ಹುಬ್ಬಳ್ಳಿಯಲ್ಲಿ ರೌಡಿ ಶೀಟರ್​ ಕಾಲಿಗೆ ಗುಂಡು

ಹಲ್ಲೆ ಪ್ರಕರಣವೊಂದರ ವಿಚಾರಣೆಗಾಗಿ ಪೊಲೀಸರು ರೌಡಿ ಮಲಿಕ್ ಆದೋನಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ವಿಚಾರಣೆಯ ಸಮಯದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ಷಣೆಗಾಗಿ ಅವರು ಗುಂಡು ಹಾರಿಸಿದ್ದಾರೆ.;

Update: 2025-04-08 05:31 GMT

ಹುಬ್ಬಳ್ಳಿಯ ಆನಂದನಗರದ ಹೊರವಲಯದಲ್ಲಿ ಏಪ್ರಿಲ್ 7ರಂದು ಪೊಲೀಸರ ಗುಂಡಿನ ಸದ್ದು ಮೊಳಗಿದೆ. ರೌಡಿಶೀಟರ್ ಮಲಿಕ್ ಆದೋನಿ ಎಂಬಾತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಆತನನ್ನು ಬಂಧಿಸಿರುವ ಘಟನೆ ನಡೆದಿದೆ. ಹಳೆ ಹುಬ್ಬಳ್ಳಿ ಠಾಣೆಯ ಪಿಎಸ್ಐ ವಿಶ್ವನಾಥ್ ಅವರು ಆತ್ಮರಕ್ಷಣೆಗಾಗಿ ಮಲಿಕ್‌ನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈ ಘಟನೆಯ ಹಿನ್ನೆಲೆಯಲ್ಲಿ, ಏಪ್ರಿಲ್ 6ರಂದು ರಾತ್ರಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯೊಂದು ನಡೆದಿತ್ತು. ಈ ಪ್ರಕರಣದ ವಿಚಾರಣೆಗಾಗಿ ಪೊಲೀಸರು ಮಲಿಕ್ ಆದೋನಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ವಿಚಾರಣೆಯ ಸಮಯದಲ್ಲಿ ಮಲಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನನ್ನು ತಡೆಯಲು ಪ್ರಯತ್ನಿಸಿದಾಗ, ಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಪಿಎಸ್ಐ ವಿಶ್ವನಾಥ್ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಪಿಎಸ್ಐ ವಿಶ್ವನಾಥ್ ಹಾಗೂ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಕಲ್ಲನಗೌಡ ಮತ್ತು ಶರೀಫ್ ಗಾಯಗೊಂಡಿದ್ದಾರೆ. ಗಾಯಾಳು ಪೊಲೀಸರು ಮತ್ತು ಆರೋಪಿ ಮಲಿಕ್ ಆದೋನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗಳು ಗಂಭೀರವಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಮಲಿಕ್ ಆದೋನಿ ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.

Tags:    

Similar News