ಹುಬ್ಬಳ್ಳಿ ಎನ್ಕೌಂಟರ್‌ ಪ್ರಕರಣ, ಮೃತಪಟ್ಟ 21 ದಿನಗಳ ನಂತರ ಆರೋಪಿಯ ಅಂತ್ಯಕ್ರಿಯೆ

ಏಪ್ರಿಲ್‌ 13 ರಂದು ಚಾಕೋಲೆಟ್‌ ಆಸೆ ತೋರಿಸಿ ಬಾಲಕಿ ಅಪಹರಿಸಿದ್ದ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಪೊಲೀಸರ ವಶದಲ್ಲಿದ್ದಾಗಲೆ ಆರೋಪಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.;

Update: 2025-05-04 06:46 GMT

ಎನ್‌ಕೌಂಟರ್‌ ನಡೆದ ಸ್ಥಳ ಹಾಗೂ ಪಿಎಸ್‌ಐ ಅನ್ನಪೂರ್ಣ.

ಪೊಲೀಸ್​ ಎನ್​ಕೌಂಟರ್​​ನಲ್ಲಿ ಮೃತಪಟ್ಟಿದ್ದ ಬಾಲಕಿಯ ಅತ್ಯಾಚಾರ ಅರೋಪಿ ರಿತೇಶ್‌ ಕುಮಾರ್‌ನ  ಅಂತ್ಯಕ್ರಿಯೆ 21 ದಿನಗಳ ಬಳಿಕ ಶನಿವಾರ ನಡೆದಿದೆ.

ಏಪ್ರಿಲ್‌ 13 ರಂದು ಚಾಕೋಲೆಟ್‌ ಆಸೆ ತೋರಿಸಿ ಬಾಲಕಿ ಅಪಹರಿಸಿದ್ದ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಪೊಲೀಸರ ವಶದಲ್ಲಿದ್ದಾಗಲೆ ಆರೋಪಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪಿಎಸ್‌ಐ ಅನ್ನಪೂರ್ಣ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಗುಂಡು ತಗುಲಿದ್ದ ಆರೋಪಿ ರಿತೇಶ್‌ ಕುಮಾರ್‌ ಮೃತಪಟ್ಟಿದ್ದ. 

ಬಿಹಾರ ಮೂಲದ ಕಾರ್ಮಿಕ ಮೃತ ರಿತೇಶ್‌ಕುಮಾರ್‌ ಎನ್‌ಕೌಂಟರ್‌ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣಕ್ಕೆ ಮೃತದೇಹ ಪ್ರಮುಖ ಸಾಕ್ಷ್ಯ ಆದ್ದರಿಂದ ಮೃತದೇಹವನ್ನು ಸಂರಕ್ಷಿಸಿಡಬೇಕು ಎಂದು ಕೋರಲಾಗಿತ್ತು.

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಶವವನ್ನು ಸಂರಕ್ಷಿಸಿಡಲಾಗಿತ್ತು. ಆದರೆ ಇತ್ತೀಚೆಗೆ ಶವ ಕೊಳೆಯಲು ಪ್ರಾರಂಭವಾದ್ದರಿಂದ ಆದಷ್ಟು ಬೇಗ ಅಂತ್ಯಕ್ರಿಯೆ ಮಾಡಬೇಕೆಂದು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ವೈದ್ಯರು ಪೊಲೀಸರಿಗೆ ವರದಿ ನೀಡಿದ್ದರು. ಈಗಾಗಲೇ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಲಾಗಿದ್ದು, ಶವವನ್ನು ಸುಡುವುದಿಲ್ಲ ಬದಲಾಗಿ ಮಣ್ಣು ಮಾಡಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಕೋರ್ಟ್‌ ಆದೇಶದನ್ವಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ರಿತೇಶ್‌ ಕುಮಾರ್‌ ಶವವನ್ನು ಶನಿವಾರ(ಮೇ3) ಅಂತ್ಯಕ್ರಿಯೆ ಮಾಡಲಾಗಿದೆ. 

ವಾರುಸುದಾರರ ಸುಳಿವಿಲ್ಲ

ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ಆರೋಪಿ ರಿತೇಶ್‌ ಕುಮಾರ್‌ ಬಿಹಾರ ಮೂಲದ ಕಾರ್ಮಿಕನಾಗಿದ್ದು ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರು ಆತನ ವಾರುಸುದಾರರಿಗೆ ವಿಷಯ ಮುಟ್ಟಿಸಲು ಆತನ ವಿಳಾಸಕ್ಕೆ ತೆರಳಿದರೂ ಯಾರೂ ಪತ್ತೆಯಾಗಿಲ್ಲ. ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲೂ ಆತನ ವಾರಸುದಾರರು, ಸಂಬಂಧಿಕರು ಪೊಲೀಸರಿಗೆ ಪತ್ತೆಯಾಗಿಲ್ಲ. 

ಎನ್‌ಕೌಂಟರ್ ಪ್ರಕರಣ ಸಿಐಡಿಗೆ ಹಸ್ತಾಂತರ

ರಾಜ್ಯ ಸರ್ಕಾರ ಎನ್‌ಕೌಂಟರ್‌ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಎಸ್. ಪಿ. ವೆಂಕಟೇಶ್ ನೇತೃತ್ವದಲ್ಲಿ ಡಿವೈಎಸ್‌ಪಿ ಪುನೀತ್ ಕುಮಾರ್, ಇನ್ಸ್ ಸ್ಪೆಕ್ಟರ್ ಮಂಜನಾಥ್ ನಗರಕ್ಕೆ ಆಗಮಿಸಿ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದ ಕಾಗದ ಪತ್ರ ಹಾಗೂ ದಾಖಲೆಗಳನ್ನು ಪಡೆದುಕೊಂಡಿದ್ದರು.

Tags:    

Similar News