ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯನ್ನು ಎನ್‌ಕೌಂಟರ್ ಮಾಡಿದ ಪೊಲೀಸರು
ಆರೋಪಿಯನ್ನು ಬಿಹಾರದ ಪಾಟ್ನಾದ 35 ವರ್ಷದ ರಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು.;
ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಏಪ್ರಿಲ್ 13 ( ಭಾನುವಾರ) ರಂದು ನಡೆದ ಐದು ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಅತ್ಯಾಚಾರ ನಡೆದ ಬಳಿಕ ಪ್ರತಿಭಟನೆಗಳು ನಡೆದು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಭಾನುವಾರ ಸಂಜೆ ಪೊಲೀಸರು ಆರೋಪಿಯ ಪುಂಡಾಟವನ್ನು ತಡೆಯಲಾಗದೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಆರೋಪಿಯನ್ನು ಬಿಹಾರದ ಪಾಟ್ನಾದ 35 ವರ್ಷದ ರಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದಾಗ, ರಿತೇಶ್ ತಾನು ದೇಶದ ವಿವಿಧ ನಗರಗಳಲ್ಲಿ ಸಂಚರಿಸುತ್ತಿದ್ದು, ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ಆತನ ಗುರುತನ್ನು ಖಚಿತಪಡಿಸಲು ಆತನ ವಾಸಸ್ಥಳಕ್ಕೆ ಕರೆದೊಯ್ಯುತ್ತಿರುವಾಗ, ರಿತೇಶ್ ಕುಮಾರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೆ, ಪೊಲೀಸರ ಮೇಲೆ ಕಲ್ಲು ಎಸೆದು, ವಾಹನಗಳಿಗೆ ಹಾನಿಮಾಡಿ, ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ, ಸಬ್-ಇನ್‌ಸ್ಪೆಕ್ಟರ್ ಅನ್ನಪೂರ್ಣಾ ಅವರು ಆತನ ಕಾಲು ಮತ್ತು ಎದೆಗೆ ಗುಂಡು ಹಾರಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ.
ಪೊಲೀಸರು ಹೇಳುವುದೇನು?
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಈ ಕುರಿತು ಮಾಹಿತಿ ನೀಡಿದ್ದು., ಬಾಲಕಿಯ ತಾಯಿ ಮನೆಗೆಲಸ ಮಾಡುತ್ತಿದ್ದರು ಮತ್ತು ತಮ್ಮ ಮಗಳನ್ನು ಜೊತೆಗೆ ಕರೆದೊಯ್ದು ಆಟಕ್ಕೆ ಬಿಟ್ಟಿದ್ದರು. ಆಕೆ ಆಟವಾಡುತ್ತಿರುವಾಗ ಆರೋಪಿಯು ಬಾಲಕಿಯನ್ನು ಅಪಹರಿಸಿ ಕರೆದೊಯ್ದು ಸಮೀಪದ ಕಾಲೇಜಿನ ಹಿಂಭಾಗದ ತಗ್ಗು ಪ್ರದೇಶದ ತಗ್ಗಿನ ಶೆಡ್‌ನಲ್ಲಿ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ್ದ.
ಈ ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಎನ್‌ಕೌಂಟರ್‌ನ ನಂತರ, ಕೆಲವು ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.