲೂ ಆಗಿವೆ. ಆದರೂ ಕೂಡ ವೋಟ್ಬ್ಯಾಂಕ್ ಮಾಡಿಕೊಳ್ಳಲು ಅಕ್ರಮ ನುಸುಳುಕೋರರಿಗೆ ಕಾಂಗ್ರೆಸ್ ಮನಸೋಇಚ್ಛೆ ದಾಖಲೆಗಳನ್ನು ಕೊಡುತ್ತಿದೆ. ಹೀಗೆಯೇ ಮಾಡಿದ್ದ ಕೆನಡಾ ರಾಜಕೀಯವಾಗಿ ಈಗ ಹೇಗೆ ಆಗಿದೆ ಎಂಬುದನ್ನು ನೋಡಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಬೇಕು ಎಂದು ಕುಮಾರ ಬಂಗಾರಪ್ಪ ಎಚ್ಚರಿಸಿದ್ದಾರೆ.