ಬಿಸಿಲಾಘಾತ | ಹುಷಾರು... ಇಂದಿನಿಂದ ಕರ್ನಾಟಕ ʼಮರುಭೂಮಿʼ!

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ಬಿಸಿಲಿ ಧಗೆಗೆ ಜನ ಹೈರಾಣಾಗಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆ ಬಿಸಿಗಾಳಿ(ಹೀಟ್‌ ವೇವ್) ಎಚ್ಚರಿಕೆ ನೀಡಿದೆ. ಅಲ್ಲದೇ ಮಳೆಯೂ..;

Update: 2024-04-01 14:37 GMT
ಕರ್ನಾಟಕ ಹವಾಮಾನ ವರದಿ

ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಮುಂದುವರಿದಿದ್ದು, ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಭಾರತದ ರಾಜ್ಯಗಳಿಗೆ ತುಲನೆ ಮಾಡಿದರೆ ರಾಜಸ್ಥಾನದ ಮರುಭೂಮಿಯ ಹೆಬ್ಬಾಗಿಲು ಚುರು ನಗರದಲ್ಲಿ ಅತ್ಯಧಿಕ ಅಂದರೆ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇರುತ್ತದೆ. ಆದರೆ, ರಾಜಸ್ಥಾನವನ್ನೂ ಕರ್ನಾಟಕ ಮೀರಲಿದೆಯೇ?

ಹಾಗೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಬಂದಿದೆ. ಮಂಗಳವಾರದಿಂದ (ಏ. 2)  ಶುಕ್ರವಾರ(ಏ. 5)ದವರೆಗೆ ನಾಲ್ಕು ದಿನಗಳ ಕಾಲ ಕರ್ನಾಟಕದ ಕೆಲವೆಡೆ ಬಿಸಿಗಾಳಿ ಅಲೆ ಬೀಸಲಿದ್ದು, ಬರೋಬ್ಬರಿ 50 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ (Meteorological Department Report) ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಗಾಳಿ ಅಲೆಯ ಎಚ್ಚರಿಕೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲಿ ಧಗೆಗೆ ಜನ ಹೈರಾಣಾಗಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆ ಬಿಸಿಗಾಳಿಯ ತೀವ್ರತೆ ಬಗ್ಗೆ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಹೆಚ್ಚಳವಾಗುತ್ತಿದ್ದು, ಏ.2ರಂದು (ಮಂಗಳವಾರ) ರಾಜ್ಯದ ಹಲವು ಭಾಗದಲ್ಲಿ ಗರಿಷ್ಠ ತಾಪಮಾನ ಪ್ರಮಾಣವು ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಪ್ರತ್ಯೇಕವಾಗಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 50 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಪಮಾನದ ಎಚ್ಚರಿಕೆ

ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ವಿಜಯಪುರದಲ್ಲಿ ಏ.1ರಿಂದ ಏ.5ರ ವರೆಗೆ ಬಿಸಿಗಾಳಿ(ಹೀಟ್‌ ವೇವ್) ಅಲೆಯ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ‌

ಮುಂದಿನ 2 ದಿನಗಳಲ್ಲಿ ಬೆಳಗಾವಿ, ಬೀದರ್, ಗದಗ, ಧಾರವಾಡ, ಹಾವೇರಿ ಮತ್ತು ರಾಯಚೂರು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ರಾಜ್ಯದಾದ್ಯಂತ ಬಹುತೇಕ ಪ್ರದೇಶದಲ್ಲಿ ಒಣಹವೆ ಮುಂದುವರಿದಿದ್ದು, ಇನ್ನೆರಡು ದಿನ ಮಳೆ ಸಾಧ್ಯತೆ ಇಲ್ಲ. ಬೆಂಗಳೂರಿನಲ್ಲಿ ಬೆಳಿಗ್ಗೆ ಭಾಗಶಃ ಮೋಡವಿರಲಿದ್ದು, ಮಧ್ಯಾಹ್ನ ಮತ್ತು ಸಂಜೆ ವೇಳೆ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ 35 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಏ.6 ಮತ್ತು 7ರಂದು ರಾಜ್ಯದಲ್ಲಿ ಮಳೆ

ಏ.6ಕ್ಕೆ ಕರ್ನಾಟಕದ ದಕ್ಷಿಣಕನ್ನಡ, ಉಡುಪಿ, ಬೀದರ್, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. 

ಏ.7ಕ್ಕೆ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.  

ಬಿಸಿಲಿನ ಝಳ; ಸರ್ಕಾರದ ಆರೋಗ್ಯ ಸಲಹೆ

* ತೆಳುವಾಗಿರುವ ಕಾಟನ್‌ ಬಟ್ಟೆ ಧರಿಸಿ

* ಮದ್ಯಪಾನ ಬೇಡ

* ಹೆಚ್ಚು ನೀರು ಕುಡಿಯಿರಿ

* ಬಿಸಿಲಿನಲ್ಲಿ ಓಡಾಡಬೇಡಿ

* ಆರೋಗ್ಯಕರ ಆಹಾರ ಸೇವಿಸಿ.

Tags:    

Similar News