ರೈತರ ದೆಹಲಿ ಚಲೋ | ಬೆಂಗಳೂರಿನಲ್ಲೂ ಉಪವಾಸ ಸತ್ಯಾಗ್ರಹ

ದೆಹಲಿ ಚಲೋ ಹೋರಾಟ ಬೆಂಬಲಿಸಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ರೈತರು ಒಂದೊಂದು ದಿನ ಸರದಿಯಂತೆ ಉಪವಾಸ ನಡೆಸುತ್ತಿದ್ದಾರೆ. ಶನಿವಾರ ಕಲಬುರಗಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.;

Update: 2024-12-07 11:19 GMT
ಪ್ರತಿಭಟನೆ ನಡೆಸುತ್ತಿರುವ ರೈತರು.

ಪಂಜಾಬ್​ ಹಾಗೂ ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ನಡೆಸುತ್ತಿರುವ ದೆಹಲಿ ಚಲೋ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬುಬೆಳೆಗಾರರ ಸಂಘವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ದೆಹಲಿ ಚಲೋ ಹೋರಾಟ ಬೆಂಬಲಿಸಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ರೈತರು ಒಂದೊಂದು ದಿನ ಸರದಿಯಂತೆ ಉಪವಾಸ ನಡೆಸುತ್ತಿದ್ದಾರೆ. ಶನಿವಾರ ಕಲಬುರಗಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದರು.

ದೆಹಲಿಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ನೇತೃತ್ವದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ. ಚಳವಳಿನಿರತ ರೈತರ ಮೇಲೆ ಶುಕ್ರವಾರ ಅಲ್ಲಿನ ಪೊಲೀಸರು ಅಶ್ರುವಾಯು ಸಿಡಿಸಿ, ಜಲ ಫಿರಂಗಿ ಪ್ರಯೋಗ ಮಾಡಿದ್ದಾರೆ. ಇದರಿಂದ ರೈತರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ರೈತರ ಮೇಲಿನ ಪೊಲೀಸ್ ದಬ್ಬಾಳಿಕೆ ಖಂಡನೀಯ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಸಂಘಟನೆಯಾಗಿದ್ದು, ಡಿ.9 ರಂದು ದೇಶದ ಎಲ್ಲ ಸಂಸದರ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಲಿದೆ. ಅಂತೆಯೇ ಕರ್ನಾಟಕದಲ್ಲೂ ಎಲ್ಲ ಸಂಸದರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.

ಉಪವಾಸ ಸತ್ಯಾಗ್ರಹದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ರಮೇಶ ಹೂಗರ್, ರಾಜ್ಯ ಉಪಾಧ್ಯಕ್ಷ ಬಸವರಾಜ್ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್, ಬಿಜಾಪುರ ಜಿಲ್ಲಾ ರಾಜುಗುಂದಗಿ, ಧರೆಯಪ್ಪಗೌಡ, ಬಸವರಾಜ್ ವಾಳಿ, ಸುಭಾಷ್ ಆಲಾದಿ, ರಾಜಾಹುಲಿ ಇತರರು ಭಾಗವಹಿಸಿದ್ದರು.

ರೈತರ ಬೇಡಿಕೆಗಳೇನು?

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು.

ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು

ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.

60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು.

ರೈತರ ಮೇಲೆ ಇರುವ ಕೇಸುಗಳನ್ನು ವಾಪಸ್ ಪಡೆಯಬೇಕು.

ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು.

ಸರದಿಯಂತೆ ಜಿಲ್ಲಾವಾರು ಪ್ರತಿಭಟನೆ

ಡಿ.8 ಮೈಸೂರು ಜಿಲ್ಲೆ, ಡಿ.9ರಂದು ಧಾರವಾಡ, 10ರಂದು ಹಾಸನ ಜಿಲ್ಲೆ, 11ರಂದು ಗದಗ ಜಿಲ್ಲೆ, 12ರಂದು ಚಾಮರಾಜನಗರ ಜಿಲ್ಲೆ,13ರಂದು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ರೈತರು, 14ರಂದು ಬೆಳಗಾವಿ ಜಿಲ್ಲೆ, 15ರಂದು ದಾವಣಗೆರೆ ಜಿಲ್ಲೆಯ ರೈತರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

Tags:    

Similar News